ಅಕ್ಟೋಬರ್ 2025 ರಿಂದಲೇ RAM ಬೆಲೆಗಳು ದ್ವಿಗುಣಗೊಂಡಿದ್ದು, 2026ರ ಹೊತ್ತಿಗೆ ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ತಂತ್ರಜ್ಞಾನ ತಜ್ಞರ ಪ್ರಕಾರ, ಈ ಬೆಲೆ ಏರಿಕೆಗೆ ಪ್ರಮುಖ ಕಾರಣ AI (ಕೃತಕ ಬುದ್ಧಿಮತ್ತೆ) ಆಧಾರಿತ ಡೇಟಾ ಸೆಂಟರ್‌ಗಳ ವೇಗದ ಬೆಳವಣಿಗೆ ಮೂಲ ಕಾರಣವಾಗಿದೆ. ಕಂಪ್ಯೂಟರ್ ತಯಾರಕ ಸಂಸ್ಥೆ ಸೈಬರ್‌ಪವರ್ ಪಿಸಿಯ ಜನರಲ್ ಮ್ಯಾನೇಜರ್ ಸ್ಟೀವ್ ಮೇಸನ್ ಹೇಳುವಂತೆ, ಕೆಲವೇ ತಿಂಗಳುಗಳ ಹಿಂದೆ ಇದ್ದ ಬೆಲೆಗಿಂತ ಈಗ ನಮಗೆ ಸುಮಾರು ಶೇ.500 ಪ್ರತಿಶತ ಹೆಚ್ಚಾದ ದರದಲ್ಲಿ RAM ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ತಯಾರಕರು ಸಾಧನಗಳ ಅಂತಿಮ ಬೆಲೆಯನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದಿದ್ದಾರೆ.
RAM ಎಂದರೆ ಕೇವಲ ಒಂದು ಭಾಗವಲ್ಲ. ಯಾವುದೇ ಸಾಧನದಲ್ಲಿ ಕೋಡ್ ಕಾರ್ಯನಿರ್ವಹಿಸಲು, ಅಪ್ಲಿಕೇಶನ್ ತೆರೆಯಲು, ನೀವು ಈಗ ಈ ಸುದ್ದಿಯನ್ನು ಓದಲು ಸಾಧ್ಯವಾಗುವುದಕ್ಕೂ RAM ಅಗತ್ಯ. RAM ಇಲ್ಲದೆ, ಕಂಪ್ಯೂಟರ್ ಕೇವಲ ಕಬ್ಬಿಣದ ಡಬ್ಬೆಯಷ್ಟೇ.
ಪಿಸಿ ಸ್ಪೆಷಲಿಸ್ಟ್ ಸಂಸ್ಥೆಯ ಡ್ಯಾನಿ ವಿಲಿಯಮ್ಸ್ ಪ್ರಕಾರ, 2026ರ ವರೆಗೂ RAM ಬೆಲೆ ಏರಿಕೆಯಾಗುತ್ತಲೇ ಇರಲಿದೆ. 2025ರಲ್ಲಿ ಮೆಮೊರಿ ಮಾರುಕಟ್ಟೆ ಅತೀವ ವೇಗದಲ್ಲಿ ಬೆಳೆದಿದೆ. ಬೆಲೆಗಳು ನಿಯಂತ್ರಣಕ್ಕೆ ಬರದಿದ್ದರೆ, ಬಳಕೆದಾರರು ಹೊಸ ಸಾಧನಗಳನ್ನು ಖರೀದಿಸುವುದನ್ನೇ ಮುಂದೂಡಬಹುದು.
RAM ತಯಾರಕರಲ್ಲೂ ಅಸಮಾನ ಪರಿಸ್ಥಿತಿ ಇದೆ. ಕೆಲ ಕಂಪನಿಗಳ ಬಳಿ ಹೆಚ್ಚುವರಿ ಸ್ಟಾಕ್ ಇರುವುದರಿಂದ ಅವರು ಬೆಲೆಯನ್ನು ಒಂದೂವರೆ ಅಥವಾ ಎರಡು ಪಟ್ಟು ಹೆಚ್ಚಿಸಿದ್ದಾರೆ. ಆದರೆ ಸ್ಟಾಕ್ ಕೊರತೆಯಿರುವ ತಯಾರಕರು ಐದು ಪಟ್ಟು ಬೆಲೆ ಏರಿಕೆ ಮಾಡಿದ್ದಾರೆ.
ಚಿಪ್ ವಾರ್ಸ್ ಪುಸ್ತಕದ ಲೇಖಕ ಕ್ರಿಸ್ ಮಿಲ್ಲರ್ ಪ್ರಕಾರ, AIಗೆ ಬೇಕಾಗುವ ಉನ್ನತ ಮಟ್ಟದ ಮತ್ತು ಹೆಚ್ಚಿನ ಬ್ಯಾಂಡ್‌ವಿಡ್ತ್ ಮೆಮೊರಿ ಚಿಪ್‌ಗಳೇ ಈ ಬೆಲೆ ಏರಿಕೆಗೆ ಮೂಲ ಕಾರಣ. AI ಬೆಳವಣಿಗೆ ಜಗತ್ತಿಗೆ ಹೊಸ ಅವಕಾಶಗಳನ್ನು ನೀಡುತ್ತಿದ್ದರೂ, ಅದಕ್ಕೆ ಬೆಲೆ ಕಟ್ಟಬೇಕಾದವರು ಸಾಮಾನ್ಯ ಬಳಕೆದಾರರೇ ಎಂದು ಹೇಳಿದ್ದಾರೆ.
ಟೆಕ್ ಇನ್ಸೈಡ್ಸ್‌ನ ಮೈಕ್ ಹೊವಾರ್ಡ್ ಮಾಹಿತಿ ನೀಡುವಂತೆ, ಅಮೆಜಾನ್, ಗೂಗಲ್ ಮುಂತಾದ ದೈತ್ಯ ಕಂಪನಿಗಳು 2026–27ರ ಮೆಮೊರಿ ಅಗತ್ಯಗಳನ್ನು ಈಗಲೇ ಯೋಜಿಸುತ್ತಿವೆ. ಆದರೆ ಪೂರೈಕೆ ಆ ಮಟ್ಟಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದರಿಂದ RAM ಬೆಲೆಗಳಲ್ಲಿ ತೀವ್ರ ಏರಿಕೆ ಕಾಣುತ್ತಿದೆ. ಈಗ ಒಂದು ಸಾಮಾನ್ಯ ಕಂಪ್ಯೂಟರ್‌ನ ಒಟ್ಟು ವೆಚ್ಚದಲ್ಲಿ ಮೆಮೊರಿಯ ಪಾಲು ಶೇ. 15–20 ಇರುತ್ತಿತ್ತು. ಆದರೆ ಈಗ ಅದು ಶೇ. 30–40ರ ಮಟ್ಟ ತಲುಪಿದೆ. ಹೆಚ್ಚಿನ ಬಳಕೆದಾರರು ಈ ಬೆಲೆ ಏರಿಕೆಯನ್ನು ಭರಿಸಲು ಸಾಧ್ಯವಿಲ್ಲ, ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
2026ರ ವೇಳೆಗೆ, 16GB RAM ಹೊಂದಿರುವ ಸಾಮಾನ್ಯ ಲ್ಯಾಪ್‌ಟಾಪ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಏರಿಕೆಯಾಗಬಹುದು. ಪರಿಣಾಮವಾಗಿ, ಜನರು ಹೆಚ್ಚು ಹಣ ಪಾವತಿಸಬೇಕೇ ಅಥವಾ ಕಡಿಮೆ ಶಕ್ತಿಯ ಸಾಧನ ಬಳಸಬೇಕೇ ಎಂಬ ಕಠಿಣ ನಿರ್ಧಾರ ಎದುರಿಸಬೇಕಾಗಿದೆ. ಇನ್ನೊಂದು ಆಯ್ಕೆಯಾಗಿ, ಜನರು ತಮ್ಮ ಹಳೆಯ ಸಾಧನಗಳನ್ನು ಇನ್ನಷ್ಟು ವರ್ಷ ಬಳಸುವ ಪ್ರವೃತ್ತಿ ಹೆಚ್ಚಾಗಬಹುದು. ಆದರೆ ಡಿಜಿಟಲ್ ಅವಲಂಬನೆ ಹೆಚ್ಚುತ್ತಿರುವ ಈ ಕಾಲದಲ್ಲಿ, RAM ಬೆಲೆ ಏರಿಕೆ ಟೆಕ್ ಬದುಕಿಗೂ ದೊಡ್ಡ ಸವಾಲಾಗಿ ಉಳಿಯುವ ಲಕ್ಷಣಗಳು ಸ್ಪಷ್ಟವಾಗಿವೆ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್‌ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್‌ಲೈನ್ ಶಾಪಿಂಗ್, ಅಪ್ಲಿಕೇಶನ್‌ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
Bangalore [Bangalore],Bangalore,Karnataka
Jan 08, 2026 12:59 PM IST