Last Updated:
ಎತ್ತಿನ ಗಾಡಿ, ನಾಲ್ಕು ಕಂಬಗಳ ಗೋಪುರ ಹಾಗೂ ಬಾಂತಲಪ್ಪುವಿನ ಇತಿಹಾಸ ಸಾರುವ ಬರಹ ಫಲಕ ಸೆಲ್ಫೀ ಪಾಯಿಂಟ್‌ನಲ್ಲಿದೆ. ಸ್ವಚ್ಛ ಕುಂಬ್ರದ ಕಲ್ಪನೆಯಲ್ಲಿ ಈ ಸೆಲ್ಫೀ ಪಾಯಿಂಟ್ ನಿರ್ಮಾಣ ಮಾಡಲಾಗಿದೆ.
ದಕ್ಷಿಣ ಕನ್ನಡ: ಪ್ರತಿಯೊಂದು ಗ್ರಾಮ, ಊರಿನ ಹಿಂದೆ ಒಂದೊಂದು ಇತಿಹಾಸ ಇರುತ್ತದೆ. ಆದರೆ ಆ ಇತಿಹಾಸವು ಕೆಲವು ಸಂದರ್ಭಗಳಲ್ಲಿ ಕಾಲದ ಜೊತೆಗೆ ಮರೆಯಾಗುತ್ತೆ. ಆದರೆ ತಮ್ಮ ಊರಿನ ಇತಿಹಾಸ ಎಂದಿಗೂ ಅಚ್ಚಾಗಿ ಉಳಿಯಬೇಕು ಎನ್ನುವ ಉದ್ಧೇಶದಿಂದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ತಾಲೂಕಿನ ಕುಂಬ್ರ(Kumbra) ಎನ್ನುವ ಪ್ರದೇಶದಲ್ಲಿ ಅಲ್ಲಿನ ವರ್ತಕರ ಸಂಘ ಕುಂಬ್ರದ ಇತಿಹಾಸ ಸಾರುವ ಸೆಲ್ಫೀ ಪಾಯಿಂಟ್(Selfie Point) ಒಂದನ್ನು ಕುಂಬ್ರದ ಜಂಕ್ಷನ್ ನಲ್ಲಿ ನಿರ್ಮಿಸಿದೆ.
`ಪೊರ್ಲುದ ಕುಂಬ್ರ’ ಪರಿಕಲ್ಪನೆಯೊಂದಿಗೆ `ಸೆಲ್ಪೀ ಪಾಯಿಂಟ್’ ನಿರ್ಮಾಣದ ವಿಭಿನ್ನ ಪ್ರಯೋಗವೊಂದನ್ನು ಇಲ್ಲಿ ಮಾಡಲಾಗಿದೆ. ಮಾಣಿ-ಮೈಸೂರು ರಾಷ್ಟೀಯ ಹೆದ್ದಾರಿಯ ಕುಂಬ್ರ ಜಂಕ್ಷನ್ ಬಳಿಯ ಅಶ್ವತ್ಥ ಕಟ್ಟೆಯ ಎದುರು ಭಾಗದಲ್ಲಿ ಹೆದ್ದಾರಿ ಬದಿಯಲ್ಲಿ `ಪೊರ್ಲುದ ಕುಂಬ್ರ ಸೆಲ್ಫೀ ಪಾಯಿಂಟ್’ ಆಕರ್ಷಣೀಯವಾಗಿ ರೂಪುಗೊಂಡಿದೆ. ಕುಂಬ್ರಕ್ಕೆ ಈ ಹಿಂದೆ ಬಾಂತಲಪ್ಪು ಎಂಬ ಹೆಸರಿತ್ತು. ಬಾಂತಲಪ್ಪು ಹೆಸರು ಕಾಲಕ್ರಮೇಣವಾಗಿ ಮರೆಯಾಗಿ ಕುಂಬ್ರವಾಗಿತ್ತು.ಈ ಬಾಂತಲಪ್ಪುವಿನ (ಈಗಿನ ಕುಂಬ್ರದ) ಇತಿಹಾಸ ಸಾರುವ ಪ್ರಯತ್ನವೂ ಈ ಸೆಲ್ಫೀ ಪಾಯಿಂಟ್ ಮೂಲಕ ನಡೆದಿದೆ.
ಎತ್ತಿನ ಗಾಡಿ, ನಾಲ್ಕು ಕಂಬಗಳ ಗೋಪುರ ಹಾಗೂ ಬಾಂತಲಪ್ಪುವಿನ ಇತಿಹಾಸ ಸಾರುವ ಬರಹ ಫಲಕ ಸೆಲ್ಫೀ ಪಾಯಿಂಟ್‌ನಲ್ಲಿದೆ. ಸ್ವಚ್ಛ ಕುಂಬ್ರದ ಕಲ್ಪನೆಯಲ್ಲಿ ಈ ಸೆಲ್ಫೀ ಪಾಯಿಂಟ್ ನಿರ್ಮಾಣ ಮಾಡಲಾಗಿದೆ. ಕುಂಬ್ರ ವರ್ತಕರ ಸಂಘದ 20 ನೇ ವರ್ಷಾಚರಣೆಯ ಅಂಗವಾಗಿ ಶಾಶ್ವತ ಯೋಜನೆಯೊಂದನ್ನು ರೂಪಿಸುವ ಸಂಘದ ಕೋರಿಕೆಯ ಮೇರೆಗೆ ಪುತ್ತೂರಿನ ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಮಹಮ್ಮದ್ ಸಾದಿಕ್ ಹಾಜಿ ಅವರು ಕೊಡುಗೆಯಾಗಿ ಈ ಪೊರ್ಲುದ ಕುಂಬ್ರ `ಸೆಲ್ಫೀ ಪಾಯಿಂಟ್’ ಅನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ರೂ.2 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಿಕೊಡುವ ಮೂಲಕ ಕುಂಬ್ರ ಪೇಟೆಯ ಅಂದ ಹೆಚ್ಚಳಕ್ಕೊಂದು ಕಿರು ಕಾಣಿಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Mysuru: ಮೈಸೂರಿನ ಪ್ರಾಚ್ಯ ವಸ್ತು ಸಂಶೋಧನಾಲದಲ್ಲಿ ತಾಳೆಗರಿ ಹಸ್ತ ಪ್ರತಿಗಳ ಸಂಗ್ರಹ
ಸೆಲ್ಫಿ ಪಾಯಿಂಟ್‌ನಲ್ಲಿರುವ ಕುಂಬ್ರದ ಇತಿಹಾಸದ ಉಲ್ಲೇಖವಿರುವ ಬರಹ ಫಲಕದಿಂದಾಗಿ ಅಲ್ಲಿನ ಗತ ವೈಭವವನ್ನು ಅರಿತುಕೊಳ್ಳುವ ಅವಕಾಶ ಆಸಕ್ತರಿಗೆ ಸಿಕ್ಕಿದೆ. ಕುಂಬ್ರದಲ್ಲಿ ಇರಿಸಲಾಗಿರುವ ಆಕರ್ಷಕ ಶೈಲಿಯ ಸೆಲ್ಫಿ ಪಾಯಿಂಟ್ ಈ ದಾರಿಯಲ್ಲಿ ಹಾಗೂ ಹೆದ್ದಾರಿಯಲ್ಲಿ ಸಾಗುವ ಮಂದಿಯ ಗಮನ ಸೆಳೆಯುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಗ್ರಾಮದ ಜನತೆಯೂ ಕೂಡ ಸೆಲ್ಫಿ ಪಾಯಿಂಟ್‌ಗೆ ಬಂದು ವೀಕ್ಷಣೆ ಮಾಡಿ, ಸೆಲ್ಫಿ ತೆಗೆದುಕೊಳ್ಳುವ ಜೊತೆಗೆ ಇತಿಹಾಸ ಬೋರ್ಡಿನಲ್ಲಿರುವ ವಿಚಾರಗಳನ್ನು ಓದಿ ಅರಿತುಕೊಳ್ಳುತ್ತಿದ್ದಾರೆ. ಇದೊಂದು ಜನತೆಯ ಗಮನ ಸೆಳೆಯುವ ವಿಭಿನ್ನ ಪ್ರಯೋಗವಾಗಿದ್ದು, ಈ ವ್ಯವಸ್ಥೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಹಿಂದೆ ಬಾಂತಲಪ್ಪು ಆಗಿದ್ದ ಕಾಲದಲ್ಲಿ ಕುಂಬ್ರ ವಿಟ್ಲ ಮತ್ತು ಪಂಜ ಸೀಮೆಯ ಗಡಿ ಪ್ರದೇಶವಾಗಿತ್ತು. ಕುಂಬ್ರದಲ್ಲಿ ಒಂದು ಗಡಿ ಕಲ್ಲು `ಬಾಂದ್ ಕಲ್ಲ್- ಕಡಪು’ ಇತ್ತು. ಹಾಗಾಗಿಯೇ ಬಾಂತಲಪ್ಪು ಹೆಸರು ಪಡೆದುಕೊಂಡಿತ್ತು. ಬಸ್ಸು ವ್ಯವಸ್ಥೆಗಳಿಲ್ಲದ ಹಿಂದಿನ ಕಾಲದಲ್ಲಿ ಈ ಭಾಗದಲ್ಲಿ ಎತ್ತಿನ ಗಾಡಿಯೇ ಜಾಸ್ತಿ ಇತ್ತು. ಮಂಗಳೂರು, ಬಂಟ್ವಾಳ ಕಡೆಯಿಂದ ಸರಕು ಸಾಮಾಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬರುತ್ತಿದ್ದ ವ್ಯಾಪಾರಿಗಳು ರಾತ್ರಿ ವೇಳೆ ಕುಂಬ್ರದಲ್ಲಿ ತಂಗುತ್ತಿದ್ದರು. ಮಡಿಕೇರಿ, ಸಂಪಾಜೆ, ಸುಳ್ಯ ಕಡೆಯಿಂದ ಕೃಷಿ ಉತ್ಪನ್ನಗಳನ್ನು ಹೇರಿಕೊಂಡು ಬರುತ್ತಿದ್ದ ಎತ್ತಿನಗಾಡಿಗಳು ಕುಂಬ್ರದಲ್ಲಿ ತಂಗುತ್ತಿದ್ದವು. ಹೆಚ್ಚಿನ ವ್ಯಾಪಾರಿಗಳು ಅಲ್ಲಿ ಆಹಾರ ಹಾಗೂ ಇನ್ನಿತರ ವಸ್ತುಗಳ ವ್ಯಾಪಾರ-ವ್ಯವಹಾರ- ವಿನಿಮಯ ಮಾಡಿಕೊಳ್ಳುತ್ತಿದ್ದರು. ಎತ್ತಿನ ಗಾಡಿ ನಿರ್ಮಾಣದ ಮೂಲಕ ಈ ಇತಿಹಾಸವನ್ನು ಸಾಂಕೇತಿಕವಾಗಿ ಸೆಲ್ಫಿ ಪಾಯಿಂಟ್‌ನಲ್ಲಿ ತೋರಿಸುವ ಕೆಲಸ ಆಗಿದೆ.
ಸೆಲ್ಫಿ ಪಾಯಿಂಟ್‌ನಲ್ಲಿರುವ ಸಿಮೆಂಟ್‌ನಿಂದ ನಿರ್ಮಿತ ನಾಲ್ಕು ಕಂಬಗಳ ಗೋಪುರವೂ ಆಕರ್ಷಕ ಶೈಲಿಯಲ್ಲಿದೆ. ನಾಲ್ಕು ಕಂಬಗಳಲ್ಲಿಯೂ ಚಕ್ರ, ಸ್ತಂಭ ಪದ್ಮದ ಚಿತ್ರಣವಿದೆ. ಇತಿಹಾಸ ಸಾರುವ ಸಿಮೆಂಟ್ ನಿರ್ಮಿತ ಬರಹ ಬೋರ್ಡಿನಲ್ಲಿ ದೊಡ್ಡ ಅಕ್ಷರಗಳಲ್ಲಿ ಇತಿಹಾಸವನ್ನು ದಾಖಲಿಸಲಾಗಿರುವುದರಿಂದ ಮಕ್ಕಳಿಂದ ವೃದ್ಧರ ತನಕ ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬಹುದಾಗಿದೆ.
Dakshina Kannada,Karnataka
December 03, 2024 5:42 PM IST