Last Updated:
ಶ್ರೀಲಂಕಾ ನೀಡಿದ್ದ 169ರನ್ಗಳ ಗುರಿಯನ್ನ ಬೆನ್ನಟ್ಟಿದ ಲಿಟ್ಟನ್ ದಾಸ್ ಬಳಗ ಕೊನೆಯ ಓವರ್ನಲ್ಲಿ ಇನ್ನು ಒಂದು ಎಸೆತ ಇರುವಂತೆ ರೋಚಕ ಗೆಲುವು ಸಾಧಿಸಿತು. ಆರಂಭಿಕ ಬ್ಯಾಟರ್ ಸೈಫ್ ಹಸನ್ (61) ಹಾಗೂ ತೌಹಿದ್ ಹೃದೋಯ್( 58) ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಯಾದರು.
ಏಷ್ಯಾಕಪ್ನ ಸೂಪರ್ 4ನ (Asia Cup) ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಲೀಗ್ನಲ್ಲಿ ಅಜೇಯವಾಗಿ ಉಳಿದಿದ್ದ ಶ್ರೀಲಂಕಾ (Sri Lanka vs Bangladesh) ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿ ಗೆಲುವಿನ ಖಾತೆ ತೆರೆದಿದೆ. ಶ್ರೀಲಂಕಾ ನೀಡಿದ್ದ 169ರನ್ಗಳ ಗುರಿಯನ್ನ ಬೆನ್ನಟ್ಟಿದ ಲಿಟ್ಟನ್ ದಾಸ್ ಬಳಗ ಕೊನೆಯ ಓವರ್ನಲ್ಲಿ ಇನ್ನು ಒಂದು ಎಸೆತ ಇರುವಂತೆ ರೋಚಕ ಗೆಲುವು ಸಾಧಿಸಿತು. ಆರಂಭಿಕ ಬ್ಯಾಟರ್ ಸೈಫ್ ಹಸನ್ (61) ಹಾಗೂ ತೌಹಿದ್ ಹೃದೋಯ್( 58) ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಯಾದರು.
169 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 1 ರನ್ಗಳಾಗುವಷ್ಟರಲ್ಲಿ ಆರಂಭಿಕ ತಾಂಜಿನ ಹಸನ್ ವಿಕೆಟ್ ಕಳೆದುಕೊಂಡಿತು. ತಾಂಜಿದ್ ಖಾತೆ ಖಾತೆ ತೆರೆಯದೇ ತುಷಾರ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ನಿರ್ಗಮಿಸಿದರು. ಆದರೆ 2ನೇ ವಿಕೆಟ್ಗೆ ಒಂದಾದ ನಾಯಕ ಲಿಟನ್ ದಾಸ್ ಹಾಗೂ ಸೈಫ್ 2ನೇ ವಿಕೆಟ್ ಜೊತೆಯಾಟದಲ್ಲಿ 54 ರನ್ಗಳ ಜೊತೆಯಾಟ ನೀಡಿದರು. ದಾಸ್ 16 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 23 ರನ್ಗಳಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಯುವ ಆಟಗಾರ ಹೃದೋಯ್, ಸೈಫ್ ಹಸನ್ ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 27 ಎಸೆತಗಳಲ್ಲಿ 45 ರನ್ಗಳಿಸಿದರು. ತಂಡದ ಗೆಲುವಿಗೆ 36 ಎಸೆತಗಳಲ್ಲಿ 55 ರನ್ಗಳ ಅಗತ್ಯವಿದ್ದಾಗ ಸೈಫ್ ಹಸನ್ ಹಸರಂಗ ಬೌಲಿಂಗ್ನಲ್ಲಿ ವೆಲ್ಲಾಲಗೆ ಕ್ಯಾಚ್ ನೀಡಿ ಔಟ್ ಆದರು. ಹಸನ್ 45 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು. ಹೃದೋಯ್ 37 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ 58 ರನ್ಗಳಿಸಿ ತಂಡದ ಗೆಲುವಿಗೆ 9 ರನ್ಗಳ ಅಗತ್ಯವಿದ್ದಾಗ ಚಮೀರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಕೊನೆಯ ಓವರ್ನಲ್ಲಿ ಗೆಲುವಿಗೆ 5 ರನ್ಗಳ ಅಗತ್ಯವಿತ್ತು ಜಾಕರ್ ಅಲಿ ( 4 ಎಸೆತಗಳಲ್ಲಿ 9 ರನ್) ಬೌಂಡರಿ ಬಾರಿಸಿ 2ನೇ ಎಸೆತದಲ್ಗಲಿ ವಿಕೆಟ್ ಒಪ್ಪಿಸಿದರು. ಕೊನೆಯ 4 ಎಸೆತಗಳಲ್ಲಿ ಕೇವಲ 1 ರನ್ ಅಗತ್ಯವಿತ್ತು. ಆದರೆ ಜಾಕರ್ ಅಲಿ ನಂತರ ಬಂದ ಮೆಹೆದಿ ಹಸನ್ 2 ಎಸೆತಗಳನ್ನಾಡಿ ರನ್ಗಳಿಸದೇ ಕೀಪರ್ಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಆದರೆ 5ನೇ ಎಸೆತದಲ್ಲಿ ನೌಸಾದ್ ಅಹ್ಮದ್ 1 ರನ್ ಗಳಿಸಿ ಬಾಂಗ್ಲಾದೇಶಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಶ್ರೀಲಂಕಾ ಪರ ವನಿಂದು ಹಸರಂಗ 22ಕ್ಕೆ 2 ವಿಕೆಟ್, ಶನಕ 21ಕ್ಕೆ2, ದುಷ್ಮಂತ ಚಮೀರ 32ಕ್ಕೆ1, ನುವಾನ್ ತುಷಾರ 42ಕ್ಕೆ1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್ಗಳಿಸಿತ್ತು. ದಾಸುನ್ ಶನಕ 37 ಎಸೆತಗಳಲ್ಲಿ 6 ಸಿಕ್ಸರ್, 3 ಬೌಂಡರಿಗಳ ನೆರವಿನಿಂದ ಅಜೇಯ 64 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ನಿಸ್ಸಾಂಕ 22, ಕುಸಾಲ್ ಮೆಂಡಿಸ್ 34, ಚರಿತ್ ಅಸಲಂಕಾ 21 ರನ್ಗಳಿಸಿದ್ದರು.
ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನ ಭಾರತದ ವಿರುದ್ಧ ಸೆಪ್ಟಂಬರ್ 24ರಂದು ಇದೇ ಮೈದಾನದಲ್ಲಿ ಆಡಲಿದೆ. ಮಾರನೆಯ ದಿನ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಸೋತ ಶ್ರೀಲಂಕಾ ತಂಡ ಸೆಪ್ಟೆಂಬರ್ 23ರಂದು ಅಬುಧಾಬಿಯಲ್ಲಿ ಪಾಕಿಸ್ತಾನವನ್ನ ಎದುರಿಸಲಿದೆ.
September 20, 2025 11:47 PM IST