Last Updated:
ರಜತ್ ಉಳ್ಳಾಲ 1 ವರ್ಷ ಪರಿಶ್ರಮದಿಂದ 6 ಅಡಿ ಎತ್ತರದ ಶ್ರೀಮಂಗಳಾದೇವಿಯ ಆಯಿಲ್ ಪೈಂಟ್ ಚಿತ್ರವನ್ನು ನಿರ್ಮಿಸಿ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಕಲಾವಿದರ ತರಬೇತಿ ಇಲ್ಲದೆ 500 ಗಂಟೆ ವಿನಿಯೋಗಿಸಿದ್ದಾರೆ.
ಮಂಗಳೂರು ನಗರದ ಅಧಿದೇವತೆ ಶ್ರೀಮಂಗಳಾದೇವಿಯ (Mangaladevi) ಈ ಚಿತ್ರವನ್ನೊಮ್ಮೆ ನೋಡಿದರೆ ಇದು ಕೈಯಲ್ಲಿ ಬಿಡಿಸಿದ ಚಿತ್ರವೇ? ಅಥವಾ ಫೋಟೊ (Photo) ತೆಗೆದದ್ದೇ? ಎಂದು ಅನುಮಾನ ಮೂಡುವಷ್ಟು ನೈಜವಾಗಿ ಮೂಡಿದೆ. ಮೀನುಗಾರಿಕಾ ಬೋಟ್ (Boat) ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಯುವಕ ರಜತ್ ಉಳ್ಳಾಲ ಈ ಚಿತ್ರದ (Drawing) ರೂವಾರಿ. ಇವರು ಕ್ಯಾನ್ವಾಸ್ ಬೋರ್ಡ್‌ನಲ್ಲಿ ಆಯಿಲ್ ಪೈಂಟ್ ಮೂಲಕ ಸೊಗಸಾಗಿ ಚಿತ್ರ ಬರೆದು ಎಲ್ಲರ ಗಮನಸೆಳೆಯುವಂತೆ ಮಾಡಿದ್ದಾರೆ.
ಉರ್ವ ನಿವಾಸಿ ಯಶವಂತ್ ಹಾಗೂ ಗಿರಿಜಾ ದಂಪತಿಯ ಪುತ್ರ ರಜತ್ ಉಳ್ಳಾಲ ಈ ಚಿತ್ರ ಬರೆದು ಸೈ ಅನಿಸಿಕೊಂಡವರು. 6 ಅಡಿ ಎತ್ತರದ ಪ್ರೇಮ್ ಸಹಿತ 6.45 ಅಡಿ ಇರುವ ಈ ಚಿತ್ರವನ್ನು ರಜತ್ ಇತ್ತೀಚೆಗೆ ಶ್ರೀಮಂಗಳಾದೇವಿ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ.
ರಜತ್ ಉಳ್ಳಾಲ, 2 ವರ್ಷಗಳ ಹಿಂದೆ ಉರ್ವ ಮಾರಿಗುಡಿಯ ದೇವಿಯ ಚಿತ್ರವನ್ನು ಬರೆದು ಅರ್ಪಿಸಿದ್ದರು. ಆಗಲೇ ಅವರಿಗೆ ಶ್ರೀಮಂಗಳಾದೇವಿಯ ಚಿತ್ರ ಬರೆಯುವ ಉದ್ದೇಶವಿತ್ತು. ಅದಕ್ಕಾಗಿ 2 ವರ್ಷಗಳ ಹಿಂದೆ ಅನುಮತಿ ಪಡೆದಿದ್ದರಂತೆ. ದೇವಾಲಯದ ಆಡಳಿತ ಮಂಡಳಿಯ ಅನುಮತಿ ಸಿಕ್ಕತಕ್ಷಣ ಗರ್ಭಗುಡಿಯ ದೇವಿಯ ಫೋಟೋವನ್ನು ತೆಗೆದುಕೊಂಡು ತಂದಿದ್ದರು. ಈ ಚಿತ್ರ ರಚನೆಗೆ 1 ವರ್ಷ ತೆಗೆದುಕೊಂಡಿದ್ದಾರೆ. ಬೆಳಗ್ಗಿನಿಂದ ಸಂಜೆ ಫೈಬರ್ ಬೋಟ್ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಚಿತ್ರ ರಚನೆ ಕಾರ್ಯದಲ್ಲಿ ತೊಡಗಿದ್ದರು.
ವಿಶೇಷವೆಂದರೆ ರಜತ್ ಉಳ್ಳಾಲ ಚಿತ್ರ ಕಲಾವಿದನಲ್ಲ. ಚಿತ್ರ ಬಿಡಿಸುವ ಆಸಕ್ತಿ ಇರುವವರು. ಚಿತ್ರ ರಚನೆಯ ತರಗತಿಗೆ ಹೋದವರಲ್ಲ. ಯಾರಿಂದಲೂ ತರಬೇತಿ ಪಡೆದವರಲ್ಲ. ಇವರದ್ದು ಏಕಲವ್ಯ ಕಲಿಕೆ. ಸಣ್ಣದರಿಂದ ಚಿತ್ರ ರಚನೆಯ ಬಗ್ಗೆ ಪ್ರೀತಿಯಿತ್ತು. ಕಳೆದ 8-9 ವರ್ಷಗಳಿಂದ ಬಿಡುವಿನ ಸಮಯ ಸ್ವಂತ ಆಸಕ್ತಿಯಿಂದ ಚಿತ್ರ ರಚನೆ, ಪೈಂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅವರು ಯಾವುದೇ ತರಬೇತಿ ಹೊಂದಿದ ಚಿತ್ರ ರಚನಾಕಾರರಿಗಿಂತ ಕಡಿಮೆಯಿಲ್ಲದಂತೆ ಚಿತ್ರ ರಚಿಸುತ್ತಾರೆ.
ಈ ಚಿತ್ರಕ್ಕಾಗಿಯೇ 500 ಗಂಟೆ ವಿನಿಯೋಗ!
Dakshina Kannada,Karnataka
October 18, 2025 1:43 PM IST