Shreyas Iyer: ಆಸ್ಪತ್ರೆಯಲ್ಲಿರುವಾಗಲೇ ಅಭಿಮಾನಿಗಳಿಗೆ ಈ ಮಾತು ಹೇಳಿದ ಶ್ರೇಯಸ್‌ ಅಯ್ಯರ್‌!Getting Better Every Day: Shreyas Iyer Shares First Message After Spleen Injury Scare | ಕ್ರೀಡೆ

Shreyas Iyer: ಆಸ್ಪತ್ರೆಯಲ್ಲಿರುವಾಗಲೇ ಅಭಿಮಾನಿಗಳಿಗೆ ಈ ಮಾತು ಹೇಳಿದ ಶ್ರೇಯಸ್‌ ಅಯ್ಯರ್‌!Getting Better Every Day: Shreyas Iyer Shares First Message After Spleen Injury Scare | ಕ್ರೀಡೆ

Last Updated:

Shreyas Iyer: ಡ್ರೆಸ್ಸಿಂಗ್ ರೂಮ್‌ಗೆ ಹೋದ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಅಯ್ಯರ್ ಅವರ ಪ್ರಮುಖ ಆರೋಗ್ಯ ಸೂಚ್ಯಂಕಗಳು (Vitals) ಇದ್ದಕ್ಕಿದ್ದಂತೆ ಕುಸಿದುಬಿದ್ದವು. ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

ಶ್ರೇಯಸ್‌ ಅಯ್ಯರ್‌
ಶ್ರೇಯಸ್‌ ಅಯ್ಯರ್‌

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಯಾರು ತಾನೇ ಮರೆಯಲು ಸಾಧ್ಯ? ಆ ಮ್ಯಾಚ್‌ನಲ್ಲಿ ನಡೆದ ಒಂದು ಘಟನೆ ಈಗ ಕೇಳಿದರೂ ಮೈ ಜುಂ ಎನ್ನುತ್ತದೆ. ಭಾರತದ ಉಪನಾಯಕ ಶ್ರೇಯಸ್ ಅಯ್ಯರ್ (Shreyas Iyer) ಕ್ಯಾಚ್ ಹಿಡಿಯಲು ಹೋಗಿ ಬಿದ್ದಿದ್ದು, ನಾವೆಲ್ಲ ‘ಅಯ್ಯೋ, ಪಕ್ಕೆಲುಬಿಗೆ ಏನೋ ಜೋರಾಗಿ ಬಿದ್ದಿರಬೇಕು’ ಎಂದುಕೊಂಡಿದ್ದೆವು. ಆದರೆ ಆ ಗಾಯದ ಹಿಂದಿನ ಅಸಲಿ ಕಥೆ ಇದೀಗ ಹೊರಬಿದ್ದಿದ್ದು, ಅದು ನಮ್ಮೆಲ್ಲರ ಎದೆಯನ್ನೇ ನಡುಗಿಸುವಂತಿದೆ!

ನಡೆದಿದ್ದೇನು?

ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಅಲೆಕ್ಸ್ ಕ್ಯಾರಿ ಬಾರಿಸಿದ ಚೆಂಡನ್ನು ಹಿಡಿಯಲು ಶ್ರೇಯಸ್ ಅಯ್ಯರ್ ಓಡಿಬಂದರು. ಕಷ್ಟಕರವಾದ ಕ್ಯಾಚ್, ಡೈವ್ ಹೊಡೆದರು, ಆದರೆ ಕ್ಯಾಚ್ ಕೈಚೆಲ್ಲಿತು. ನೆಲಕ್ಕೆ ಬಿದ್ದ ರಭಸಕ್ಕೆ ಅವರಿಗೆ ನೋವಾಗಿತ್ತು. ಫಿಸಿಯೋ ಜೊತೆ ಮೈದಾನದಿಂದ ಹೊರನಡೆದಾಗ, ಎಲ್ಲರೂ ಇದೊಂದು ಸಣ್ಣ ಗಾಯ, ಮುಂದಿನ ಮ್ಯಾಚ್‌ಗೆ ರೆಡಿಯಾಗುತ್ತಾರೆ ಅಂದುಕೊಂಡಿದ್ದರು.

ಆದರೆ, ಡ್ರೆಸ್ಸಿಂಗ್ ರೂಮ್‌ಗೆ ಹೋದ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಅಯ್ಯರ್ ಅವರ ಪ್ರಮುಖ ಆರೋಗ್ಯ ಸೂಚ್ಯಂಕಗಳು (Vitals) ಇದ್ದಕ್ಕಿದ್ದಂತೆ ಕುಸಿದುಬಿದ್ದವು. ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

ಐಸಿಯುನಲ್ಲಿ ಬಯಲಾದ ಸತ್ಯ!

ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿದಾಗ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಅದು ಬರೀ ಪಕ್ಕೆಲುಬಿನ ಗಾಯವಾಗಿರಲಿಲ್ಲ! ಶ್ರೇಯಸ್ ಅಯ್ಯರ್ ಅವರ ‘ಗುಲ್ಮ’ (Spleen) ಕ್ಕೆ ಗಂಭೀರ ಪೆಟ್ಟಾಗಿತ್ತು ಮತ್ತು ಆಂತರಿಕ ರಕ್ತಸ್ರಾವ (Internal Bleeding) ಶುರುವಾಗಿತ್ತು! ಇದು ಅತ್ಯಂತ ಅಪಾಯಕಾರಿ ಸ್ಥಿತಿ. ತಕ್ಷಣವೇ ವೈದ್ಯರ ತಂಡ ರಕ್ತಸ್ರಾವವನ್ನು ನಿಲ್ಲಿಸಿ, ಅವರನ್ನು ನಿಕಟ ನಿಗಾ ವಹಿಸಲು ಐಸಿಯುಗೆ ದಾಖಲಿಸಿತು. ಯಪ್ಪಾ! ಒಂದು ಕ್ಯಾಚ್‌ನಿಂದ ಪರಿಸ್ಥಿತಿ ಎಲ್ಲಿಯವರೆಗೆ ಹೋಯಿತು ನೋಡಿ!

ಕೊನೆಗೂ ಬಂತು ಗುಡ್ ನ್ಯೂಸ್!

ಈ ಶಾಕಿಂಗ್ ಸುದ್ದಿಯಿಂದ ಕಂಗಾಲಾಗಿದ್ದ ಅಭಿಮಾನಿಗಳಿಗೆ ಈಗ ನಿರಾಳವಾಗಿದೆ. ಸ್ವತಃ ಶ್ರೇಯಸ್ ಅಯ್ಯರ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ, “ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ, ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.

ಬಿಸಿಸಿಐ ಕೂಡ ಅಧಿಕೃತ ಹೇಳಿಕೆ ನೀಡಿ, “ಅಯ್ಯರ್ ಸ್ಥಿತಿ ಈಗ ಸ್ಥಿರವಾಗಿದೆ. ಅಕ್ಟೋಬರ್ 28 ರಂದು ಮಾಡಿದ ಸ್ಕ್ಯಾನ್‌ನಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ” ಎಂದು ಖಚಿತಪಡಿಸಿದೆ.

“ಅಪರೂಪದ ಪ್ರತಿಭೆಗೆ ಅಪರೂಪದ ಘಟನೆ”

ತಂಡದ ಸದಸ್ಯರೂ ಕೂಡ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದರು. ಟಿ20 ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದೇ ಒಂದು ರೀತಿ ಭಾವುಕವಾಗಿತ್ತು. “ನೋಡಿ, ನಾವೇನು ಡಾಕ್ಟರ್‌ಗಳಲ್ಲ. ಹೊರಗಿನಿಂದ ನೋಡಿದಾಗ ನಮಗೂ ಅದು ಸಾಮಾನ್ಯ ಗಾಯದಂತೆ ಕಾಣಿಸಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿತ್ತು. ಅವರು ಈಗ ಸುಧಾರಿಸುತ್ತಿದ್ದಾರೆ ಅನ್ನೋದೇ ನಮಗೆ ಸಮಾಧಾನ. ಕೆಲವೊಮ್ಮೆ, ಅಪರೂಪದ ಪ್ರತಿಭೆಗಳಿಗೆ ಇಂತಹ ಅಪರೂಪದ ಘಟನೆಗಳು ನಡೆದುಬಿಡುತ್ತವೆ” ಎಂದು ಸೂರ್ಯ ಹೇಳಿದ್ದಾರೆ.

ಸದ್ಯಕ್ಕೆ ಅಯ್ಯರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕ್ರಿಕೆಟ್‌ಗೆ ಮರಳಲು ಬಹಳ ಸಮಯ ಬೇಕಾಗುತ್ತದೆ. ಮುಂಬರುವ ನವೆಂಬರ್-ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಅವರು ಸಂಪೂರ್ಣ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲ, ಜನವರಿ 2026ರಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಸರಣಿಯಲ್ಲಿ ಆಡುವುದೂ ಅನುಮಾನವಾಗಿದೆ.