Retirement: ಭಾರತ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ ಮೊದಲ ಕಾಶ್ಮೀರಿ ಕ್ರಿಕೆಟಿಗ ನಿವೃತ್ತಿ / First Kashmiri cricketer Parvez Rasool to play international match for India retires | ಕ್ರೀಡೆ

Retirement: ಭಾರತ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ ಮೊದಲ ಕಾಶ್ಮೀರಿ ಕ್ರಿಕೆಟಿಗ ನಿವೃತ್ತಿ / First Kashmiri cricketer Parvez Rasool to play international match for India retires | ಕ್ರೀಡೆ

Last Updated:

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಮೊದಲ ಕಾಶ್ಮೀರಿ ಕ್ರಿಕೆಟಿಗ ತಮ್ಮ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.

Team India Team India
Team India

ದೀಪಾವಳಿ (Deepawali) ಹಬ್ಬದಂದು ಭಾರತ ತಂಡ(Team India)ದ ಕ್ರಿಕೆಟಿಗರೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ (Cricket)ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದೀಗ ತಮ್ಮ ನಿರ್ಧಾರದಿಂದ ಇದ್ದಕ್ಕಿದ್ದಂತೆ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ, ಜೂನ್ 15, 2014 ರಂದು ಈ ಕ್ರಿಕೆಟಿಗ ಸುರೇಶ್ ರೈನಾ (Suresh Raina) ನಾಯಕತ್ವದಲ್ಲಿ ಭಾರತ ತಂಡಕ್ಕಾಗಿ ಏಕದಿನ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಈ ಕ್ರಿಕೆಟಿಗ ಮಿರ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಪಡೆದಿದ್ದರು.

ಭಾರತ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ ಮೊದಲ ಕಾಶ್ಮೀರಿ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಪರ್ವೇಜ್ ರಸೂಲ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ಆಲ್‌ರೌಂಡರ್ ಪರ್ವೇಜ್ ರಸೂಲ್ ಅವರು ಭಾರತದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಜನವರಿ 26, 2017 ರಂದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದರು.

ಪರ್ವೇಜ್ ರಸೂಲ್

ಬಾಂಗ್ಲಾ ವಿರುದ್ಧ 2 ವಿಕೆಟ್

ಜೂನ್ 15, 2014 ರಂದು ಮಿರ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಪರ್ವೇಜ್ ರಸೂಲ್ 10 ಓವರ್ ಬೌಲಿಂಗ್ ಮಾಡಿ 60 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅನಮುಲ್ ಹಕ್ ಮತ್ತು ಆಗಿನ ಬಾಂಗ್ಲಾದೇಶ ನಾಯಕ ಮುಷ್ಫಿಕರ್ ರಹೀಮ್ ಅವರನ್ನು ಔಟ್ ಮಾಡುವ ಮೂಲಕ ಪರ್ವೇಜ್ ರಸೂಲ್ 2 ವಿಕೆಟ್ ಕಬಳಿಸಿದ್ದರು. ಭಾರತವು ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಕೊಹ್ಲಿ ನಾಯಕತ್ವದಲ್ಲಿ ಕೊನೆ ಪಂದ್ಯ

ಪರ್ವೇಜ್ ರಸೂಲ್ ಜನವರಿ 26, 2017 ರಂದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯವು ಪರ್ವೇಜ್ ರಸೂಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ಪಂದ್ಯವಾಯಿತು. 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ರಸೂಲ್ 6 ಎಸೆತಗಳಲ್ಲಿ 5 ರನ್ ಗಳಿಸಿದರು. ಈ ಪಂದ್ಯದಲ್ಲಿ ಪರ್ವೇಜ್ ರಸೂಲ್ 4 ಓವರ್ ಬೌಲಿಂಗ್ ಮಾಡಿ 32 ರನ್‌ಗಳಿಗೆ ಒಂದು ವಿಕೆಟ್ (ಇಯಾನ್ ಮಾರ್ಗನ್) ಪಡೆದರು. ರಸೂಲ್ ಭಾರತ ಪರ ಕೇವಲ ಒಂದು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಮಾತ್ರ ಆಡಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು

ಐಪಿಎಲ್‌ನಲ್ಲಿ ಪರ್ವೇಜ್ ರಸೂಲ್ ಮೂರು ತಂಡಗಳ ಪರ ಒಟ್ಟು 11 ಪಂದ್ಯಗಳನ್ನು ಆಡಿದ್ದಾರೆ. ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈ 11 ಪಂದ್ಯಗಳಲ್ಲಿ ರಸೂಲ್ ಕೇವಲ 4 ವಿಕೆಟ್‌ಗಳನ್ನು ಪಡೆದು 17 ರನ್‌ಗಳನ್ನು ಗಳಿಸಿದ್ದಾರೆ. ಆದಾಗ್ಯೂ, ರಸೂಲ್ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ರಸೂಲ್ 95 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ 16 ಶತಕಗಳು ಮತ್ತು 22 ಅರ್ಧಶತಕಗಳು ಸೇರಿದಂತೆ 38.95 ಸರಾಸರಿಯಲ್ಲಿ 5648 ರನ್‌ಗಳನ್ನು ಗಳಿಸಿದ್ದಾರೆ. ರಸೂಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 352 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ರಸೂಲ್ 164 ಲಿಸ್ಟ್ ಎ ಮತ್ತು 71 ಟಿ20 ಪಂದ್ಯಗಳನ್ನು ಕೂಡ ಆಡಿದ್ದಾರೆ. ಕ್ರಮವಾಗಿ 3982 ಮತ್ತು 840 ರನ್‌ಗಳನ್ನು ಗಳಿಸಿದ್ದಾರೆ. ಅವರು ಲಿಸ್ಟ್ ಎ ನಲ್ಲಿ 221 ವಿಕೆಟ್‌ಗಳನ್ನು ಮತ್ತು ಟಿ20 ನಲ್ಲಿ 60 ವಿಕೆಟ್‌ಗಳನ್ನು ಉರುಳಿಸಿದ್ದಾರೆ.