ದಾಖಲೆಯ ಆರಂಭಿಕ ಜೊತೆಯಾಟ
ಭಾರತದ ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ತಂಡಕ್ಕೆ ಭದ್ರ ಆರಂಭವನ್ನು ಒದಗಿಸಿದರು. ಈ ಜೋಡಿಯು 91 ರನ್‌ಗಳ ಜೊತೆಯಾಟವನ್ನು ನೀಡಿ, 1986ರಲ್ಲಿ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್‌ರ 64 ರನ್‌ಗಳ ದಾಖಲೆಯನ್ನು ಮುರಿದು, ಹೆಡಿಂಗ್ಲೆಯಲ್ಲಿ ಭಾರತದ ಗರಿಷ್ಠ ಆರಂಭಿಕ ಜೊತೆಯಾಟದ ದಾಖಲೆಯನ್ನು ನಿರ್ಮಿಸಿತು. ರಾಹುಲ್ 78 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು.
ಸಾಯಿ ಸುದರ್ಶನ್‌ರ ನಿರಾಸೆಯ ಚೊಚ್ಚಲ
ತಮಿಳುನಾಡಿನ ಯುವ ಬ್ಯಾಟರ್ ಸಾಯಿ ಸುದರ್ಶನ್‌ಗೆ ಈ ಪಂದ್ಯದಲ್ಲಿ ದೊಡ್ಡ ಜವಾಬ್ದಾರಿಯನ್ನು ವಹಿಸಲಾಗಿತ್ತು. ಚೇತೇಶ್ವರ್ ಪೂಜಾರರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಯ್ಕೆಯಾದ ಸಾಯಿ, ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಪೂಜಾರರಂತಹ ದಿಗ್ಗಜರು ಆಡಿದ್ದ ಸ್ಥಾನದಲ್ಲಿ ಆಡುವ ಒತ್ತಡವನ್ನು ಎದುರಿಸಿದರು. ಆದರೆ, ಕೆ.ಎಲ್. ರಾಹುಲ್ 42 ರನ್‌ಗೆ ಔಟಾದ ತಕ್ಷಣ ಕ್ರೀಸ್‌ಗೆ ಬಂದ ಸಾಯಿ, ಬೆನ್ ಸ್ಟೋಕ್ಸ್‌ರ ಚಾಣಾಕ್ಷ ಬೌಲಿಂಗ್‌ಗೆ ಬಲಿಯಾದರು. ಸಾಯಿ, ಲೆಗ್ ಸೈಡ್‌ನಲ್ಲಿ ಗ್ಲಾನ್ಸ್ ಆಡಲು ಯತ್ನಿಸಿದಾಗ, ಎಸೆತವು ಬ್ಯಾಟ್‌ನ ತುದಿಗೆ ತಾಗಿ ವಿಕೆಟ್ ಕೀಪರ್ ಜೇಮೀ ಸ್ಮಿತ್‌ಗೆ ಕ್ಯಾಚ್ ಒಡ್ಡಿತು. ಕೇವಲ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದ ಸಾಯಿ, ಭಾರತವನ್ನು 92/2 ಸ್ಥಿತಿಗೆ ತಂದರು.
ಅನಗತ್ಯ ದಾಖಲೆಯ ಭಾಗವಾದ ಸಾಯಿ ಸುದರ್ಶನ್
ಸಾಯಿ ಸುದರ್ಶನ್‌ರ ಈ ಶೂನ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆಯಾಗಿದೆ. ಭಾರತದ ಟಾಪ್-3 ಬ್ಯಾಟರ್‌ಗಳ ಪೈಕಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ಸಾಯಿ ಈಗ ಸೇರಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲೇ ಕೃಷ್ಣಮಾಚಾರಿ ಶ್ರೀಕಾಂತ್ (1981, ವಾಂಖೆಡೆ), ದೇವಾಂಗ್ ಗಾಂಧಿ (1999, ಮೊಹಾಲಿ), ವಿಜಯ್ ಭಾರಧ್ವಜ್ (1999, ಮೊಹಾಲಿ) ಮತ್ತು ಈಗ ಸಾಯಿ ಸುದರ್ಶನ್ (2025, ಲೀಡ್ಸ್) ಸೇರಿದ್ದಾರೆ. ಒಟ್ಟಾರೆಯಾಗಿ ಪದಾರ್ಪಣೆ ಟೆಸ್ಟ್(2 ಇನ್ನಿಂಗ್ಸ್ ಸೇರಿ) ಪಂಧ್ಯದಲ್ಲಿ ಡಕ್ ಔಟ್ ಆದ ಭಾರತದ 29ನೇ ಆಟಗಾರರಾಗಿದ್ದಾರೆ. ಇದರಲ್ಲಿ ಎ. ಕುರುವಿಲ್ಲಾ, ರಾಬಿನ್ ಸಿಂಗ್, ಪಾರ್ಥಿವ್ ಪಟೇಲ್, ಅಜಯ್ ರಾತ್ರಾ, ವೃದ್ಧಿಮಾನ್ ಸಹಾ, ಆರ್. ಅಶ್ವಿನ್, ಮತ್ತು ಉಮೇಶ್ ಯಾದವ್ ಸೇರಿದ್ದಾರೆ. ಉಮೇಶ್ ಯಾದವ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ದರು. ಇದೀಗ 4 ವರ್ಷಗಳ ನಂತರ ಸಾಯಿ ಈ ಪಟ್ಟಿಗೆ ಸೇರಿದ್ದಾರೆ.
ಶತಕದ ಜೊತೆಯಾಟ
ಸಾಯಿ ಸುದರ್ಶನ್ ವಿಕೆಟ್ ಕಳೆದುಕೊಂಡರೂ ಭಾರತದ ರನ್ಗಳಿಕೆಗೇನು ಕಡಿವಾಣ ಬೀಳಲಿಲ್ಲ. ನಾಯಕ ಶುಭ್ಮನ್ ಗಿಲ್ ಆರಂಭಿಕ ಜೈಸ್ವಾಲ್ ಜೊತೆ ಸೇರಿ ಶತಕದ ಜೊತೆಯಾಟ ನೀಡಿದರು. ಜೈಸ್ವಾಲ್ 158 ಎಸೆತಗಳಲ್ಲಿ 16 ಬೌಂಡರಿ, ಸಿಕ್ಸರ್ ಸಹಿತ 101 ರನ್ಗಳಿಸಿ ಬೆನ್ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. 4ನೇ ವಿಕೆಟ್ಗೆ ಒಂದಾಗಿರುವ ಗಿಲ್ ಹಾಗೂ ಪಂತ್ ಅರ್ಧಶತಕದ ಜೊತೆಯಾಟ ನಡೆಸಿ ಮುನ್ನುಗ್ಗುತ್ತಿದ್ದಾರೆ.
June 20, 2025 10:19 PM IST