Last Updated:
ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 157 ರನ್‌ಗಳಿಗೆ ನಿಯಂತ್ರಿಸಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ. ಕೃನಾಲ್ ಪಾಂಡ್ಯ, ಸುಯಾಸ್ ಶರ್ಮಾ ತಲಾ 2 ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ವಿರುದ್ಧ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಆರ್‌ಸಿಬಿ ಪಂಜಾಬ್ ತಂಡವನ್ನ ಕೇವಲ 157 ರನ್‌ಗಳಿಗೆ ನಿಯಂತ್ರಿಸಿದೆ. ಪಂಜಾಬ್ ಕಿಂಗ್ಸ್ ಪರ 33 ರನ್ಗಳಿಸಿದ ಪ್ರಭಸಿಮ್ರಾನ್ ಸಿಂಗ್, ಜೋಸ್ ಇಂಗ್ಲಿಸ್ 29, ಶಶಾಂಕ್ ಸಿಂಗ್ ಅಜೇಯ 31 ಹಾಗೂ ಮಾರ್ಕೊ ಜಾನ್ಸನ್ ಅಜೇಯ 25 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ತವರಿನಲ್ಲಿ ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಪ್ರಭಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್‌ಗೆ ಬಿರುಸಿನ ಆರಂಭ ನೀಡಿದರಾದರೂ ದೊಡ್ಡ ಮೊತ್ತದ ಜೊತೆಯಾಟ ನೀಡುವಲ್ಲಿ ವಿಫಲರಾದರು. ಐದನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಪ್ರಿಯಾಂಶ್ ಆರ್ಯ (22) ಅವರನ್ನು ಔಟ್ ಮಾಡುವ ಮೂಲಕ ಆರ್‌ಸಿಬಿಗೆ ಮೊದಲ ಬ್ರೇಕ್‌ಥ್ರೂ ನೀಡಿದರು. ನಂತರ ಪಾಂಡ್ಯ ಆರನೇ ಓವರ್‌ನಲ್ಲಿ ಪ್ರಬಸಿಮ್ರಾನ್ ಸಿಂಗ್ (33) ಅವರನ್ನು ಔಟ್ ಮಾಡಿದರು. ಪಂಜಾಬ್ ಕಿಂಗ್ಸ್ ತಂಡವು 68 ರನ್‌ಗಳಿಸಿದ್ದ ವೇಳೆ ನಾಯಕ ಶ್ರೇಯಸ್ ಅಯ್ಯರ್ ಕೇವಲ 6 ರನ್ ಗಳಿಸಿ ರೊಮಾರಿಯೋ ಶೆಫರ್ಡ್‌ಗೆ ಕ್ಯಾಚ್ ನೀಡಿ ಔಟ್ ಆದರು.
ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿ ಆಟ ನೋಡಲೆಂದೆ ನಿದ್ದೆಯಿಂದ ಎದ್ದೆ! ವೈಭವ್ ಆಟದ ಬಗ್ಗೆ ಗೂಗಲ್ ಸಿಎಒ ಪ್ರಶಂಸೆ
ಮಧ್ಯಮ ಕ್ರಮಾಂಕದ ಸಂಪೂರ್ಣ ವೈಫಲ್ಯ
ಇದಾದ ನಂತರ, ವಿರಾಟ್ ಕೊಹ್ಲಿ 9 ನೇ ಓವರ್‌ನ ಕೊನೆಯ ಎಸೆತದಲ್ಲಿ ನೆಹಾಲ್ ವಧೇರಾ (5) ಅವರನ್ನು ರನೌಟ್ ಮಾಡಿದರು. ಅಲ್ಲಿಂದ ಚೇತರಿಸಿಕೊಳ್ಳದ ಪಂಜಾಬ್ ಕಿಂಗ್ಸ್ ತಂಡ 112 ರನ್‌ಗಳ ಸ್ಕೋರ್‌ನಲ್ಲಿದ್ದಾಗ, ಸುಯಾಶ್ ಶರ್ಮಾ ಒಂದೇ ಓವರ್‌ನಲ್ಲಿ ಡಬಲ್ ಶಾಕ್ ನೀಡಿದರು. 17 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 29 ರನ್‌ಗಳಿಸಿದ್ದ ಜೋಸ್ ಇಂಗ್ಲಿಸ್ ವಿಕೆಟ್ ಪಡೆದರೆ, ಅದೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯಿನಿಸ್ ವಿಕೆಟ್ ಪಡೆದು ಮಿಂಚಿದರು.
ನಂತರ 14ನೇ ಓವರ್ನಿಂದ 20ನೇ ಓವರ್ವರೆಗೆ ಆರ್‌ಸಿಬಿ ಬೌಲರ್ಗಳು ಪಂಜಾಬ್ ಕಿಂಗ್ಸ್ ಬ್ಯಾಟರ್ಗಳನ್ನ ದೊಡ್ಡ ಹೊಡೆತ ಬಾರಿಸದಂತೆ ತಮ್ಮ ಕರಾರುವಾಕ್ ಬೌಲಿಂಗ್ ಮೂಲಕ ತಡೆದರು. ಶಶಾಂಕ್ ಸಿಂಗ್ ಹಾಗೂ ಮಾರ್ಕೊ ಜಾನ್ಸನ್ 37 ಎಸೆತಗಳಲ್ಲಿ ಕೇವಲ 43 ರನ್ಗಳಿಸಲು ಮಾತ್ರ ಸಾಧ್ಯವಾಯಿತು. ಆರ್‌ಸಿಬಿ ಬೌಲಿಮಗ್ ಪರಾಕ್ರಮ ಹೇಗಿತ್ತೆಂದರೆ ಕೊನೆಯ 7 ಓವರ್ಗಳಲ್ಲಿ ಕೇವಲ 2 ಸಿಕ್ಸರ್ ಮಾತ್ರ ಬಿಟ್ಟುಕೊಟ್ಟಿತು. ಅದರಲ್ಲೂ ಶಶಾಂಕ್ ಸಿಂಗ್ ಬ್ಯಾಟಿಂಗ್ ಮಾಡಲು ಪರದಾಡಿ 33 ಎಸೆತಗಳಲ್ಲಿ ಕೇವಲ ಒಂದೇ ಒಂದು ಫೋರ್ ಸಹಿತ 31 ರನ್ಗಳಿಸಿದರು. ಜಾನ್ಸನ್ 20 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 25ರನ್ಗಳಿಸಿ ಪಂಜಾಬ್ ಮೊತ್ತವನ್ನ 150ರ ಗಡಿ ದಾಟುವಂತೆ ಮಾಡಿದರು.
ಆರ್‌ಸಿಬಿ ಪರ ಕೃನಾಲ್ ಪಾಂಡ್ಯ, ಸುಯಾಸ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ರೊಮಾರಿಯಾ ಶೆಫರ್ಡ್ 1 ವಿಕೆಟ್ ಪಡೆದರು.
ಇದನ್ನೂ ಓದಿ: ಲಖನೌಗೆ ರೋಚಕ ಗೆಲುವು ತಂದುಕೊಟ್ಟ ಆವೇಶ್ ಖಾನ್! ಕೊನೆಯ ಓವರ್‌ನಲ್ಲಿ 9 ರನ್ ಗಳಿಸಲಾಗದೇ ಸೋತ ರಾಯಲ್ಸ್
ಮೈದಾನದ ಚೇಸಿಂಗ್ ರೆಕಾರ್ಡ್
ಈ ಮೈದಾನದಲ್ಲಿ 2023ರಿಂದ ಮೊದಲು ಬ್ಯಾಟಿಂಗ್ ಮಾಡಿರುವ ತಂಡ 170ಕ್ಕೂ ಹೆಚ್ಚು ಗಳಿಸಿದ ಸಂದರ್ಭದಲ್ಲಿ 9 ಬಾರಿ ಗೆದ್ದಿದ್ದರೆ, ಕೇವಲ ಒಮ್ಮೆ ಮಾತ್ರ ಸೋಲು ಕಂಡಿದೆ. ಆದರೆ 170ಕ್ಕಿಂತ ಕಡಿಮೆ ಸ್ಕೋರ್ ಗಳಿಸಿದ 4 ಪಂದ್ಯಗಳಲ್ಲಿ ಎಲ್ಲಾ ಚೇಸಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ.
April 20, 2025 5:13 PM IST