Last Updated:
ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ. ಕೊನೆಯ 2 ಓವರ್‌ಗಳಲ್ಲಿ ಹ್ಯಾಜಲ್ವುಡ್ ಹಾಗೂ ಯಶಸ್ ದಯಾಳ್ ಕೇವಲ 18ರನ್ಗಳನ್ನ ಡಿಫೆಂಡ್ ಮಾಡಿ ಗೆಲುವು ಸಾಧಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಜಯದ ನಗೆ ಬೀರಿದೆ. 2025ರಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡು ತವರಿನ ಅಭಿಮಾನಿಗಳ ಮುಂದೆ ನಿರಾಶೆಯನುಭವಿಸಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ. ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲ್ಲಲು 18 ರನ್‌ಗಳ ಅಗತ್ಯವಿತ್ತು. ಆದರೆ ಜೋಸ್ ಹ್ಯಾಜಲ್ ವುಡ್ 19ನೇ ಓವರ್ನಲ್ಲಿ ಕೇವಲ 1 ರನ್ ನೀಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಕೊನೆಯ ಓವರ್ನಲ್ಲಿ ಯಶಸ್ ದಯಾಳ್ ಕೇವಲ 5 ರನ್ ನೀಡಿ ಆರ್ಸಿಬಿಗೆ 11 ರನ್‌ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದೆ.
ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ 49 ಹಾಗೂ ಧ್ರುವ್ ಜುರೆಲ್ 33 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ 47 ರನ್ಗಳಿಸಿದರಾದರೂ, ಇವರ ಆಟ ತಂಡವನ್ನು ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ನಿತೀಶ್ ರಾಣಾ 28, ರಿಯಾನ್ ಪರಾಗ್ 22, ವೈಭವ್ ಸೂರ್ಯವಂಶಿ 16, ಹೆಟ್ಮೆಯರ್ 11, ಶುಭಂ ದುಬೆ 12 ರನ್ಗಳಿಸಿದರು.
ಆರ್‌ಸಿಬಿ ಪರ ಜೋಶ್ ಹ್ಯಾಜಲ್ವುಡ್ 33ಕ್ಕೆ 4, ಯಶ್ ದಯಾಳ್ 33ಕ್ಕೆ1, ಭುವನೇಶ್ವರ್ ಕುಮಾರ್ 50ಕ್ಕೆ1 ಹಾಗೂ ಕೃನಾಲ್ ಪಾಂಡ್ಯ 31ಕ್ಕೆ2 ವಿಕೆಟ್ ಪಡೆದರು ಮಿಂಚಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಪವರ್ ಪ್ಲೇ ನಲ್ಲಿ ಇಂದು ಇಂದು ವಿಕೆಟ್ ಕಳೆದುಕೊಳ್ಳದೇ ಆಡಿತು. ಈ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಆರ್‌ಸಿಬಿ ಮೊದಲ ಬಾರಿಗೆ ವಿಕೆಟ್ ಕಳೆದುಕೊಳ್ಳದೇ ಯಶಸ್ವಿಯಾಗಿ 6 ಓವರ್ ಪೂರ್ಣಗೊಳಿಸಿತ್ತು. ಆದರೆ ಫಿಲ್ ಸಾಲ್ಟ್ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ವಿಫಲರಾದರು. 23 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 26 ರನ್ಗಗಳಿಸಿ ಹಸರಂಗ ಬೌಲಿಂಗ್ನಲ್ಲಿ ಔಟ್ ಆದರು.
ಆದರೆ 2ನೇ ವಿಕೆಟ್ಗೆ ಒಂದಾದ ವಿರಾಟ್-ದೇವದತ್ ಪಡಿಕ್ಕಲ್ ಅದ್ಭುತ ಜೊತೆಯಾಟ ನೀಡಿದರು. ಇವರಿಬ್ಬರು 51 ಎಸೆತಗಳಲ್ಲಿ 95 ರನ್‌ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 73 ರನ್ಗಳಿಸಿದ್ದ ವಿರಾಟ್ ಇಂದೂ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 70 ರನ್ಗಳಿಸಿ ಜೋಫ್ರಾ ಆರ್ಚರ್ಗೆ ವಿಕೆಟ್ ನೀಡಿದರು. ದೇವದತ್ ಪಡಿಕ್ಕಲ್ ಕೂಡ ಕೊಹ್ಲಿ ಔಟ್ ಆದ ಮುಂದಿನ ಓವರ್ನಲ್ಲೇ ಸಂದೀಪ್ ಶರ್ಮಾಗೆ ವಿಕೆಟ್ ನೀಡಿದರು. ಅವರು 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 50 ರನ್ಗಳಿಸಿದರು. ಆದರೆ ನಾಯಕ ರಜತ್ ಕೇವಲ 1 ರನ್ಗಳಿಸಿ ಅದೇ ಓವರ್ನಲ್ಲಿ ಔಟ್ ಆದರು.
ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ ಹಾಗೂ ಜಿತೇಶ್ ಶರ್ಮಾ 19 ಎಸೆತಗಳಲ್ಲಿ 42 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಡೇವಿಡ್ 15 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 23 ರನ್ಗಳಿಸಿದರೆ, ಜಿತೇಶ್ ಶರ್ಮಾ 10 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ ಅಜೇಯ 20 ರನ್ಗಳಿಸಿದರು.
April 24, 2025 11:34 PM IST