Last Updated:
ಸೌದಿ ಅರೇಬಿಯಾ ಟಿ20 ಲೀಗ್ ಐಪಿಎಲ್‌ಗೆ ದೊಡ್ಡ ಸವಾಲು ತರುವ ಸಾಧ್ಯತೆ ಇದೆ. 4300 ಕೋಟಿ ಹೂಡಿಕೆ, 8 ತಂಡಗಳು, ಮತ್ತು ವಿಶ್ವದ ವಿವಿಧ ದೇಶಗಳಲ್ಲಿ ಪಂದ್ಯಗಳು. ಐಸಿಸಿ ಅನುಮತಿ, ಭಾರತೀಯ ಆಟಗಾರರ ಭಾಗವಹಿಸುವಿಕೆ ಪ್ರಶ್ನಾರ್ಥಕ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕಳೆದ ಕೆಲವು ವರ್ಷಗಳಿಂದ ಆದಾಯ ಮತ್ತು ಜನಪ್ರಿಯತೆಯಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಬಿಗ್ ಬ್ಯಾಷ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ (CPL), ಪಾಕಿಸ್ತಾನ್ ಸೂಪರ್ ಲೀಗ್ (PSL) ಮತ್ತು ದಕ್ಷಿಣ ಆಫ್ರಿಕಾದ ಟಿ20 (SA T20) ಲೀಗ್‌ಗಳು ಸಹ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿವೆ. ಇದರ ಜೊತೆಗೆ, ಸೌದಿ ಅರೇಬಿಯಾ ಕಳೆದ ಎರಡು ವರ್ಷಗಳಿಂದ ತನ್ನದೇ ಆದ ಟಿ20 ಲೀಗ್ ರಚಿಸಲು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದೆ. ಇದು ಐಪಿಎಲ್‌ಗಿಂತ ಶ್ರೀಮಂತ ಮತ್ತು ದೊಡ್ಡ ಲೀಗ್ ಆಗಬೇಕು ಎಂಬ ಗುರಿಯನ್ನು ಹೊಂದಿತ್ತು. ಇದೀಗ ಈ ಯೋಜನೆ ಮತ್ತೆ ಗಮನಕ್ಕೆ ಬಂದಿದೆ. ಇದು ಐಪಿಎಲ್ ಮೇಲೆ ಯಾವ ಪರಿಣಾಮ ಬೀರುತ್ತದೆ, ಎಷ್ಟು ಖರ್ಚಾಗಲಿದೆ, ಭಾರತೀಯ ಆಟಗಾರರು ಆಡುತ್ತಾರೆಯೇ ಮತ್ತು ಐಸಿಸಿ ಇದಕ್ಕೆ ಅನುಮತಿ ನೀಡುತ್ತದೆಯೇ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿವೆ.
4300 ಕೋಟಿ ಹೂಡಿಕೆಗೆ ಚಿಂತನೆ
ಸೌದಿ ಅರೇಬಿಯಾ ಕ್ರೀಡೆಯಲ್ಲಿ ದೊಡ್ಡ ರಾಷ್ಟ್ರವಾಗಲು ಹೊರಟಿದೆ. ಇದಕ್ಕಾಗಿ ಗಾಲ್ಫ್, ಫಾರ್ಮುಲಾ ಒನ್ ಮತ್ತು 2034ರ ಫಿಫಾ ವಿಶ್ವಕಪ್‌ಗೆ ಈಗಾಗಲೇ ಹಣ ಹೂಡಿದೆ. ಈಗ ಟಿ20 ಕ್ರಿಕೆಟ್ ಲೀಗ್ ರಚಿಸಲು ಮುಂದಾಗಿದೆ. ಇದಕ್ಕಾಗಿ ಆಸ್ಟ್ರೇಲಿಯಾದ ಕ್ರಿಕೆಟ್ ತಜ್ಞರು ಮತ್ತು ಆಟಗಾರರ ಸಂಘದೊಂದಿಗೆ ಕೆಲಸ ಮಾಡುತ್ತಿದ್ದು, ಆರಂಭಕ್ಕೆ 500 ಮಿಲಿಯನ್ ಡಾಲರ್ (ಸುಮಾರು 4,347) ಕೋಟಿ ರೂಪಾಯಿ ಖರ್ಚು ಮಾಡಲು ಯೋಜಿಸಿದೆ. ಆಸ್ಟ್ರೇಲಿಯಾದ ದಂತಕಥೆ ನೀಲ್ ಮ್ಯಾಕ್ಸ್‌ವೆಲ್ ಈ ಲೀಗ್‌ಗಾಗಿ ಹಿಂದಿನಿಂದಲೂ ತಯಾರಿ ನಡೆಸುತ್ತಿದ್ದಾರೆ. ಈ ಲೀಗ್ ಶುರುವಾದರೆ ಐಪಿಎಲ್‌ಗೆ ದೊಡ್ಡ ಸ್ಪರ್ಧೆ ಎದುರಾಗಬಹುದು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ.
ಸೌದಿ ಸರ್ಕಾರ ತನ್ನ ಕ್ರೀಡಾ ಯೋಜನೆಯಡಿ ಈ ಲೀಗ್‌ಗೆ ಹಣ ಹೂಡಿಕೆ ಮಾಡಲಿದೆ. ಜೊತೆಗೆ, ಕೆಲವು ಬಹುರಾಷ್ಟ್ರೀಯ ಕಂಪನಿಗಳು ಸಹ ಹೂಡಿಕೆ ಮಾಡುತ್ತಿವೆ. 2020ರಿಂದ ಸೌದಿ ಅರೇಬಿಯಾ ಫುಟ್‌ಬಾಲ್, ಟೆನಿಸ್, ಗಾಲ್ಫ್ ಮತ್ತು ಫಾರ್ಮುಲಾ ಒನ್‌ಗೆ ಬಿಲಿಯನ್‌ಗಟ್ಟಲೆ ಹಣ ಖರ್ಚು ಮಾಡಿದೆ. ಈ ಲೀಗ್ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್‌ನಂತೆ ಇರಲಿದ್ದು, 8 ತಂಡಗಳೊಂದಿಗೆ ಶುರುವಾಗಿ, ವರ್ಷವಿಡೀ ವಿವಿಧ ದೇಶಗಳಲ್ಲಿ ಪಂದ್ಯಗಳು ನಡೆದು, ಫೈನಲ್ ಸೌದಿಯಲ್ಲಿ ಆಗಲಿದೆ.
ಇದನ್ನೂ ಓದಿ: ಸ್ಟಾರ್ಕ್, ಆರ್ಚರ್, ಆ್ಯಂಡರ್ಸನ್ ಅಲ್ಲ! ಈ ಬೌಲರ್ ಎದುರಿಸುವುದು ಕೊಹ್ಲಿಗೆ ತುಂಬಾ ಕಷ್ಟವಂತೆ!
ಈ ಲೀಗ್ ಐಪಿಎಲ್‌ಗೆ ಸವಾಲು ಒಡ್ಡಬಹುದೇ?
ಐಪಿಎಲ್‌ನ ಬ್ರಾಂಡ್ ಮೌಲ್ಯ ಸುಮಾರು 1.2 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ ವಿಶ್ವದ ದೊಡ್ಡ ಆಟಗಾರರು ಆಡುತ್ತಾರೆ. ಸೌದಿ ಲೀಗ್ ಆಟಗಾರರಿಗೆ ದೊಡ್ಡ ಹಣ ನೀಡಿ ಆಕರ್ಷಿಸಲು ಯತ್ನಿಸಿದರೆ, ಐಪಿಎಲ್‌ನ ಆಕರ್ಷಣೆ ಸ್ವಲ್ಪ ಕಡಿಮೆಯಾಗಬಹುದು ಎಂದು ಕೆಲವರು ಭಾವಿಸುತ್ತಾರೆ. ಆದರೆ, ಐಪಿಎಲ್‌ಗೆ ಸಿಗುವಷ್ಟು ಭಾರತೀಯ ಅಭಿಮಾನಿಗಳ ಬೆಂಬಲ ಮತ್ತು ಇತಿಹಾಸ ವಿಶ್ವದ ಯಾವುದೇ ಟಿ20 ಲೀಗ್ಗೆ ಸಿಗುವುದು ಅಸಾಧ್ಯ. ಸ್ವಲ್ಪ ಹಿನ್ನಡೆಯಾಗಬಹುದೇ ಹೊರೆತೂ ಐಪಿಎಲ್ ಮೀರಿ ಬಳೆಯುವುದು ಯಾವುದೇ ಲೀಗ್ಗೆ ಸಾಧ್ಯವಾಗುವುದಿಲ್ಲ.
ಭಾರತೀಯ ಆಟಗಾರರು ಆಡುತ್ತಾರೆಯೇ?
ಬಿಸಿಸಿಐ ನಿಯಮದ ಪ್ರಕಾರ, ಸಕ್ರಿಯ ಭಾರತೀಯ ಆಟಗಾರರು ದೇಶೀಯ ಅಥವಾ ಟೀಮ್ ಇಂಡಿಯಾದ ಆಟಗಾರರಾಗಿದ್ದರೆ ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ. ಮಾಜಿ ಆಟಗಾರರಿಗೆ ಮಾತ್ರ ಅವಕಾಶವಿದೆ. ಸೌದಿ ಲೀಗ್‌ಗಾಗಿ ಬಿಸಿಸಿಐ ಈ ನಿಯಮ ಬದಲಾಯಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ಸ್ಟಾರ್‌ಗಳಿಲ್ಲದಿದ್ದರೆ, ಸೌದಿ ಇತರ ದೇಶಗಳ ದೊಡ್ಡ ಆಟಗಾರರಿಗೆ ಹೆಚ್ಚು ಹಣ ನೀಡಿ ಆಕರ್ಷಿಸಬಹುದು.
ಇದನ್ನೂ ಓದಿ: ಆರ್ಸಿಬಿ, ಪಂಜಾಬ್ ಅಲ್ಲ! ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಕಂಡ ಕೆಟ್ಟ ತಂಡ ಇದೇ ನೋಡಿ?
ಐಸಿಸಿ ಅನುಮತಿ ಸಿಗುತ್ತದೆಯೇ?
ಯಾವುದೇ ಕ್ರಿಕೆಟ್ ಲೀಗ್ ಶುರುವಾಗಬೇಕಾದರೆ ಐಸಿಸಿಯ ಅನುಮೋದನೆ ಬೇಕು. ಸೌದಿ ಲೀಗ್ ಐಸಿಸಿ ನಿಯಮಗಳನ್ನು ಪಾಲಿಸಿದರೆ ಮಾತ್ರ ಅನುಮತಿ ಸಿಗಲಿದೆ. ಒಟ್ಟಾರೆ, ಈ ಲೀಗ್ ಕ್ರಿಕೆಟ್ ಜಗತ್ತಿನಲ್ಲಿ ಹೊಸ ತಿರುವು ತರಬಹುದು, ಆದರೆ ಐಪಿಎಲ್‌ನ ಸ್ಥಾನಕ್ಕೆ ಧಕ್ಕೆ ತರುವಷ್ಟು ಶಕ್ತಿ ಗಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
March 18, 2025 9:36 PM IST