Last Updated:
13 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಅಶ್ವಿನ್ 106 ಟೆಸ್ಟ್ ಪಂದ್ಯಗಳನ್ನು ಆಡಿ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದು ಭಾರತದ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳ ದಾಖಲೆಯಾಗಿದೆ. ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ದಿಗ್ಗಜ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ (Ravichandran Ashwin) ತಮ್ಮ ದಿಢೀರ್ ನಿವೃತ್ತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. 2024-25ರ ಆಸ್ಟ್ರೇಲಿಯಾ ಪ್ರವಾಸದ (Australia Tour)ಮಧ್ಯದಲ್ಲಿ, ಬಾರ್ಡರ್-ಗವಾಸ್ಕರ್ ಟ್ರೋಫಿಯ (Border Gavaskar Trophy) ಮೂರನೇ ಟೆಸ್ಟ್ ಪಂದ್ಯದ ನಂತರ ಇದ್ದಕ್ಕಿದ್ದಂತೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಿಸಿದ್ದರು. ಈ ನಿರ್ಧಾರವು ಕ್ರಿಕೆಟ್ ಜಗತ್ತನ್ನು ಆಶ್ಚರ್ಯಕ್ಕೀಡುಮಾಡಿತ್ತು. ಇದೀಗ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಜಿ ಭಾರತೀಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಸಂವಾದದಲ್ಲಿ, ಅಶ್ವಿನ್ ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.
ಅಶ್ವಿನ್ ಅವರ ಪ್ರಕಾರ, ವಯಸ್ಸು, ತಂಡದ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯದಿರುವುದು ಮತ್ತು ವಿದೇಶಿ ಪ್ರವಾಸಗಳಲ್ಲಿ ಬೆಂಚ್‌ನಲ್ಲಿ ಕುಳಿತುಕೊಳ್ಳಬೇಕಾದ ಸನ್ನಿವೇಶಗಳು ತಮ್ಮನ್ನ ಬೇಸರಗೊಳಿಸಿತು. “ವಯಸ್ಸಾಗುವುದರ ಜೊತೆಗೆ, ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಭಾವಿಸಿದೆ. ವಿದೇಶಿ ಪ್ರವಾಸಗಳಲ್ಲಿ ಆಡದೆ ಬೆಂಚ್‌ನಲ್ಲಿ ಕುಳಿತುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ತಂಡಕ್ಕೆ ಕೊಡುಗೆ ನೀಡಲು ನನಗೆ ಆಸಕ್ತಿ ಇದ್ದರೂ, ಈ ಸಮಯವನ್ನು ನನ್ನ ಕುಟುಂಬದೊಂದಿಗೆ ಕಳೆಯುವುದು ಒಳ್ಳೆಯದು ಎಂದು ತೀರ್ಮಾನಿಸಿದೆ,” ಎಂದು ಅವರು ರಾಹುಲ್ ದ್ರಾವಿಡ್‌ಗೆ ತಿಳಿಸಿದ್ದಾರೆ.
38 ವರ್ಷದ ಅಶ್ವಿನ್ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಲು ಬಯಸಿದ್ದಾರೆ. “ನಾನು ನನ್ನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ. ಅವರು ಬೆಳೆಯುತ್ತಿದ್ದಾರೆ, ಮತ್ತು ಈ ಸಮಯವನ್ನು ಅವರೊಂದಿಗೆ ಕಳೆಯುವುದು ಮುಖ್ಯ ಎನಿಸಿತು,” ಎಂದು ಅವರು ಹೇಳಿದ್ದಾರೆ. 34-35 ವಯಸ್ಸಿನಿಂದಲೇ ನಿವೃತ್ತಿಯ ಆಲೋಚನೆಗಳು ಬರುತ್ತಿದ್ದವು, ಕೊನೆಗೆ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಈ ತೀರ್ಮಾನವನ್ನು ಫೈನಲ್ ಮಾಡಿದೆ ಎಂದಿದ್ದಾರೆ.
13 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಅಶ್ವಿನ್ 106 ಟೆಸ್ಟ್ ಪಂದ್ಯಗಳನ್ನು ಆಡಿ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದು ಭಾರತದ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳ ದಾಖಲೆಯಾಗಿದೆ (ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ). ಇದರ ಜೊತೆಗೆ, ಅವರು 8 ಟೆಸ್ಟ್ ಶತಕಗಳನ್ನು ಗಳಿಸಿದ್ದು, ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಮತ್ತು 2014ರ ಟಿ20 ವಿಶ್ವಕಪ್‌ನಂತಹ ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2024-25ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತವು ಐದು ಟೆಸ್ಟ್ ಪಂದ್ಯಗಳನ್ನು ಆಡಿತು. ಆದರೆ, ಅಶ್ವಿನ್‌ಗೆ ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಅವಕಾಶ ಸಿಕ್ಕಿತು. ರವೀಂದ್ರ ಜಡೇಜಾ ಮತ್ತು ವಾಶಿಂಗ್ಟನ್ ಸುಂದರ್‌ರಂತಹ ಆಲ್‌ರೌಂಡರ್‌ಗಳಿಗೆ ಆದ್ಯತೆ ನೀಡಲಾಯಿತು, ಇದರಿಂದ ಅಶ್ವಿನ್ ಮೂರನೇ ಟೆಸ್ಟ್‌ನಲ್ಲಿ ಆಡದೆ ಬೆಂಚ್‌ನಲ್ಲಿ ಕುಳಿತಿದ್ದರು. ಈ ಸನ್ನಿವೇಶವು ಅವರ ನಿವೃತ್ತಿ ನಿರ್ಧಾರಕ್ಕೆ ಪ್ರಮುಖ ಕಾರಣವಾಯಿತು. “ನಾನು ತಂಡದ ಜೊತೆಗಿರಬೇಕಾದರೆ, ಆಡುವ ಅವಕಾಶವನ್ನು ಬಯಸುತ್ತೇನೆ. ಕೇವಲ ತಂಡದ ಜೊತೆ ಸುತ್ತಾಡುವುದಕ್ಕಿಂತ, ಮನೆಗೆ ಮರಳಿ ಕುಟುಂಬದೊಂದಿಗೆ ಇರುವುದು ಒಳ್ಳೆಯದು,” ಎಂದು ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಅಶ್ವಿನ್ ತಮ್ಮ ಬೌಲಿಂಗ್‌ನಲ್ಲಿ ವೈವಿಧ್ಯತೆಯಿಂದ ಪ್ರಸಿದ್ಧರಾಗಿದ್ದರು. ಕೇರಮ್ ಬಾಲ್, ಆಫ್-ಸ್ಪಿನ್, ಮತ್ತು ದೂಸ್ರಾದಂತಹ ವಿಭಿನ್ನ ಟೆಕ್ನಿಕ್ಗಳಿಂದ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಭಾರತದಲ್ಲಿ ಅವರ ಪ್ರದರ್ಶನ ಅತ್ಯದ್ಭುತವಾಗಿತ್ತು, ಆದರೆ ವಿದೇಶಿ ನೆಲದಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ 22 ಟೆಸ್ಟ್ ಪಂದ್ಯಗಳಲ್ಲಿ 115 ವಿಕೆಟ್‌ಗಳನ್ನು ಪಡೆದಿದ್ದರು.
ನಿವೃತ್ತಿಯ ನಂತರ, ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ಕಾಮೆಂಟರಿ ಕೆಲಸದ ಮೂಲಕ ಕ್ರಿಕೆಟ್‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ತಮಿಳುನಾಡಿನಲ್ಲಿ ಕ್ರಿಕೆಟ್ ಅಕಾಡೆಮಿಯೊಂದಿಗೆ ಯುವ ಆಟಗಾರರಿಗೆ ತರಬೇತಿ ನೀಡುವ ಯೋಜನೆಯಲ್ಲೂ ತೊಡಗಿದ್ದಾರೆ. “ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಈಗ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ಕೊಡುಗೆ ನೀಡಲು ಬಯಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
August 22, 2025 5:04 PM IST