Last Updated:
ಮಂಗಳೂರು ದೇಶದ ಅತ್ಯಂತ ಸುರಕ್ಷಿತ ನಗರವೆಂಬ ಸ್ಥಾನವನ್ನು ಪಡೆದುಕೊಂಡಿದೆ. ನಂಬಿಯೊ ಸಂಸ್ಥೆಯ 2025ರ ವರದಿಯಲ್ಲಿ 74.2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜಾಗತಿಕ ಮಟ್ಟದಲ್ಲಿ 49ನೇ ಶ್ರೇಯಾಂಕವನ್ನು ಗಳಿಸಿದೆ.
ಮಂಗಳೂರು: ಕುಡ್ಲ, ಕೊಡಿಯಾಲ, ಮಂಗಳಾಪುರ, ಮೈಕಾಲ, ಮ್ಯಾಂಗಲೋರ್, ಮಂಗಳೂರು ಎಂದೆಲ್ಲಾ ಕರೆಯಲ್ಪಡುವ ಕಡಲತಡಿಯ ಕರುನಾಡ ಹೆಮ್ಮೆಯ ನಗರಿ ತುಳುನಾಡು ಮಂಗಳೂರು ಮತ್ತೊಂದು ಸಾಧನೆಗೆ ಪಾತ್ರವಾಗಿದೆ. ಕಡಲನಗರಿ ಮಂಗಳೂರು (Mangaluru) ದೇಶದಲ್ಲಿ ಅತ್ಯಂತ ಸುರಕ್ಷಿತ ನಗರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ರಾಜಕೀಯವಾಗಿ ಹಲವು ಟೀಕೆಗಳಿಗೆ (Criticism) ಒಳಗಾಗಿರುವ ಮಂಗಳೂರು ಇದೀಗ ಭಾರತದ ಅತ್ಯಂತ ಸುರಕ್ಷಿತ ನಗರವಾಗಿ ರೂಪುಗೊಂಡಿದ್ದು, ನಗರವಾಸಿಗಳ (Citizens) ಸಂತಸಕ್ಕೆ ಕಾರಣವಾಗಿದೆ. ಜಾಗತಿಕ ಡೇಟಾ ಸಂಸ್ಥೆಯಾದ ನಂಬಿಯೊ (Numbeo) ಪ್ರಕಟಿಸಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕ ವರದಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರವು ಭಾರತದ ಅತ್ಯಂತ ಸುರಕ್ಷಿತ ನಗರವೆಂಬ ಸ್ಥಾನವನ್ನು ಪಡೆದುಕೊಂಡಿದೆ.
74.2 ಸುರಕ್ಷತಾ ಅಂಕಗಳೊಂದಿಗೆ ದೇಶದಲ್ಲಿ ಅಗ್ರಸ್ಥಾನದಲ್ಲಿರುವ ಮಂಗಳೂರು, ಜಾಗತಿಕ ಮಟ್ಟದಲ್ಲಿ 49 ನೇ ಶ್ರೇಯಾಂಕವನ್ನು ಗಳಿಸಿದೆ. ನಗರದ ಈ ಉನ್ನತ ಶ್ರೇಯಾಂಕಕ್ಕೆ ಇಲ್ಲಿನ ಕಡಿಮೆ ಅಪರಾಧ ಪ್ರಮಾಣ, ಪರಿಣಾಮಕಾರಿ ನಾಗರಿಕ ಮೂಲ ಸೌಕರ್ಯ ಮತ್ತು ಸುರಕ್ಷತೆಯ ಬಗೆಗಿನ ಸಾರ್ವಜನಿಕರ ಗ್ರಹಿಕೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ತನ್ನ ಶ್ರೇಯಾಂಕವನ್ನು ಸುಧಾರಿಸಿಕೊಳ್ಳುತ್ತಿರುವ ಮಂಗಳೂರು, ಸಾರ್ವಜನಿಕ ಸುರಕ್ಷತೆ ಮತ್ತು ವಿಶ್ವಾಸದ ವಿಷಯದಲ್ಲಿ ದೇಶದ ಇತರ ನಗರಗಳನ್ನು ಮೀರಿ ಅಗ್ರಸ್ಥಾನಕ್ಕೇರಿದೆ.
ಈ ಪಟ್ಟಿಯಲ್ಲಿ ಮಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ರಾಜ್ಯದ ವಡೋದರಾ, ಅಹಮದಾಬಾದ್ ಮತ್ತು ಸೂರತ್ ನಗರಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದಿವೆ. ಇನ್ನುಳಿದಂತೆ ಜೈಪುರ, ನವಿ ಮುಂಬೈ, ತಿರುವನಂತಪುರಂ, ಚೆನ್ನೈ, ಪುಣೆ ಮತ್ತು ಚಂಡೀಗಢ ನಗರಗಳು ಭಾರತದ ಅಗ್ರ 10 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ರಾಜಧಾನಿ ದಿಲ್ಲಿಯಲ್ಲಿ ಬದುಕುವುದೇ ಕಷ್ಟ!
ಇದಕ್ಕೆ ತದ್ವಿರುದ್ಧವಾಗಿ, ರಾಷ್ಟ್ರ ರಾಜಧಾನಿ ದಿಲ್ಲಿಯು 59.03 ಅಪರಾಧ ಸೂಚ್ಯಂಕದೊಂದಿಗೆ ದೇಶದ ಅಸುರಕ್ಷಿತ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ದಿಲ್ಲಿಯೊಂದಿಗೆ ನೋಯ್ಡಾ ಮತ್ತು ಘಾಝಿಯಾಬಾದ್ ಕೂಡ ಮಹಿಳಾ ಸುರಕ್ಷತೆ ಮತ್ತು ಹೆಚ್ಚುತ್ತಿರುವ ಬೀದಿ ಅಪರಾಧಗಳ ಕಾರಣದಿಂದಾಗಿ ಶ್ರೇಯಾಂಕದಲ್ಲಿ ಕೆಳಮಟ್ಟದಲ್ಲಿವೆ.
Mangalore,Dakshina Kannada,Karnataka
August 09, 2025 1:41 PM IST