Last Updated:
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವದಲ್ಲಿ ಭಾರತೀಯ ಸೇನೆಯ ಶೌರ್ಯ, ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಘಟನೆ, ಆಪರೇಷನ್ ಸಿಂಧೂರ ಮಾಹಿತಿ, ಧಾರ್ಮಿಕತೆ ಜೊತೆಗೆ ರಾಷ್ಟ್ರಭಕ್ತಿ ಹೇರಳ ಚಿತ್ರಿಕೆಗಳ ಪ್ರದರ್ಶನ
ದಕ್ಷಿಣ ಕನ್ನಡ: ಸಾಮಾನ್ಯವಾಗಿ ಸಾರ್ವಜನಿಕ ಗಣೇಶೋತ್ಸವ (Ganesha Festival) ಕಾರ್ಯಕ್ರಮದಲ್ಲಿ ಧಾರ್ಮಿಕತೆಗೆ (Religious) ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ (Mahalingeshwara) ದೇವಸ್ಥಾನದ ಗದ್ದೆಯಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಸಾರ್ವಜನಿಕ ಗಣೇಶೋತ್ಸವ ಪ್ರತಿ ವರ್ಷವೂ ಕೊಂಚ ಡಿಫರೆಂಟ್ (Different) ಆಗಿದೆ.
ಈ ಬಾರಿ ಭಾರತೀಯ ಸೇನೆಯ ಶೌರ್ಯವನ್ನು ಸಾರುವ ಭಿತ್ತಿಚಿತ್ರಗಳನ್ನು ಗಣೇಶನಿಗಾಗಿ ನಿರ್ಮಿಸಿರುವ ಪೆಂಡಾಲ್ ಸುತ್ತ ಅಳವಡಿಸಲಾಗಿದೆ. ಅದರಲ್ಲೂ ಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಮತ್ತು ಆ ಬಳಿಕ ನಡೆದ ಭಾರತೀಯ ವಾಯುಸೇನೆಯ ಕಾರ್ಯಾಚರಣೆಯ ಬಗ್ಗೆ ಈ ಬಾರಿ ಸಂದೇಶವನ್ನು ನೀಡುವ ಭಿತ್ತಿಪತ್ರಗಳನ್ನು ಅಳವಡಿಸಲಾಗಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಇಲ್ಲಿ ಕೆಲವು ಮಾಹಿತಿ ಫಲಕವನ್ನು ಅಳವಡಿಸಲಾಗಿದ್ದು, ಭಾರತೀಯ ವಾಯುಸೇನೆ ಬಳಸುವ ಯುದ್ಧ ವಿಮಾನಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ. ಭಾರತೀಯ ಸೇನೆಯ ಶೌರ್ಯವನ್ನು ಪ್ರದರ್ಶಿಸುವ ಕೆಲವು ಭಿತ್ತಿಪತ್ರಗಳೂ ಇಲ್ಲಿದ್ದು, ಧಾರ್ಮಿಕತೆಯ ಜೊತೆಗೆ ರಾಷ್ಟ್ರ ಭಕ್ತಿಯೂ ಜಾಗೃತವಾಗಿರಲಿ ಎನ್ನುವ ಉದ್ದೇಶದಿಂದ ಈ ಹೊಸ ಯೋಚನೆಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.
ದೈವಭಕ್ತಿಗೂ ಮಿಗಿಲಾಯ್ತು ರಾಷ್ಟ್ರಭಕ್ತಿ!
ಬಾಲಗಂಗಾಧರ ತಿಲಕ್ ಅವರು ಬ್ರಿಟಿಷರ ವಿರುದ್ಧ ಪ್ರಜೆಗಳನ್ನು ಒಟ್ಟು ಸೇರಿಸಲು ಗಣೇಶೋತ್ಸವಗಳನ್ನು ಆರಂಭಿಸಿದ್ದರು. ಆ ಮೂಲಕ ಭಾರತೀಯರೆಲ್ಲರನ್ನೂ ಒಂದುಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿದ್ದರು. ಪ್ರತಿಯೊಬ್ಬನಲ್ಲೂ ಭಾರತೀಯತೆಯನ್ನು ಬೆಳೆಸಬೇಕು ಎನ್ನುವ ಉದ್ದೇಶವೂ ಈ ಗಣೇಶೋತ್ಸವ ಕಾರ್ಯಕ್ರಮದಲ್ಲಿದ್ದು, ಇದೇ ಕಾರಣಕ್ಕೆ ಧಾರ್ಮಿಕತೆಯ ಜೊತೆಗೆ ರಾಷ್ಟ್ರಪ್ರೇಮದ ಜಾಗೃತಿಗೂ ಇಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ.
Dakshina Kannada,Karnataka
August 30, 2025 12:49 PM IST