South Africa vs England: ‘ಮಹರಾಜ’ನ ದಾಳಿಗೆ ದಿಕ್ಕಾಪಾಲಾದ ಇಂಗ್ಲೆಂಡ್! ಏಕದಿನ ಪಂದ್ಯದಲ್ಲಿ 131ಕ್ಕೆ ಆಂಗ್ಲರ ಪತನ | South Africa vs England: Hosts Bowl England Out for 131 in First ODI | ಕ್ರೀಡೆ

South Africa vs England: ‘ಮಹರಾಜ’ನ ದಾಳಿಗೆ ದಿಕ್ಕಾಪಾಲಾದ ಇಂಗ್ಲೆಂಡ್! ಏಕದಿನ ಪಂದ್ಯದಲ್ಲಿ 131ಕ್ಕೆ ಆಂಗ್ಲರ ಪತನ | South Africa vs England: Hosts Bowl England Out for 131 in First ODI | ಕ್ರೀಡೆ

ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​​ ಇಳಿದ ಇಂಗ್ಲೆಂಡ್ ಮೂರನೇ ಓವರ್‌ನಲ್ಲಿಯೇ ಬೆನ್ ಡಕೆಟ್ (5) ವಿಕೆಟ್ ಕಳೆದುಕೊಂಡಿತು. ಡೆಕೆಟ್ ವೇಗಿ ನಾಂಡ್ರೆ ಬರ್ಗರ್‌ ಬೌಲಿಂಗ್​​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು. ನಂತರ 3ನೇ ಸ್ಥಾನದಲ್ಲಿ ಬಂದ ಜೋ ರೂಟ್ (14), ಜೇಮೀ ಸ್ಮಿತ್ ಅವರೊಂದಿಗೆ 31 ರನ್​ ಸೇರಿಸಿ ತಂಡವನ್ನು 50ರ ಸಮೀಪಕ್ಕೆ ಕೊಂಡೊಯ್ದರು.

ಜೇಮಿ ಸ್ಮಿತ್ ಏಕಾಂಗಿ ಅರ್ಧಶತಕ

ಅದರೆ 17 ರನ್ ಗಳಿಸಿದ ರೂಟ್ ಲುಂಗಿ ಎನ್​ಗಿಡಿ ಬೌಲಿಂಗ್​​ನಲ್ಲಿ ಕೀಪರ್ ರಿಕಲ್ಟನ್​ಗೆ ಕ್ಯಾಚ್ ನೀಡಿ ಔಟಾದರು. ನಂತರ ನಾಯಕ ಹ್ಯಾರಿ ಬ್ರೂಕ್ ಸ್ಮಿತ್ ಜೊತೆಗೂಡಿ ಉತ್ತಮವಾಗಿ ಆಡಿ 38 ರನ್​ಸ್​ ಸೇರಿಸಿದ್ದರು. ಆದರೆ ಬ್ರೂಕ್ ಕೇವಲ 12 ರನ್ ಗಳಿಸಿ ರನೌಟ್ ಆದರು. ಇಲ್ಲಿಂದ ಇಂಗ್ಲೆಂಡ್ ಚೇತರಿಕೆ ಕಾಣಲಿಲ್ಲ, ಜೇಮಿ ಸ್ಮಿತ್ 48 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 54 ರನ್​ಗಳಿಸಿ ಮಲ್ಡರ್​ ಬೌಲಿಂಗ್​​​ನಲ್ಲಿ ಕಾರ್ಬಿನ್ ಬಾಷ್​ಗೆ ಕ್ಯಾಚ್ ನೀಡಿ ಔಟ್ ಆದರು. ಇವರ ವಿಕೆಟ್​ನೊಂದಿಗೆ ಇಂಗ್ಲೆಂಡ್ ಪತನದ ಆದಿ ಹಿಡಿಯಿತು.

30ರನ್​ಗಳಿಗೆ 7 ವಿಕೆಟ್ ಪತನ

ಒಂದು ಹಂತದಲ್ಲಿ ಇಂಗ್ಲೆಂಡ್ 101 ರನ್‌ಗಳಿಗೆ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಇಲ್ಲಿಂದ ತಂಡವು 30 ರನ್‌ಗಳನ್ನು ಗಳಿಸುವಷ್ಟರಲ್ಲಿ ಕೊನೆಯ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಕೆಟ್ ಕೀಪರ್ ಜೋಸ್ ಬಟ್ಲರ್ 15 ರನ್ ಗಳಿಸಿದರು, ಉಳಿದ 6 ಬ್ಯಾಟ್ಸ್‌ಮನ್‌ಗಳು 10 ರನ್‌ಗಳ ಗಡಿಯನ್ನು ಮುಟ್ಟಲು ಸಹ ಸಾಧ್ಯವಾಗಲಿಲ್ಲ. ಇಂಗ್ಲಿಷ್ ತಂಡವು ಕೇವಲ 24.3 ಓವರ್‌ಗಳಿಗೆ ಆಲೌಟ್ ಆಯಿತು.

ಮಹಾರಾಜ ಮಾರಕ ದಾಳಿ

ದಕ್ಷಿಣ ಆಫ್ರಿಕಾ ಪರ ಮಹಾರಾಜ್ 4 ವಿಕೆಟ್ ಪಡೆದು ಮಿಂಚಿದರು. ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ 22 ರನ್‌ಗಳಿಗೆ 4 ವಿಕೆಟ್ ಪಡೆದರು. ಇದು ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಒಬ್ಬರ ಅತ್ಯುತ್ತಮ ಏಕದಿನ ಬೌಲಿಂಗ್ ಪ್ರದರ್ಶನವಾಗಿದೆ. ಮಧ್ಯಮ ವೇಗಿ ವಿಯಾನ್ ಮುಲ್ಡರ್ 33 ರನ್‌ಗಳಿಗೆ 3 ವಿಕೆಟ್ ಪಡೆದರು. ಎಡಗೈ ವೇಗಿ ನಾಂಡ್ರೆ ಬರ್ಗರ್ ಮತ್ತು ಬಲಗೈ ವೇಗಿ ಲುಂಗಿ ಎನ್‌ಗಿಡಿ ತಲಾ 1 ವಿಕೆಟ್ ಪಡೆದರು.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಇಂಗ್ಲೆಂಡ್‌  ಪ್ಲೇಯಿಂಗ್-11 : ಹ್ಯಾರಿ ಬ್ರೂಕ್ (ನಾಯಕ), ಜೇಮೀ ಸ್ಮಿತ್, ಬೆನ್ ಡಕೆಟ್, ಜೋ ರೂಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಸೋನಿ ಬೇಕರ್.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್-11 : ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಟೋನಿ ಡಿ ಜಾರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ವಿಯಾನ್ ಮುಲ್ಡರ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್ ಮತ್ತು ಲುಂಗಿ ಎನ್‌ಗಿಡಿ.

ಸರಣಿಯ ಎರಡನೇ ಏಕದಿನ ಪಂದ್ಯ ಸೆಪ್ಟೆಂಬರ್ 4 ರಂದು ನಡೆಯಲಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ 3 ಏಕದಿನ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಉಳಿದ 2 ಏಕದಿನ ಪಂದ್ಯಗಳು ಸೆಪ್ಟೆಂಬರ್ 4 ಮತ್ತು 7 ರಂದು ಲಾರ್ಡ್ಸ್ ಮತ್ತು ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಸೆಪ್ಟೆಂಬರ್ 10, 12 ಮತ್ತು 14 ರಂದು ಕಾರ್ಡಿಫ್, ಮ್ಯಾಂಚೆಸ್ಟರ್ ಮತ್ತು ನಾಟಿಂಗ್‌ಹ್ಯಾಮ್‌ನಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ.