Last Updated:
12 ಅಡಿ ಉದ್ದದ ಕಾಳಿಂಗ ಸರ್ಪ ಉಡವನ್ನು ತಿಂದ ಬಳಿಕ ಮನೆಯ ಪಕ್ಕದ ತೋಟದಲ್ಲಿ ತಂಗಿತ್ತು. ತೇಜಸ್ ಬನ್ನೂರು ತಂಡ ಮತ್ತು ಅರಣ್ಯ ಇಲಾಖೆ ಬಂಟಮಲೆ ಅರಣ್ಯಕ್ಕೆ ಕಾಳಿಂಗನ ಸಾಗಿಸಿ ರಕ್ಷಣೆ ಮಾಡಿದರು.
ದಕ್ಷಿಣಕನ್ನಡ: ಆಹಾರವನ್ನು (Prey) ಹಿಂಬಾಲಿಸಿಕೊಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಆಹಾರವನ್ನು ತಿಂದು ಮನೆಯೊಂದರ (House) ಪಕ್ಕದಲ್ಲೇ ಠಿಕಾಣಿ ಹೂಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ (Kalmadka) ಎಂಬಲ್ಲಿ ನಡೆದಿದೆ. ಮನೆ ಮಂದಿ ಎಷ್ಟೇ ಶ್ರಮಪಟ್ಟರೂ ಕಾಳಿಂಗ ಸರ್ಪ ಜಾಗ ಬಿಟ್ಟು ಕದಲದೇ ಇದ್ದ ಕಾರಣ ಪುತ್ತೂರಿನ (Putturu) ಉರಗತಜ್ಞ ತೇಜಸ್ ಬನ್ನೂರು ಮತ್ತು ತಂಡಕ್ಕೆ ಮನೆ ಮಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕಲ್ಮಡ್ಕದ ಮೇಲಿನಮನೆ ನಿವಾಸಿ ಸದಾಶಿವ ಭಟ್ ಎಂಬವರ ಮನೆಯ ಪಕ್ಕದ ತೋಟದಲ್ಲಿ ಅಳವಡಿಸಿದ ಕೊಳವೆಯೊಂದರ ಬಳಿ ಹಾವು ಮುದುಡಿಕೊಂಡು ಮಲಗಿರುವುದು ಪತ್ತೆಯಾಗಿತ್ತು. ಒಂದು ಗಂಟೆಯ ಸತತ ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ತೇಜಸ್ ಬನ್ನೂರು, ಪುನಿತ್ ಮತ್ತು ಕೃಷ್ಣ ಈ ಕಾರ್ಯಾಚರಣೆಯಲ್ಲಿ ಭಾಗಿಯಾದರೆ, ಅರಣ್ಯ ಇಲಾಖೆ ಆಕಾಶ್ ಮತ್ತು ಮೋಹನ್ ರಕ್ಷಿಸಿದ ಕಾಳಿಂಗವನ್ನು ಬಂಟಮಲೆ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದರು.
ಉಡವೊಂದನ್ನು ಬೆನ್ನಟ್ಟಿ ತಿಂದಿದ್ದ ಕಾಳಿಂಗ ಸರ್ಪ ಸದಾಶಿವ ಭಟ್ ಅವರ ಮನೆಯ ಪಕ್ಕದಲ್ಲೇ ಇರುವ ತೋಟದಲ್ಲೇ ಠಿಕಾಣಿ ಹೂಡಿತ್ತು. ಸುಮಾರು 12 ಅಡಿ ಉದ್ದದ ಈ ಸರ್ಪ 14 ಕಿಲೋ ಭಾರವನ್ನೂ ಹೊಂದಿದ್ದ ಈ ಸರ್ಪವನ್ನು ರಾತ್ರಿ ವೇಳೆಯಲ್ಲೇ ಯಶಸ್ವಿ ಕಾರ್ಯಾಚರಣೆ ಮಾಡುವ ಮೂಲಕ ರಕ್ಷಿಸಲಾಗಿದೆ.
ಒಂದೊಂದು ವಾರ ಕಳೆದರೂ ಅಲ್ಲಾಡೋಲ್ಲ ಕಾಳಿಂಗ
ಸಾಮಾನ್ಯವಾಗಿ ಕಾಳಿಂಗ ಸರ್ಪಗಳು ಆಹಾರವನ್ನು ತಿಂದ ಬಳಿಕ ಅದೇ ಸ್ಥಳದಲ್ಲೇ ಇರುತ್ತದೆ. ಒಂದು ವೇಳೆ ಕಾಳಿಂಗ ಸರ್ಪ ಹಾವನ್ನು ತಿಂದಿದ್ದಲ್ಲಿ ಸುಮಾರು ಒಂದು ವಾರ ಕಾಲ ತಿಂದ ಜಾಗ ಬಿಟ್ಟು ಕದಲುವುದಿಲ್ಲ. ಅದೇ ಪ್ರಕಾರ ಉಡವನ್ನು ತಿಂದಿದ್ದಲ್ಲಿ ಸುಮಾರು 15 ದಿನಗಳ ಕಾಲ ಅದೇ ಜಾಗದಲ್ಲಿ ಉಳಿಯುತ್ತೆ. ಕಾಳಿಂಗ ಸರ್ಪಗಳು ಒಂದು ಬಾರಿ ಆಹಾರ ತಿಂದ ಬಳಿಕ ಹತ್ತರಿಂದ ಹದಿನೈದು ದಿನಗಳ ಕಾಲ ಆಹಾರವನ್ನೇ ತಿನ್ನದೆ ಬದುಕುತ್ತದೆ. ಅತ್ಯಂತ ತಂಪಾದ ಜಾಗವನ್ನೇ ಬಯಸುವ ಕಾಳಿಂಗ ಸರ್ಪಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಮಧ್ಯೆ ಹೆಚ್ಚಾಗಿ ಕಂಡು ಬರುತ್ತವೆ.
Dakshina Kannada,Karnataka
October 12, 2025 2:44 PM IST