Last Updated:
ಬಾಂಗ್ಲಾದೇಶ ತಂಡವು 100/1 ರನ್ ಗಳಿಸಿ ಸುಲಭವಾಗಿ 245ರನ್‌ಗಳ ಗುರಿಯನ್ನ ಬೆನ್ನಟ್ಟಬಹುದಾದ ಸ್ಥಿತಿಯಲ್ಲಿತ್ತು. ಆದರೆ ಕೇವಲ 5 ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು.
ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Team) ತವರು ನೆಲದಲ್ಲಿ ಏಕದಿನ ಕ್ರಿಕೆಟ್ನಲ್ಲಿ ತನ್ನ ಚಕ್ರಾಧಿಪತ್ಯ ಮುಂದುವರಿಸಿದೆ. ಬಾಂಗ್ಲಾದೇಶ (Bangladesh) ವಿರುದ್ಧದ ಎರಡು ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದ ಶ್ರೀಲಂಕಾ, ಮೂರು ಏಕದಿನ ಸರಣಿಯಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಬುಧವಾರ ಕೊಲಂಬೊದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸಾಮೂಹಿಕವಾಗಿ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕಾ 77 ರನ್‌ಗಳ ಅಂತರದಿಂದ ಅದ್ಭುತ ಗೆಲುವು ಸಾಧಿಸಿತು. 100ಕ್ಕೆ1 ವಿಕೆಟ್ ಇದ್ದ ಬಾಂಗ್ಲಾದೇಶ ಕೇವಲ 5 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲನ್ನು ಅನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 49.2 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲೌಟ್ ಆಗಿತ್ತು. ನಾಯಕ ಚರಿತ್ ಅಸಲಂಕಾ 123 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 106ರನ್‌ಗಳ ಶತಕ ಗಳಿಸಿದರೆ, ಕುಸಾಲ್ ಮೆಂಡಿಸ್ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 45 ರನ್ಗಳಿಸಿದರು. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ತಸ್ಕಿನ್ ಅಹ್ಮದ್ (4/47) ನಾಲ್ಕು ವಿಕೆಟ್ ಪಡೆದರು, ತನ್ಜೀಮ್ ಹಸನ್ ಶಕೀಬ್ (3/45) ಮೂರು ವಿಕೆಟ್ ಪಡೆದರು. ತನ್ವೀರ್ ಇಸ್ಲಾಂ ಮತ್ತು ನಜ್ಮುಲ್ ಹೊಸೈನ್ ಶಾಂತೋ ತಲಾ ಒಂದು ವಿಕೆಟ್ ಪಡೆದರು.
ನಂತರ ಬಾಂಗ್ಲಾದೇಶ 35.5 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟ್ ಆಗುವ ಮೂಲಕ 77ರನ್‌ಗಳ ಸೋಲು ಕಂಡಿತು. ಆರಂಭಿಕ ಬ್ಯಾಟರ್ ತಂಜೀದ್ ಹಸನ್ 61 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 62 ಮತ್ತು ಜಾಕಿರ್ ಅಲಿ 64 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 51ರನ್ಗಳಿಸಿ ನಡೆಸಿದ ಹೋರಾಟ ಗೆಲುವಿಗೆ ಸರಿಯಾಗಲಿಲ್ಲ. ಶ್ರೀಲಂಕಾದ ಬೌಲರ್‌ಗಳ ಪೈಕಿ ವನಿಂದು ಹಸರಂಗ (4/10) ನಾಲ್ಕು ವಿಕೆಟ್ ಪಡೆದರೆ, ಕಮಿಂದು ಮೆಂಡಿಸ್ (3/19) ಮೂರು ವಿಕೆಟ್ ಪಡೆದು ಮಿಂಚಿದರು. ಅಸಿತಾ ಫೆರ್ನಾಂಡೊ ಮತ್ತು ಮಹೀಶ್ ತೀಕ್ಷಣ ತಲಾ ಒಂದು ವಿಕೆಟ್ ಪಡೆದರು.
ಬಾಂಗ್ಲಾದೇಶ ತಂಡವು 100/1 ರನ್ ಗಳಿಸಿ ಸುಲಭವಾಗಿ 245ರನ್‌ಗಳ ಗುರಿಯನ್ನ ಬೆನ್ನಟ್ಟಬಹುದಾದ ಸ್ಥಿತಿಯಲ್ಲಿತ್ತು. ಆದರೆ ಕೇವಲ 5 ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು. 17ನೇ ಓವರ್ಲ್ಲಿ ನಜ್ಮುಲ್ ಹೊಸೈನ್ ಶಾಂತೋ (23) ರನೌಟ್ ಆದರು. ಆಗ ತಂಡದ ಮೊತ್ತ 100ಕ್ಕೆ2. ಮುಂದಿನ ಓವರ್‌ನಲ್ಲಿ ಲಿಟನ್ ದಾಸ್ (0) ಎಲ್‌ಬಿಡಬ್ಲ್ಯೂ ಆಗಿ ಔಟ್ ಆದರು. ಕಮಿಂಡು ಮೆಂಡಿಸ್ 19ನೇ ಓವರ್‌ನಲ್ಲಿ ತೌಹಿದ್ ಹೃದಯ್ (1) ಅವರನ್ನು ಔಟ್ ಮಾಡಿದರು. ಮೆಹಿದಿ ಹಸನ್ ಮಿರಾಜ್ (0) 20ನೇ ಓವರ್‌ನಲ್ಲಿ ಹಸರಂಗ ಬೌಲಿಂಗ್ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. 21ನೇ ಓವರ್‌ನಲ್ಲಿ ಮೆಂಡಿಸ್ 1 ರನ್ಗಳಿಸಿದ್ದ ತಂಜೀಮ್ ಹಸನ್ ಸಾಕಿಬ್ ರನ್ನ ಹಾಗೂ ತಸ್ಕಿನ್ ಅಹ್ಮದ್ (0) ಒಂದೇ ಓವರ್‌ನಲ್ಲಿ ಔಟ್ ಮಾಡಿದರು. ಇದರೊಂದಿಗೆ ಬಾಂಗ್ಲಾದೇಶ 100ಕ್ಕೆ1 ಇದ್ದ ಸ್ಥಿತಿಯಿಂದ 105ಕ್ಕೆ8 ಸ್ಥಿತಿಗೆ ತಲುಪಿತು. ಕೇವಲ 5 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು.
ಈ ಅದ್ಭುತ ಕಮ್ಬ್ಯಾಕ್ ಮೂಲಕ ಶ್ರೀಲಂಕಾ ವಿಶೇಷ ದಾಖಲೆ ನಿರ್ಮಿಸಿತು. ಅತಿ ಕಡಿಮೆ ರನ್‌ಗಳ ಅವಧಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶ್ರೀಲಂಕಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತೀಚಿನ ದಾಖಲೆಯೊಂದಿಗೆ, ಅದು 39 ವರ್ಷಗಳ ಹಿಂದಿನ ಸಾಧನೆಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು. 2008 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ, ಶ್ರೀಲಂಕಾ 3 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಬಳಿಸಿತು. 1986 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ 6 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಬಳಿಸಿತ್ತು. ಶ್ರೀಲಂಕಾ ಈ ಪಂದ್ಯದೊಂದಿಗೆ ಈ ದಾಖಲೆಯನ್ನು ಮುರಿಯಿತು. 2014ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ, ಭಾರತ 8 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಬಳಿಸಿತು.
July 03, 2025 5:01 PM IST