SA vs ZIM: ಪದಾರ್ಪಣೆ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿದ 19ರ ಪೋರ! 61 ವರ್ಷಗಳ ದಾಖಲೆ ಪುಡಿ ಪುಡಿ | Lhuan de Pretorius Makes History: Youngest South African to Score Test Fifty

SA vs ZIM: ಪದಾರ್ಪಣೆ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿದ 19ರ ಪೋರ! 61 ವರ್ಷಗಳ ದಾಖಲೆ ಪುಡಿ ಪುಡಿ | Lhuan de Pretorius Makes History: Youngest South African to Score Test Fifty

Last Updated:

ಲೂಆನ್-ಡ್ರೆ ಪ್ರಿಟೋರಿಯಸ್ 19 ವರ್ಷ ಮತ್ತು 93 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. 1964ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ 19 ವರ್ಷ ಮತ್ತು 317 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಹಾಗೂ ಶತಕ ಸಿಡಿಸಿದ್ದ ದಿಗ್ಗಜ ಗ್ರೇಮ್ ಪೊಲಾಕ್‌ರ ದಾಖಲೆಯನ್ನು ಮುರಿದಿದ್ದಾರೆ.

ಲೂಆನ್-ಡ್ರೆ ಪ್ರಿಟೋರಿಯಸ್ಲೂಆನ್-ಡ್ರೆ ಪ್ರಿಟೋರಿಯಸ್
ಲೂಆನ್-ಡ್ರೆ ಪ್ರಿಟೋರಿಯಸ್

ದಕ್ಷಿಣ ಆಫ್ರಿಕಾದ (South Africa) 19 ವರ್ಷದ ಯುವ ಕ್ರಿಕೆಟಿಗ ಲೂಆನ್-ಡ್ರೆ ಪ್ರಿಟೋರಿಯಸ್ (Lhuan-dre Pretorius), ಜಿಂಬಾಬ್ವೆ (Zimbabwe) ವಿರುದ್ಧ ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜೂನ್ 28, 2025ರಂದು ನಡೆದ ಮೊದಲ ಟೆಸ್ಟ್ ಪಂದ್ಯದ ಚೊಚ್ಚಲ ದಿನದಂದು ಇತಿಹಾಸ ಸೃಷ್ಟಿಸಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ 53 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಕಿರಿಯ ಆಟಗಾರ ಎಂಬ ದಾಖಲೆಯನ್ನು ಪ್ರಿಟೋರಿಯಸ್ ತಮ್ಮದಾಗಿಸಿಕೊಂಡಿದ್ದರು. ಅದೇ ಇನ್ನಿಂಗ್ಸ್​​​ಅನ್ನ ಶತಕವಾಗಿ ಪರಿವರ್ತಿಸಿ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಕಿರಿಯ ಬ್ಯಾಟರ್ ಎನಿಸಿಕೊಂಡರು.

ಚೊಚ್ಚಲ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್

ದಕ್ಷಿಣ ಆಫ್ರಿಕಾದ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆದರೆ ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಸೆಷನ್‌ನಲ್ಲಿ ತಂಡವು 55 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಟೋನಿ ಡಿ ಝೋರ್ಜಿ ಡಕ್ ಔಟ್ ಆದರೆ, ಮ್ಯಾಥ್ಯೂ ಮ್ಯಾಥ್ಯೂ ಬ್ರೀಟ್ಜ್ಕೆ 13,ಡೇವಿಡ್ ಬೆಡಿಂಗ್​ಹ್ಯಾಮ್ ಡಕ್ ಔಟ್ ಆದರು. 22ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗೆ ಆಗಮಿಸಿದ ಪ್ರಿಟೋರಿಯಸ್​ 4ನೇ ವಿಕೆಟ್​ಗೆ ವಿಯಾನ್ ಮುಲ್ಡರ್ ಜೊತೆಗೆ 33 ರನ್​ ಸೇರಿಸಿ ಚೇತರಿಕೆ ನೀಡಿದರು. ಆದರೆ ಮುಲ್ಡರ್ ಕೂಡ 17 ರನ್​ಗಳಿಸಿ ಔಟ್ ಆದರು.

ಬ್ರೆವಿಸ್ ಜೊತೆ ಸಿಡಿಲಬ್ಬರದ ಆಟ

ಈ ಸವಾಲಿನ ಸಂದರ್ಭದಲ್ಲಿ ಮತ್ತೊಬ್ಬ ಸ್ಫೋಟಕ ಆಟಗಾರ ಡೆವಾಲ್ಡ್ ಬ್ರೆವಿಸ್ ಜೊತೆಗೂಡಿಸ ಲೂಆನ್-ಡ್ರೆ ಪ್ರಿಟೋರಿಯಸ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದರು. ಎಡಗೈ ಬ್ಯಾಟರ್ ಆಗಿರುವ ಪ್ರಿಟೋರಿಯಸ್, ತಾನು ಎದುರಿಸಿದ ನಾಲ್ಕನೇ ಎಸೆತವನ್ನೇ ಸಿಕ್ಸರ್‌ಗೆ ಕಳುಹಿಸಿ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದರು. ತಮ್ಮ 53ನೇ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದ ಅವರು ಬ್ರೆವಿಸ್ ಜೊತೆಗೆ 5ನೇ ವಿಕೆಟ್​ ಜೊತೆಯಾಟದಲ್ಲಿ 88 ಎಸೆತಗಳಲ್ಲಿ 95 ರನ್​ಗಳಿಸಿದರು. ಬ್ರೆವಿಸ್ ಕೂಡ ಟಿ20ಯಂತೆ ಬ್ಯಾಟ್ ಬೀಸಿ 41 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ಔಟ್ ಆದರು.

ನಂತರ ಬಂದ ಕೈಲ್ ವೇರಿನ್ನೆಕೇವಲ 10 ರನ್​ಗಳಿಸಿ ಔಟ್ ಆದರು. ಆದರೆ 7ನೇ ವಿಕೆಟ್ ಜೊತೆಯಾಟದಲ್ಲಿ ಒಂದಾಗಿರುವ ಕಾರ್ಬಿನ್ಬ ಬಾರ್ಷ್​ ಹಾಗೂ ಪ್ರಿಟೋರಿಯಸ್​ 107 ರನ್​ಗಳಿಸಿ ಮುನ್ನುಗ್ಗುತ್ತಿದ್ದಾರೆ. ಪ್ರಿಟೋರಿಯಸ್​ ಅಜೇಯ 153 ರನ್​ಗಳಿಸಿದ್ದರೆ, ಕಾರ್ಬಿನ್ ಬಾರ್ಷ್​ ಅಜೇಯ 37 ರನ್​ಗಳಿಸಿದ್ದಾರೆ.

ಯುವ ಪ್ರತಿಭೆಯ ಉದಯ

ಪ್ರಿಟೋರಿಯಸ್, ದಕ್ಷಿಣ ಆಫ್ರಿಕಾದ ಕ್ರಿಕೆಟ್‌ನ ಉದಯೋನ್ಮುಖ ತಾರೆಯಾಗಿದ್ದಾರೆ. ಪ್ರಿಟೋರಿಯಾದಲ್ಲಿ ಜನಿಸಿದ ಈ 19 ವರ್ಷದ ಆಟಗಾರ, ದಕ್ಷಿಣ ಆಫ್ರಿಕಾದ ಶ್ರೇಷ್ಠ ಶಾಲೆಯಾದ ಸೇಂಟ್ ಸ್ಟಿಥಿಯನ್ಸ್‌ನಿಂದ ಕ್ರಿಕೆಟ್‌ನ ಆರಂಭಿಕ ತರಬೇತಿಯನ್ನು ಪಡೆದರು. ತಮ್ಮ ಕೊನೆಯ ಶಾಲಾ ವರ್ಷದಲ್ಲಿ ಪ್ರಿಟೋರಿಯಾದ ಕಾರ್ನ್‌ವಾಲ್ ಹಿಲ್‌ಗೆ ಸ್ಥಳಾಂತರಗೊಂಡರು. 2024ರ ಐಸಿಸಿ U19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಪರವಾಗಿ ಆಡಿದ ಪ್ರಿಟೋರಿಯಸ್, 6 ಪಂದ್ಯಗಳಲ್ಲಿ 57.40ರ ಸರಾಸರಿಯಲ್ಲಿ 287 ರನ್‌ಗಳನ್ನು ಗಳಿಸಿ ತಂಡದ ಪ್ರಮುಖ ರನ್ ಗಳಿಕೆಗಾರರಾದರು. ಈ ಟೂರ್ನಿಯಲ್ಲಿ ಅವರು ಮೂರು ಸತತ ಅರ್ಧಶತಕಗಳನ್ನು ಗಳಿಸಿದ್ದು, ಭಾರತ ವಿರುದ್ಧ ಸೆಮಿಫೈನಲ್‌ನಲ್ಲಿ 76 ರನ್‌ಗಳನ್ನು ಕೂಡ ಗಳಿಸಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ

ದೇಶೀಯ ಕ್ರಿಕೆಟ್‌ನಲ್ಲಿ ಪ್ರಿಟೋರಿಯಸ್ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಟೈಟನ್ಸ್‌ಗಾಗಿ ವಾರಿಯರ್ಸ್ ವಿರುದ್ಧ ತಮ್ಮ ಪ್ರಥಮ ದರ್ಜೆ ಚೊಚ್ಚಲ ಪಂದ್ಯದಲ್ಲಿ 120 ರನ್‌ಗಳ ಭರ್ಜರಿ ಶತಕವನ್ನು ಗಳಿಸಿದರು. ಕೇವಲ 6 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಶತಕಗಳನ್ನು ಗಳಿಸಿರುವ ಪ್ರಿಟೋರಿಯಸ್, 65.57ರ ಆಕರ್ಷಕ ಸರಾಸರಿಯನ್ನು ಹೊಂದಿದ್ದಾರೆ. CSA ಒನ್-ಡೇ ಕಪ್‌ನಲ್ಲಿ ಡಾಲ್ಫಿನ್ಸ್ ವಿರುದ್ಧ 115 ಮತ್ತು ವಾರಿಯರ್ಸ್ ವಿರುದ್ಧ 122* ರನ್‌ಗಳ ಸತತ ಶತಕಗಳನ್ನು ಗಳಿಸಿದ್ದಾರೆ. 2025ರ SA20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್‌ಗಾಗಿ ಆಡಿದ ಅವರು, 12 ಪಂದ್ಯಗಳಲ್ಲಿ 166.80ರ ಸ್ಟ್ರೈಕ್ ರೇಟ್‌ನೊಂದಿಗೆ 397 ರನ್‌ಗಳನ್ನು ಗಳಿಸಿ ಟೂರ್ನಿಯ ಟಾಪ್ ರನ್ ಗಳಿಕೆಗಾರರಾದರು.