Last Updated:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಆಯ್ಕೆ ಸಮಿತಿ ಸದಸ್ಯರೊಬ್ಬರು ಈ ಅನುಭವಿ ಆಟಗಾರರನ್ನು ತೆಗೆದುಹಾಕಬೇಕು ಮತ್ತು ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಯುವ ಆಟಗಾರರಿಗೆ ಏಕದಿನ ಸ್ವರೂಪದಲ್ಲಿ ಅವಕಾಶ ನೀಡಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತದ ಇಬ್ಬರು ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli-Rohit Sharma) ಅವರ ಏಕದಿನ ಭವಿಷ್ಯದ ಕುರಿತು ಕಳೆದ ಒಂದು ವಾರದಿಂದ ನಡೆಯುತ್ತಿರುವ ಚರ್ಚೆಯು ಇಡೀ ಕ್ರೀಡಾ ಜಗತ್ತಿನ ಗಮನ ಸೆಳೆಯುತ್ತಿದೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ (India vs Australia) ವಿರುದ್ಧದ ಸರಣಿ ಅವರ ಕೊನೆಯ ಸರಣಿ ಎಂದು ಹೇಳಲಾಗುತ್ತಿದೆ. ಈ ಇಬ್ಬರೂ ಏಕದಿನ ಮಾದರಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ, ಆದರೆ ವರದಿಗಳ ಪ್ರಕಾರ, ರೋಹಿತ್ ಮತ್ತು ವಿರಾಟ್ ಅವರನ್ನು 2027 ರ ಏಕದಿನ ವಿಶ್ವಕಪ್ (2027 ODI World Cup) ಯೋಜನೆಗಳಲ್ಲಿ ಸೇರಿಸಲಾಗಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಅವರು ಈ ಅನುಭವಿ ಆಟಗಾರರನ್ನು ತೆಗೆದುಹಾಕಬೇಕು ಮತ್ತು ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಯುವ ಆಟಗಾರರಿಗೆ ಏಕದಿನ ಸ್ವರೂಪದಲ್ಲಿ ಅವಕಾಶ ನೀಡಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
“ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸಾಯಿ ಸುದರ್ಶನ್ ಅವರಂತಹ ಆಟಗಾರರು ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾಗ, ನೀವು ಹೇಗೆ ಅವರನ್ನ ಬಿಡುತ್ತೀರಾ. ಅವರು ಸ್ವರೂಪಕ್ಕೆ ಅನುಗುಣವಾಗಿ ಎಷ್ಟು ಚೆನ್ನಾಗಿ ಬದಲಾಗಬಹುದು ಎಂಬುದನ್ನು ತೋರಿಸಿದ್ದಾರೆ. ದೊಡ್ಡ ಬದಲಾವಣೆ ಎಂದರೆ ಟಿ20ಯಿಂದ ಟೆಸ್ಟ್‌ಗೆ ಅವರು ಹೊಂದಿಕೊಂಡು ತಮ್ಮ ಸಾಮರ್ಥ್ಯ ತೋರಿದ್ದಾರೆ. ಒಮ್ಮೆ ಆಟಗಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ, ಅವರಲ್ಲಿ ಪವರ್ ಗೇಮ್ ಇದ್ದರೆ, ಏಕದಿನ ಪಂದ್ಯಗಳು ಅವರಿಗೆ ಅವಕಾಶ ಸುಲಭವಾಗಬೇಕು. ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿ ಒಟ್ಟಿಗೆ ಕುಳಿತು ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ” ಎಂದು ಗಾಂಧಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಆದಾಗ್ಯೂ, ಬಿಸಿಸಿಐ ಇನ್ನೂ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಕೊಹ್ಲಿ ಮತ್ತು ರೋಹಿತ್ 50 ಓವರ್‌ಗಳ ಸ್ವರೂಪದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, ಅವರು ದೇಶೀಯ ಕ್ರಿಕೆಟ್ ಆಡಬೇಕಾಗುತ್ತದೆ ಎಂದು ವರದಿಗಳು ಕೇಳಿಬಂದಿದ್ದವು. ಆದರೆ ಬಿಸಿಸಿಐ ನಿನ್ನೆ ಅದಕ್ಕೂ ಸ್ಪಷ್ಟನೆ ನೀಡಿದೆ. ನಾವು ಈಗಲೇ ಆ ಇಬ್ಬರ ಮೇಲೆ ಯಾವುದೇ ಷರತ್ತು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಆಸದರೆ ಏಕದಿನ ವಿಶ್ವಕಪ್‌ಗೆ ಯುವಕರನ್ನು ಸಿದ್ಧಪಡಿಸುವುದು ಮುಖ್ಯವಾಗಿರುವ ಕಾರಣ ರೋಹಿತ್ ಹಾಗೂ ಕೊಹ್ಲಿ ಇಬ್ಬರು ಆಡುವುದು ಸಾಧ್ಯವಿಲ್ಲ ಎಂದು ಗಾಂಧಿ ನಂಬುತ್ತಾರೆ. ವಿಶೇಷವಾಗಿ ವಿರಾಟ್ ಮತ್ತು ರೋಹಿತ್ ಮಹತ್ವದ ಈವೆಂಟ್‌ಗೆ ಮೊದಲು ಫಾರ್ಮ್ ತೋರಿಸಲು ವಿಫಲವಾದರೆ ಅವರನ್ನ ತಂಡದಲ್ಲಿ ಆಡಿಸುವುದು ಉತ್ತಮವಲ್ಲ ಎಂದಿದ್ದಾರೆ.
“ಒಂದು ವರ್ಷದಲ್ಲಿ ನಾವು ಅವರಲ್ಲಿ ಒಬ್ಬರು ಉತ್ತಮವಾಗಿ ಕಾರ್ಯನಿರ್ವಹಿಸದ ಪರಿಸ್ಥಿತಿಯನ್ನು ತಲುಪಿದರೆ, ನಮಗೆ ಬದಲಿ ಆಟಗಾರನ ಅಗತ್ಯವಿದ್ದರೆ, ಮ್ಯಾನೇಜ್ಮೆಂಟ್ ಹೊಸ ಆಟಗಾರನನ್ನು ಸಿದ್ಧಪಡಿಸಲು ಸಾಕಷ್ಟು ಸಮಯವಿರುವುದಿಲ್ಲ. ರೋಹಿತ್ ಮತ್ತು ವಿರಾಟ್ ಅವರ ಕೊಡುಗೆಯ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಸಮಯ ಯಾರಿಗೂ ಕಾಯುವುದಿಲ್ಲ, ಹಾಗಾಗಿ ಮ್ಯಾನೇಜ್ಮೆಂಟ್ ವಿಶ್ವಕಪ್ಗೂ ಮೊದಲು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು. ಯುವ ಆಟಗಾರರಿಗೆ ಸರಿಯಾದ ಸಮಯದಲ್ಲಿ ಜವಾಬ್ದಾರಿ ನೀಡದಿದ್ದರೆ, ತಂಡದ ಭವಿಷ್ಯ ಕಷ್ಟಕರವಾಗಬಹುದು” ಎಂದು ಗಾಂಧಿ ಎಚ್ಚರಿಸಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಇಂಗ್ಲೆಂಡ್‌ನಲ್ಲಿ ಭಾರತ ತಂಡವು ಕಷ್ಟಕರ ಸಂದರ್ಭವನ್ನು ಎದುರಿಸಿತು. ಆದರೆ, ಯುವ ಆಟಗಾರರು ತಮ್ಮ ಉತ್ಕೃಷ್ಟ ಪ್ರದರ್ಶನದಿಂದ ಸರಣಿಯನ್ನು 2-2 ರಿಂದ ಡ್ರಾ ಮಾಡಿದರು. ಈ ಯಶಸ್ಸು ಭಾರತದ ಯುವ ಪ್ರತಿಭೆಗಳ ಸಾಮರ್ಥ್ಯವನ್ನು ತೋರಿಸಿತು. ODI ಗಳಲ್ಲಿಯೂ ಯುವ ಆಟಗಾರರ ಕೊರತೆ ಇಲ್ಲ, ಆದರೆ ಗಾಂಧಿ ಅವರ ಪ್ರಕಾರ, ಈ ಯುವ ಆಟಗಾರರಿಗೆ ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಸಿಗದಿದ್ದರೆ, ಭಾರತ ಕ್ರಿಕೆಟ್‌ನ ಭವಿಷ್ಯವು ಅಪಾಯಕ್ಕೆ ಸಿಲುಕಬಹುದು ಎಂಬುದಾಗಿದೆ.
August 11, 2025 6:23 PM IST