Last Updated:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಮಳೆಗಾಲದಲ್ಲಿ ಕೆಟ್ಟು ಹೋಗುವ ರಸ್ತೆಗಳ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಇಂಟರ್ ಲಾಕ್ ಅಳವಡಿಸಿ ರಸ್ತೆ ನಿರ್ಮಾಣ ಮಾಡಿದೆ.
ದಕ್ಷಿಣ ಕನ್ನಡ: ಮಳೆಗಾಲದಲ್ಲಿ (Rainy Season) ರಸ್ತೆಗಳು (Road) ಕೆಟ್ಟು ಹೋಗೋದು ಸಾಮಾನ್ಯ. ಪ್ರತೀ ಬಾರಿಯೂ ಕೆಟ್ಟು ಹೋದ ರಸ್ತೆಗಳ ಗುಂಡಿ ಮುಚ್ಚೋದೇ ಸ್ಥಳೀಯ ಆಡಳಿತಕ್ಕೆ ಒಂದು ಸವಾಲಾಗಿಯೂ ಪರಿಣಮಿಸುತ್ತದೆ. ಈ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಲು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ನಗರಸಭೆ ಹೊಸ ಪ್ರಯೋಗವೊಂದನ್ನು ಅಳವಡಿಸಕ ಯಶಸ್ವಿಯಾಗಿದೆ. ಅದೇನು ಅಂತ ನೀವೇ ನೋಡಿ.
ಪ್ರತಿ ಬಾರಿಯ ಮಳೆಗೂ ಪುತ್ತೂರು ನಗರದ ಬಹುತೇಕ ಎಲ್ಲಾ ರಸ್ತೆಗಳು ಹೊಂಡ-ಗುಂಡಿಗಳಿಂದ ತುಂಬಿ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಕಿರಿ ಕಿರಿ ಉಂಟುಮಾಡುತ್ತಿತ್ತು. ಈ ಬಾರಿ ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕು ಎನ್ನುವ ಕಾರಣಕ್ಕೆ, ಕೆಟ್ಟು ಹೋಗುವ ಸ್ಪಾಟ್ ಗುರುತಿಸಿ ಆ ಸ್ಥಳದಲ್ಲಿ ಇಂಟರ್ ಲಾಕ್ ಅಳವಡಿಸಿ ರಸ್ತೆ ನಿರ್ಮಿಸಲಾಗಿದೆ. ಮನೆಗೆ ಹಾಸುವ ಇಂಟರ್ ಲಾಕ್ ನಿಂತ ಕೊಂಚ ಭಿನ್ನವಾಗಿರುವ ಈ ಇಂಟರ್ ಲಾಕ್ ಗಳ ಅಳತೆ 4 ಇಂಚಿನಷ್ಟಿದ್ದು, ಎಷ್ಟೇ ಪ್ರಮಾಣದ ಭಾರವನ್ನೂ ಹೊರುವಂತಿದೆ.
ಅಲ್ಲದೆ ಇಂಟರ್ ಲಾಕ್ ನ ಬೆಡ್ ಗೆ ಸಾಮಾನ್ಯವಾಗಿ ಎಂ.ಸ್ಯಾಂಡ್ ಅನ್ನೇ ಬಳಸಲಾಗುತ್ತಿದ್ದರೂ, ಇಲ್ಲಿ ಮಾತ್ರ ಮರಳನ್ನೇ ಬಳಸಲಾಗಿದೆ. ಎಂ.ಸ್ಯಾಂಡ್ ಮೇಲೆ ಹೆಚ್ಚಿನ ಒತ್ತಡ ಬಿದ್ದಾಗ ಅವುಗಳು ಪುಡಿಯಾಗಿ ಇಂಟರ್ ಲಾಕ್ ಗಳು ಕುಸಿಯುವ ಕಾರಣಕ್ಕಾಗಿ ಇಲ್ಲಿ ಮರಳಿನ ಮೇಲೆಯೇ ಇಂಟರ್ ಲಾಕ್ ಫಿಕ್ಸ್ ಮಾಡಲಾಗಿದೆ.
ಮಳೆ ಬಂದಲ್ಲಿ ಮತ್ತೆ ಕೆಟ್ಟು ಹೋದ ರಸ್ತೆಯನ್ನು ಸರಿಪಡಿಸಲು ಮಳೆ ಕಡಿಮೆಯಾಗುವ ತನಕ ಕಾಯಬೇಕಾಗಿತ್ತು. ಆದರೆ ಇಂಟರ್ ಲಾಕ್ ಅನ್ನು ಎಷ್ಟೇ ಮಳೆ ಬರುವ ಸಂದರ್ಭದಲ್ಲೂ ಹಾಕಿ ರಸ್ತೆ ದುರಸ್ತಿ ಮಾಡಬಹುದಾಗಿದೆ. ಈ ರೀತಿ ತಿರುವು ರಸ್ತೆಗಳಲ್ಲಿ ಇಂತಹ ಇಂಟರ್ ಲಾಕ್ ಗಳನ್ನು ಕೇರಳ ರಾಜ್ಯದಲ್ಲಿ ಹಲವು ಕಡೆ ಹಾಕಲಾಗಿದ್ದರೂ, ಪುತ್ತೂರಿನಲ್ಲಿ ಹಾಕಲಾದ ಈ ಇಂಟರ್ ಲಾಕ್ ರಸ್ತೆಗೆ ಗಲ್ಫ್ ರಾಷ್ಟ್ರಗಳ ಮಾಡೆಲ್ ಗಳೇ ಕಾರಣ.
ಸದ್ಯ ನಗರಸಭೆಯ ಉಪಾಧ್ಯಕ್ಷರಾಗಿರುವ ಮತ್ತು ಸಿವಿಲ್ ಇಂಜಿನಿಯರ್ ಕೂಡಾ ಆಗಿರುವ ಬಾಲಚಂದ್ರ ಅವರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಇದೇ ರೀತಿಯ ರಸ್ತೆಗಳ ನಿರ್ಮಾಣದಲ್ಲಿ ಪಳಗಿದ್ದರು. ಈ ಕಾರಣಕ್ಕೆ ಪ್ರತಿಬಾರಿಯೂ ಮಳೆಗೆ ಹಾನಿಯಾಗುವ ರಸ್ತೆಗೆ ಗಲ್ಫ್ ಮಾದರಿಯಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
Dakshina Kannada,Karnataka
August 03, 2025 4:13 PM IST