Last Updated:
ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ 82 ರನ್‌ಗಳ ಅರ್ಧಶತಕದ ನೆರವಿನಿಂದ 246 ರನ್‌ಗಳ ಗುರಿ ನೀಡಿತು. ಪ್ರಭಸಿಮ್ರಾನ್ ಸಿಂಗ್ 42, ಪ್ರಿಯಾಂಶ್ ಆರ್ಯ 36, ಸ್ಟೋಯ್ನಿಸ್ 34 ರನ್ಗಳಿಸಿದರು.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 27 ನೇ ಪಂದ್ಯದಲ್ಲಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಿಡಿಸಿದ ಸಿಡಿಲಬ್ಬರದ 82 ರನ್‌ಗಳ ಅರ್ಧಶತಕದ ನೆರವಿನಿಂದ 246 ರನ್‌ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ (82) ಅರ್ಧಶತಕ ಸಿಡಿಸಿದರೆ, ಪ್ರಭಸಿಮ್ರಾನ್ ಸಿಂಗ್ (42), ಪ್ರಿಯಾಂಶ್ ಆರ್ಯ (36) ಹಾಗೂ ಸ್ಟೋಯ್ನಿಸ್ (34) ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿತು. ಆದರೆ ಪಂಜಾಬ್ ಕಿಂಗ್ಸ್‌ಗೆ ಆರಂಭಿಕರು ಅಬ್ಬರದ ಆರಂಭ ನೀಡುವ ಮೂಲಕ ನಾಯಕನ ನಿರ್ಧಾರವನ್ನ ಸಮರ್ಥಿಸಿಕೊಂಡರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ ಕೇವಲ 4 ಓವರ್ಗಳಲ್ಲಿ 66 ರನ್‌ಗಳ ಜೊತೆಯಾಟ ಬಂದಿತು. ಪ್ರಿಯಾಂಶ್ ಆರ್ಯ 13 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 36 ರನ್ ಗಳಿಸಿ ಔಟಾದರೆ, ಪ್ರಭಸಿಮ್ರನ್ ಸಿಂಗ್ 23 ಎಸೆತಗಳಲ್ಲಿ ಬೌಂಡರಿ, 1 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು.
ಇವರಿಬ್ಬರ ನಂತರ ಬಂದವರು ನಾಯಕ ಶ್ರೇಯಸ್ಗೆ ನೆರವಾಗಲಿಲ್ಲ. ಒಂದು ಅಯ್ಯರ್ ಅಬ್ಬರಿಸುತ್ತದ್ದರೆ, ಮತ್ತೊಂದು ಕಡೆ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು. ನೆಹಾಲ್ 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 27, ಶಶಾಂಕ್ ಸಿಂಗ್ 3 ಎಸೆತಗಳಲ್ಲಿ 2, ಮ್ಯಾಕ್ಸ್ವೆಲ್ 7 ಎಸೆತಗಳಲ್ಲಿ 3 ರನ್ಗಳಿಸಿ ಔಟ್ ಆದರು. ಅಯ್ಯರ್ 18ನೇ ಓವರ್ನಲ್ಲಿ ಔಟ್ ಆಗುವ ಮುನ್ನ ಕೇವಲ 36 ಎಸೆತಗಳಲ್ಲಿ ತಲಾ 6 ಬೌಂಡರಿ, 6 ಸಿಕ್ಸರ್ಗಳ ಸಹಿತ 82 ರನ್ಗಳಿಸಿದ್ದರು. ಹರ್ಷಲ್ ಪಟೇಲ್ ಒಂದೇ ಓವರ್ನಲ್ಲಿ ಅಯ್ಯರ್, ಮ್ಯಾಕ್ಸ್ವೆಲ್ ಇಬ್ಬರನ್ನ ಔಟ್ ಮಾಡಿ ಪಂಜಾಬ್ಗೆ ಶಾಕ್ ನೀಡಿದರು.
ಆದರೆ ಕೊನೆಯಲ್ಲಿ ಅಬ್ಬರಿಸಿದ ಮಾರ್ಕಸ್ ಸ್ಟೋಯ್ನಿಸ್ ಕೇವಲ 11 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 34 ರನ್ಗಳಿಸಿ ತಂಡದ ಮೊತ್ತವನ್ನ 245ಕ್ಕೆ ಕೊಂಡೊಯ್ದರು. ಮೊಹಮ್ಮದ್ ಶಮಿ ಎಸೆದ ಕೊನೆ ಓವರ್ನಲ್ಲಿ ಸ್ಟೋಯ್ನಿಸ್ ಸತತ 4 ಸಿಕ್ಸರ್ ಸಿಡಿಸಿದರು.
ಹರ್ಷಲ್ ಪಟೇಲ್ 42ಕ್ಕೆ4, ಇಶಾನ್ ಮಾಲಿಂಗ್ 45ಕ್ಕೆ 2 ವಿಕೆಟ್ ಪಡೆದರು. ಉಳಿದವರು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು ಮಾತ್ರವಲ್ಲದೆ, ದುಬಾರಿಯಾದರು. ಶಮಿ 4 ಓವರ್ಗಳಲ್ಲಿ 75 ರನ್ ಬಿಟ್ಟುಕೊಟ್ಟು ದುಬಾರಿಯಾದರು.
April 12, 2025 9:28 PM IST