Last Updated:
ಮಂಗಳಾ ಕ್ರೀಡಾಂಗಣ ಮಂಗಳೂರು ಅಭಿವೃದ್ಧಿಗೆ ಮೂರು ಕೋಟಿ ಅನುದಾನ ಮೀಸಲಾಗಿ, ಎರಡು ತಿಂಗಳು ಬಂದ್ ಆಗಲಿದೆ. ಸಿಂಥೆಟಿಕ್ ಟ್ರ್ಯಾಕ್ ದುರಸ್ತಿ, ವಾಕಿಂಗ್ ಪಾಥ್, ಪೆನ್ಸಿಂಗ್ ಸೇರಿ ಸುಧಾರಣೆ ನಡೆಯಲಿದೆ.
ಮಂಗಳೂರು: ಬೆಳ್ಳಂಬೆಳಗ್ಗೆ ಅಥವಾ ಸಾಯಂಕಾಲ (Evening) ಸಮಯದಲ್ಲಿ ನಡಿಗೆ, ಓಟ, ವ್ಯಾಯಾಮಕ್ಕೆ ನಗರ, ಹಳ್ಳಿ ಎಲ್ಲಾ ಬದಿಯಿಂದಲೂ ಬರುವ ಜನ ಆಶ್ರಯಿಸುವುದು ಸಾರ್ವಜನಿಕ ಕ್ರೀಡಾಂಗಣವನ್ನೇ. ಅದರಲ್ಲೂ ಕೂಡ ಅನೇಕ ಬಡ ವಿದ್ಯಾರ್ಥಿಗಳಿಗೆ (Students) ಹಾಗೂ ದೈಹಿಕ ಪರೀಕ್ಷೆಯ ಅಭ್ಯಾಸಾರ್ಥಿಗಳಿಗಂತೂ ಮೈದಾನ ನಿಜವಾಗಿಯೂ ದೊಡ್ಡ ವರ. ಆದರೆ ಇಲ್ಲಿಯ ಮೈದಾನಕ್ಕೆ (Ground) 60 ದಿನ ಬೀಗ ಹಾಕಲಿದೆ. ಆದರೆ ಇದು ಕಷ್ಟಕ್ಕಲ್ಲ, ಶುಭಕಾರ್ಯಕ್ಕೆ! ಅದ್ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿಷಯ.
ಮಂಗಳೂರಿನ ʼಮಂಗಳಾ ಕ್ರೀಡಾಂಗಣʼ ಅಭಿವೃದ್ಧಿ ಕಾಮಗಾರಿ ನಡೆಸಲು ಯುವಜನ ಕ್ರೀಡಾ ಇಲಾಖೆ ಮುಂದಾಗಿದೆ. ಜನವರಿಯಿಂದ ಮುಂದಿನ ಎರಡು ತಿಂಗಳುಗಳ ಕಾಲ ಮಂಗಳಾ ಕ್ರೀಡಾಂಗಣ ಬಂದ್ ಆಗಲಿದೆ. ಮಂಗಳಾ ಕ್ರೀಡಾಂಗಣ ಮಂಗಳೂರು ನಗರದ ಪ್ರತಿಷ್ಠಿತ ಅಂಗಣವಾಗಿದ್ದು, ಇಲ್ಲಿ 400 ಮೀಟರ್ಗಳ ಸಿಂಥೆಟಿಕ್ ಟ್ರ್ಯಾಕ್ ಇದೆ. ಯಾವುದೇ ಓಟದ ಸ್ಪರ್ಧೆ, ಲಾಂಗ್ ಜಂಪ್, ಹೈ ಜಂಪ್, ಶಾಟ್ ಪುಟ್, ಜಾವ್ಲಿನ್ ಥ್ರೋ ಸೇರಿದಂತೆ ಹಲವು ಕ್ರೀಡೆಗಳನ್ನು ನಡೆಸಬಹುದು.
ಮಂಗಳೂರು ನಗರದ ಬಹುತೇಕ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು, ಕ್ರೀಡೆಗಳು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಸರ್ಕಾರ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ ಮೂರು ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಿದ್ದು, ಈ ಹಿನ್ನೆಲೆ ಎರಡು ತಿಂಗಳುಗಳ ಕಾಲ ಕ್ರೀಡಾಂಗಣ ಬಂದ್ ಮಾಡಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ.
ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್ ದುರಸ್ಥಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಸದ್ಯ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಅಲ್ಲಲ್ಲಿ ಗುಂಡಿಗಳಿದ್ದು, ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗುತ್ತಿದೆ. ಟ್ರ್ಯಾಕ್ ಅಭಿವೃದ್ಧಿ ಜೊತೆಗೆ ಸುತ್ತಲೂ ವಾಕಿಂಗ್ ಪಾಥ್, ಪೆನ್ಸಿಂಗ್ ಅಳವಡಿಕೆ, ಸುತ್ತಲೂ ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡಲಾಗುತ್ತದೆ.
ಮಂಗಳೂರು ನಗರದ ಜನ ಬೆಳಗ್ಗಿನ ವಾಕಿಂಗ್, ವ್ಯಾಯಾಮ, ಜಾಗಿಂಗ್ಗೆ ಮಂಗಳಾ ಕ್ರೀಡಾಂಗಣವನ್ನೇ ಆಶ್ರಯಿಸಿದ್ದರು. ಇದೀಗ ಅಭಿವೃದ್ಧಿ ಕಾರ್ಯಕ್ಕಾಗಿ ಎರಡು ತಿಂಗಳು ಕ್ರೀಡಾಂಗಣ ಬಂದ್ ಆಗಲಿದ್ದು ಮುಂದೆ ಇತರ ಕ್ರೀಡಾಂಗಣವನ್ನು ಆಶ್ರಯಿಸಬೇಕಿದೆ. ಹಲವು ದಶಕಗಳ ಹಿಂದೆ ಮಣ್ಣಗುಡ್ಡ ಮೈದಾನವಾಗಿದ್ದ ಈ ಕ್ರೀಡಾಂಗಣ 2009ರಲ್ಲಿ ದ್ವಿತೀಯ ಹಂತದ ಕಾಮಗಾರಿ ನಡೆದು ಅಭಿವೃದ್ಧಿಯಾಗಿತ್ತು.
ಹೊಸ ಹೊಸ ನಿಯಮ ಜಾರಿಯ ಸಾಧ್ಯತೆ
ಆ ಸಂದರ್ಭದಲ್ಲಿ ಸಿಂಥೆಟಿಕ್ ಟ್ರ್ಯಾಕ್ನೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೂ ಯೋಗ್ಯವಾಗಿತ್ತು. ಅಥ್ಲೆಟಿಕ್ ವಿಭಾಗದ ಸ್ಪರ್ಧೆಗಳಿಗೆ ಹೇಳಿ ಮಾಡಿಸಿದ ಕ್ರೀಡಾಂಗಣ ಇದಾಗಿದ್ದು, ಶೌಚಾಲಯ, ಡ್ರೆಸ್ಸಿಂಗ್ ರೂಂಗಳನ್ನು ಹೊಂದಿದೆ. ಪ್ರಧಾನ ಗ್ಯಾಲರಿಯ ಜೊತೆಗೆ ಸುತ್ತಲೂ ಕುಳಿತುಕೊಳ್ಳಲು ಅವಕಾಶವಿದ್ದು, ಸುಮಾರು 20 ಸಾವಿರ ಜನ ಕೂರಬಹುದಾಗಿದೆ. ಮಂಗಳಾ ಕ್ರೀಡಾಂಗಣಕ್ಕೆ ಬಾಡಿಗೆ ದರ ಪರಿಷ್ಕರಣೆಗೆ ಯುವಜನ ಕ್ರೀಡಾ ಇಲಾಖೆ ಮುಂದಾಗಿದ್ದು, ಕ್ರೀಡಾಂಗಣ ಅಭಿವೃದ್ಧಿ ಬಳಿಕ ಹೊಸ ದರ ಜಾರಿ ಮಾಡುವ ಸಾಧ್ಯತೆಗಳಿವೆ.
Dakshina Kannada,Karnataka
Dec 23, 2025 11:39 AM IST