Last Updated:
ತೆಂಬಾ ಬವುಮಾ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ಆಫ್ರಿಕನ್ ನಾಯಕನಾಗಿ ಈ ಸರಣಿಯನ್ನು ಗೆದ್ದು ಇತಿಹಾಸ ಬರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ 2-1ರಿಂದ ಒಡಿಐ ಸರಣಿ ಗೆದ್ದ ನಂತರ, ಇಂಗ್ಲೆಂಡ್‌ನಲ್ಲಿ 2-0 ಸರಣಿ ಗೆಲುವಿನೊಂದಿಗೆ ಬವುಮಾ ದಕ್ಷಿಣ ಆಫ್ರಿಕಾದ ಮೊದಲ ನಾಯಕನಾದರು.
ದಕ್ಷಿಣ ಆಫ್ರಿಕಾದ (South Africa) ಕ್ರಿಕೆಟ್ ತಂಡ, ನಾಯಕ ತೆಂಬಾ ಬವುಮಾ (Temba Bavuma) ನೇತೃತ್ವದಲ್ಲಿ, ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿ ಗೆಲುವನ್ನು ಸಾಧಿಸಿದೆ. 27 ವರ್ಷಗಳ ಬಳಿಕ, ಇಂಗ್ಲಿಷ್ ನೆಲದಲ್ಲಿ ದಕ್ಷಿಣ ಆಫ್ರಿಕಾ ಒಡಿಐ ಸರಣಿಯನ್ನು ಗೆದ್ದಿದೆ. ಇದು 1998ರ ನಂತರ ಗೆದ್ದ ಸರಣಿಯ ನಂತರ ಮೊದಲ ಗೆಲುವಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸಿ ಐತಿಹಾಸಿಕ ಸರಳಿ ಗೆದ್ದಿದೆ.
ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿಯಾದ ಐಡೆನ್ ಮಾರ್ಕ್ರಮ್ (49 ರನ್) ಮತ್ತು ರಯಾನ್ ರಿಕಲ್ಟನ್ (35 ರನ್) 73 ರನ್‌ಗಳ ಭದ್ರ ಆರಂಭವನ್ನು ಒದಗಿಸಿದರು. ಆದರೆ, ನಾಯಕ ತೆಂಬಾ ಬವುಮಾ ಕೇವಲ 4 ರನ್‌ಗೆ ಔಟಾದರು. ಈ ಸಂದರ್ಭದಲ್ಲಿ ಮ್ಯಾಥ್ಯೂ ಬ್ರೀಟ್ಸ್ಕೆ (85 ರನ್, 77 ಎಸೆತಗಳಲ್ಲಿ, 7 ಬೌಂಡರಿ, 3 ಸಿಕ್ಸರ್‌ಗಳು) ಮತ್ತು ಟ್ರಿಸ್ಟಾನ್ ಸ್ಟಬ್ಸ್ (58 ರನ್) ಐದನೇ ವಿಕೆಟ್‌ಗೆ 140 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಭದ್ರಪಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಡೆವಾಲ್ಡ್ ಬ್ರೆವಿಸ್ (42 ರನ್, 20 ಎಸೆತಗಳಲ್ಲಿ) ಮತ್ತು ಕಾರ್ಬಿನ್ ಬಾಷ್ (32* ರನ್) ದಕ್ಷಿಣ ಆಫ್ರಿಕಾವನ್ನು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 330 ರನ್‌ಗಳಿಗೆ ಕೊಂಡೊಯ್ದರು.
331 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲಿ ಜೇಮೀ ಸ್ಮಿತ್ (0) ಮತ್ತು ಬೆನ್ ಡಕೆಟ್ (14)ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಜೋ ರೂಟ್ (61 ರನ್) ಮತ್ತು ಜಾಕೋಬ್ ಬೆಥೆಲ್ (58 ರನ್, 40 ಎಸೆತಗಳಲ್ಲಿ) ತಮ್ಮ ಅರ್ಧಶತಕಗಳೊಂದಿಗೆ ತಂಡವನ್ನು ಪಂದ್ಯದಲ್ಲಿ ಮರಳುವಂತೆ ಮಾಡಿದರು. ನಾಯಕ ಹ್ಯಾರಿ ಬ್ರೂಕ್ (33 ರನ್) ಮತ್ತು ಮಾಜಿ ನಾಯಕ ಜೋಸ್ ಬಟ್ಲರ್ (51 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ಗಳ ಸಹಿತ 61) 69 ರನ್ ಸೇರಿಸಿದರು. ಬ್ರೂಕ್ ನಂತರ ವಿಲ್ ಜಾಕ್ ಜೊತೆ ಸೇರಿದ ಬಟ್ಲರ್ 40 ರನ್ ಸೇರಿಸಿದ್ದರು. ಬಟ್ಲರ್ ವಿಕೆಟ್ ನಂತರ ವಿಲ್ ಜಾಕ್ಸ್ 33 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 39 ರನ್ಗಳಿಸಿ ಗೆಲುವಿಗೆ 19 ಎಸೆತಗಳಲ್ಲಿ 40 ರನ್ ಬೇಕಿದ್ದಾಗ ಔಟ್ ಆದರು.
ಈ ಹಂತದಲ್ಲಿ ಇಂಗ್ಲೆಂಡ್ ಸುಲಭವಾಗಿ ಸೋಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್ಚರ್ ಕೇವಲ 14 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 27 ರನ್ಗಳಿಸಿ ರೋಚಕ ಹೋರಾಟ ನಡೆಸಿದರು. ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು, ಜೋಫ್ರಾ ಆರ್ಚರ್ ಎರಡು ಬೌಂಡರಿಗಳ ಸಹಿತ 10 ರನ್ಗಳಿಸಲಷ್ಟೇ ಶಕ್ತವಾದರು. ಕೊನೆಯ ಎಸೆತದಲ್ಲಿ 6 ಸಿಡಿಸಿದ್ದರೆ ಪಂದ್ಯ ಟೈ ಆಗುತ್ತಿತ್ತು. ಆದರೆ ಸೇನುರಾನ್ ಮುತ್ತುಸಾಮಿಯ ಕೊನೆಯ ಎಸೆತದಲ್ಲಿ ಆರ್ಚರ್ ಕೇವಲ ಒಂದು ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರಿಂದ ಇಂಗ್ಲೆಂಡ್ 325/9 ರನ್‌ಗೆ ಸೀಮಿತವಾಗಿ, 5 ರನ್‌ಗಳಿಂದ ಸೋಲನುಭವಿಸಿತು.
ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ನಂದ್ರೆ ಬರ್ಗರ್ 3 ವಿಕೆಟ್‌ಗಳನ್ನು ಪಡೆದರೆ, ಕೇಶವ್ ಮಹಾರಾಜ್ 2 ವಿಕೆಟ್‌ಗಳನ್ನು ಕಬಳಿಸಿದರು. ಮುತ್ತುಸಾಮಿ, ಕಾರ್ಬಿನ್ ಬಾಷ್ ಹಾಗೂ ಲುಂಗಿ ಎನ್ಗಿಡಿ ತಲಾ 1 ವಿಕೆಟ್ ಪಡೆದು ಐತಿಹಾಸಿಕ ಸರಣಿಯಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯದಲ್ಲಿ ಮ್ಯಾಥ್ಯೂ ಬ್ರೀಟ್ಸ್ಕೆ ತಮ್ಮ ಒಡಿಐ ವೃತ್ತಿಜೀವನದ ಸಐದನೇ ಇನ್ನಿಂಗ್ಸ್‌ನಲ್ಲಿ 85 ರನ್ ಗಳಿಸುವ ಮೂಲಕ ಒಡಿಐ ಇತಿಹಾಸದಲ್ಲಿ ತಮ್ಮ ಮೊದಲ ಐದು ಇನ್ನಿಂಗ್ಸ್‌ಗಳಲ್ಲಿ ಸತತ 50+ ಸ್ಕೋರ್ ಗಳಿಸಿದ ಮೊದಲ ಆಟಗಾರನಾದರು. ಈ ದಾಖಲೆಯೊಂದಿಗೆ ಅವರು ಭಾರತದ ನವ್‌ಜೋತ್ ಸಿಂಗ್ ಸಿಧು (1987ರಲ್ಲಿ 4 ಸತತ 50+ ಸ್ಕೋರ್) ಅವರ ದಾಖಲೆಯನ್ನು ಮುರಿದರು. ಬ್ರೀಟ್ಸ್ಕೆ ಇದುವರೆಗೆ ಐದು ಒಡಿಐ ಇನ್ನಿಂಗ್ಸ್‌ಗಳಲ್ಲಿ 463 ರನ್ ಗಳಿಸಿದ್ದಾರೆ, ಇದು ಒಡಿಐ ಇತಿಹಾಸದಲ್ಲಿ ಐದು ಇನ್ನಿಂಗ್ಸ್‌ಗಳ ನಂತರ ಅತ್ಯಧಿಕ ರನ್ ಗಳಿಕೆಯ ದಾಖಲೆಯಾಗಿದೆ. ಇವರ ಈ ಸಾಧನೆ ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ನಿರ್ಣಾಯಕವಾಯಿತು.
ತೆಂಬಾ ಬವುಮಾ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ಆಫ್ರಿಕನ್ ನಾಯಕನಾಗಿ ಈ ಸರಣಿಯನ್ನು ಗೆದ್ದು ಇತಿಹಾಸ ಬರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ 2-1ರಿಂದ ಒಡಿಐ ಸರಣಿ ಗೆದ್ದ ನಂತರ, ಇಂಗ್ಲೆಂಡ್‌ನಲ್ಲಿ 2-0 ಸರಣಿ ಗೆಲುವಿನೊಂದಿಗೆ ಬವುಮಾ ದಕ್ಷಿಣ ಆಫ್ರಿಕಾದ ಮೊದಲ ನಾಯಕನಾದರು.
September 05, 2025 4:45 PM IST