Last Updated:
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ 100 ಜೋಡಿಗಳ ಸಾಮೂಹಿಕ ವಿವಾಹ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.
ದಕ್ಷಿಣ ಕನ್ನಡ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (Trust) ಪುತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನಲ್ಲಿ (Puttur) 3 ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ (Program) ನಡೆಯಲಿದೆ.
ನವೆಂಬರ್ 29, 30 ರಂದು ನಡೆಯಲಿರುವ ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ನವಜೋಡಿಗಳಿಗೆ ತಾಂಬೂಲ ಶಾಸ್ತ್ರ ಮತ್ತು ಮಂಗಳವಸ್ತು ವಿತರಣೆ ಕಾರ್ಯಕ್ರಮ ಪುತ್ತೂರಿನ ಸುಭದ್ರ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಶ್ರೀನಿವಾಸ ಕಲ್ಯಾಣದ ಜೊತೆಗೆ 100 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡುವ ಸಂಕಲ್ಪವನ್ನು ಪುತ್ತಿಲ ಪರಿವಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ನವ ಜೋಡಿಗಳಿಗೆ ತಾಂಬೂಲ ಶಾಸ್ತ್ರ ಮತ್ತು ಮಂಗಳ ವಸ್ತುಗಳನ್ನು ನೀಡಲಾಗಿದೆ. ಸುಮಾರು 14 ಜೋಡಿಗಳಿಗೆ ಮೊದಲ ಹಂತದಲ್ಲಿ ತಾಂಬೂಲ ಶಾಸ್ತ್ರ ಮತ್ತು ಮಂಗಳ ವಸ್ತುವನ್ನು ನೀಡಲಾಯಿತು.
ಹಿಂದೂ ಸಂಪ್ರದಾಯದ ಪ್ರಕಾರ ಈ ತಾಂಬೂಲ ಶಾಸ್ತ್ರವನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ನೀಡಲಾಯಿತು. ಅರ್ಚಕ ಕೃಷ್ಣ ಉಪಾಧ್ಯಾಯ ತಾಂಬೂಲ ಶಾಸ್ತ್ರದ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಗಣ್ಯರು ಎಲ್ಲಾ ಜೋಡಿಗಳಿಗೆ ಮಂಗಳ ವಸ್ತುವನ್ನು ನೀಡಿದ್ದಾರೆ.
ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
ವರನಿಗೆ ಸಂಬಂಧಿಸಿದ ಬಟ್ಟೆ ಅಂಗಿ ಮತ್ತು ಲುಂಗಿ, ವಧುವಿಗೆ ಸೀರೆ, ಬಳೆ ಮೊದಲಾದುವುಗಳನ್ನು ನೀಡಲಾಯಿತು. ನವೆಂಬರ್ 29 ಮತ್ತು 30 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 29 ರಂದು ರಾಜ್ಯದ ಎಲ್ಲಾ ಸ್ವಾಮೀಜಿಗಳ ಹಿಂದೂ ಸಮಾವೇಶ, 30 ರಂದು ಮಧ್ಯಾಹ್ನದಂದು ಸಾಮೂಹಿಕ ವಿವಾಹ ಮತ್ತು ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಈ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ.
Dakshina Kannada,Karnataka
November 11, 2025 12:59 PM IST