SA vs ENG: ತವರಿನಲ್ಲೇ ಇಂಗ್ಲೆಂಡ್​ಗೆ ಭಾರೀ ಮುಖಭಂಗ; 175 ಎಸೆತಗಳಿರುವಂತೆ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ | Aiden Markram and Keshav Maharaj Lead South Africa to 7-Wicket Victory Over England | ಕ್ರೀಡೆ

SA vs ENG: ತವರಿನಲ್ಲೇ ಇಂಗ್ಲೆಂಡ್​ಗೆ ಭಾರೀ ಮುಖಭಂಗ; 175 ಎಸೆತಗಳಿರುವಂತೆ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ | Aiden Markram and Keshav Maharaj Lead South Africa to 7-Wicket Victory Over England | ಕ್ರೀಡೆ

Last Updated:

ದಕ್ಷಿಣ ಆಫ್ರಿಕಾ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ, ಐಡೆನ್ ಮಾರ್ಕ್ರಾಮ್ 86 ರನ್ ಗಳಿಸಿದರೆ,, ಕೇಶವ್ ಮಹಾರಾಜ್ 4 ವಿಕೆಟ್, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ
ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ODI ಸರಣಿಗೆ ದಕ್ಷಿಣ ಆಫ್ರಿಕಾ ಗೆಲುವಿನ ಆರಂಭ ಪಡೆದುಕೊಂಡಿದೆ. ಮಂಗಳವಾರ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು, ಇದರಲ್ಲಿ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರೆ, ಸ್ಪಿನ್ನರ್ ಕೇಶವ್ ಮಹಾರಾಜ್ ಆಂಗ್ಲರ ಬ್ಯಾಟರ್​ಗಳನ್ನ ದೂಳೀಪಟ ಮಾಡಿದರು. ಮೊದಲು ಇಂಗ್ಲೆಂಡ್ ತಂಡವನ್ನ 131ಕ್ಕೆ ಆಲೌಟ್ ಮಾಡಿದ ದಕ್ಷಿಣ ಆಫ್ರಿಕಾ ಕೇವಲ 20.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 132 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಮಾರ್ಕ್ರಾಮ್ 55 ಎಸೆತಗಳಲ್ಲಿ 86 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಅವರು 13 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

132 ರನ್​ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಮಾರ್ಕ್ರಾಮ್ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ದಕ್ಷಿಣ ಆಫ್ರಿಕಾ 5.2 ಓವರ್‌ಗಳಲ್ಲಿ 50 ರನ್ ಗಳಿಸಿತು. ಇದು ODI ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕನೇ ವೇಗದ ತಂಡದ ಅರ್ಧಶತಕವಾಗಿದೆ. ದಕ್ಷಿಣ ಆಫ್ರಿಕಾ 16 ನೇ ಓವರ್‌ನಲ್ಲಿ 100 ರನ್ ಗಳಿಸಿತು. ಮಾರ್ಕ್ರಾಮ್ 19 ನೇ ಓವರ್‌ನಲ್ಲಿ ಆದಿಲ್ ರಶೀದ್‌ಗ ಬೌಲಿಂಗ್​​ನಲ್ಲಿ ಔಟ್ ಆಗಿ ಶತಕ ಮಿಸ್ ಮಾಡಿಕೊಂಡರು. ವಿಕೆಟ್ ಕೀಪರ್ ರಯಾನ್ ರಿಕಲ್ಟನ್ (59 ಎಸೆತಗಳಲ್ಲಿ ಔಟಾಗದೆ 31, 4 ಬೌಂಡರಿಗಳು) ಅವರೊಂದಿಗೆ ಮೊದಲ ವಿಕೆಟ್‌ಗೆ 121 ರನ್‌ಗಳ ಜೊತೆಯಾಟ ನಡೆಸಿದ್ದರು.

ಮಾರ್ಕ್ರಮ್ ಔಟ್ ಆಗುತ್ತಿದ್ದಂತೆ ಆದಿಲ್ ರಶೀದ್ ತಮ್ಮ ಮುಂದಿನ ಓವರ್​​ನಲ್ಲಿ ನಾಯಕ ಟೆಂಬಾ ಬವುಮಾ (6) ಮತ್ತು ಟ್ರಿಸ್ಟಾನ್ ಸ್ಟಬ್ಸ್ (0) ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು. ಇದಾದ ನಂತರ, ಬ್ಯಾಟಿಂಗ್‌ಗೆ ಬಂದ ಡೆವಾಲ್ಡ್ ಬ್ರೆವಿಸ್ (ಎರಡು ಎಸೆತಗಳಲ್ಲಿ ಔಟಾಗದೆ 6) ರಶೀದ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ದಕ್ಷಿಣ ಆಫ್ರಿಕಾದ ಗೆಲುವನ್ನು ಖಚಿತಪಡಿಸಿದರು. ದಕ್ಷಿಣ ಆಫ್ರಿಕಾ ಇನ್ನೂ 175 ಎಸೆತಗಳು ಬಾಕಿ ಇರುವಾಗ ಗೆಲುವು ಸಾಧಿಸಿತು. ಎಸೆತಗಳ ಅಂತರದಲ್ಲಿ, ಇದು ಇಂಗ್ಲೆಂಡ್ ವಿರುದ್ಧದ ODIಗಳಲ್ಲಿ ದಕ್ಷಿಣ ಆಫ್ರಿಕಾದ ಎರಡನೇ ಅತ್ಯಧಿಕ ಗೆಲುವಾಗಿದೆ. 2007 ರ ODI ವಿಶ್ವಕಪ್‌ನಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ 9 ವಿಕೆಟ್‌ಗಳ ಗೆಲುವಿನ ಸಮಯದಲ್ಲಿ ದಕ್ಷಿಣ ಆಫ್ರಿಕಾ 184 ಎಸೆತಗಳು ಬಾಕಿ ಇರುವಾಗ ಜಯ ಸಾಧಿಸಿತ್ತು.

ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 24.3 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಮಹಾರಾಜ್ 5.3 ಓವರ್‌ಗಳಲ್ಲಿ 22 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಎಂದು ಆಯ್ಕೆ ಮಾಡಲಾಯಿತು. ವಿಯಾನ್ ಮುಲ್ಡರ್ 7 ಓವರ್‌ಗಳಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ನಾಂಡ್ರೆ ಬರ್ಗರ್ ಮತ್ತು ಲುಂಗಿ ಎನ್‌ಗಿಡಿ ತಲಾ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರು ಮಾತ್ರ 15 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ಆರಂಭಿಕ ಆಟಗಾರ ಜೇಮೀ ಸ್ಮಿತ್ (48 ಎಸೆತಗಳಲ್ಲಿ 58, 10 ಬೌಂಡರಿ) ಅರ್ಧಶತಕ ಬಾರಿಸಿದರೆ, ವಿಕೆಟ್ ಕೀಪರ್ ಜೋಸ್ ಬಟ್ಲರ್ 24 ಎಸೆತಗಳಲ್ಲಿ 15 ರನ್ ಗಳಿಸಿದರು. ಬೆನ್ ಡಕೆಟ್ (5), ಜಾಕೋಬ್ ಬೆಥೆಲ್ (1) ಮತ್ತು ವಿಲ್ ಜ್ಯಾಕ್ಸ್ (7) ಸೇರಿದಂತೆ ಐದು ಇಂಗ್ಲೆಂಡ್ ಆಟಗಾರರು ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ 14 ರನ್ ಮತ್ತು ನಾಯಕ ಹ್ಯಾರಿ ಬ್ರೂಕ್ 12 ರನ್ ಗಳಿಸಿ ನಿರಾಶೆಯನುಭವಿಸಿದರು.