Last Updated:
ಮಹಾತ್ಮ ಗಾಂಧಿಗೆ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಐದು ಗ್ರಾಮಗಳ ಮುಖ್ಯಸ್ಥರು ಗಾಂಧಿ ಗುಡಿ ಸ್ಥಾಪಿಸಿದ್ದಾರೆ. ಗಾಂಧೀಜಿ ಮೂರು ಬಾರಿ ಮಂಗಳೂರಿಗೆ ಬಂದಿದ್ದರು.
ಮಂಗಳೂರು: ತುಳುನಾಡಲ್ಲಿ ಬರೀ ಪೌರಾಣಿಕ, ಜಾನಪದ, ಚಾರಿತ್ರಿಕ ಸಾಧಕರು ದೈವದ (Demi God) ಸ್ಥಾನಕ್ಕೇರಿ ಪೂಜೆ ಪಡೆದಿಲ್ಲ. ಬದಲಿಗೆ ನಮ್ಮ ಸಾಮಾಜಿಕ ಹಾಗೂ ಸ್ವಾತಂತ್ರ್ಯ ಹೋರಾಟದ ಪ್ರತಿನಿಧಿಗಳೂ ಕೂಡ ದೈವದ ಸಮ ಗೌರವ (Respect) ಪಡೆಯುತ್ತಿದ್ದಾರೆ. ದೇವರಾಗಿದ್ದಾರೆ (God) ಎಂಬುದಕ್ಕೆ ಈ ಗರೋಡಿಯೇ ಸಾಕ್ಷಿ.
ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗುಡಿ ಮಾಡಿರುವ ನಿತ್ಯ ಪೂಜೆ ಸಲ್ಲಿಸುವ ಕ್ಷೇತ್ರ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ. ಮಹಾತ್ಮನ ನಿತ್ಯ ಪೂಜೆ ಇಲ್ಲಿ ನಡೆಯುತ್ತದೆ. ವಿಶೇಷ ದಿನಗಳಾದ ಗಾಂಧೀ ಜಯಂತಿ, ಹುತಾತ್ಮ ದಿನ, ಸ್ವಾತಂತ್ರ್ಯ ದಿನಾಚರಣೆ, ಪ್ರಜಾರಾಜ್ಯೋತ್ಸವದಂದು ವಿಶೇಷ ಸೇವೆಗಳೂ ಇರುತ್ತದೆ. ಅದರಲ್ಲೂ ಗಾಂಧಿ ಜಯಂತಿ ಅಂಗವಾಗಿ ರಾತ್ರಿ ಶ್ರೀ ಗಣಪತಿ ದೇವರ ವಿಗ್ರಹ ಹಾಗೂ ಬ್ರಹ್ಮ ಬೈದರ್ಕಳ ಮೂರ್ತಿಗೆ ಪಲ್ಲಕ್ಕಿ ಉತ್ಸವ ನಡೆಯುವುದು ಇಲ್ಲಿನ ವಿಶೇಷ.
ರಾತ್ರಿ 7.30ಕ್ಕೆ ಗಣಪತಿ ಮತ್ತು ಬ್ರಹ್ಮ ಬೈದರ್ಕಳ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಗಾಂಧಿ ಗುಡಿಯ ಮುಂದೆ ತಂದು ಆರತಿ ಸೇವೆ ಮಾಡಲಾಗುತ್ತದೆ. ಇದೇ ರೀತಿ ಪ್ರತಿವರ್ಷ ಗಾಂಧಿ ಜಯಂತಿ ಸಹಿತ ರಾಷ್ಟ್ರೀಯ ಉತ್ಸವಗಳಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
1948ರ ಡಿ.15ರಂದು ಕಂಕನಾಡಿ ಗರಡಿ ಕ್ಷೇತ್ರದ ಬಲಬದಿಯ ಮೂಲೆಯಲ್ಲಿ ಗಾಂಧೀಜಿಯ ಮಣ್ಣಿನ ಮೂರ್ತಿ ನಿರ್ಮಿಸಲಾಗಿತ್ತು. ನಂತರ ಎಡ ಬದಿಯ ಪ್ರವೇಶದಲ್ಲೇ ನಾರಾಯಣ ಗುರುಗಳ ಗುಡಿ ಪಕ್ಕದಲ್ಲೇ ಗಾಂಧಿಯ ಅಮೃತ ಶಿಲೆಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಳಕ್ಕೆ ಬರುವ ಭಕ್ತರು ಗುರುಗಳಿಗೆ ಪೂಜೆ ಸಲ್ಲಿಸಿ ಮುಂದೆ ಸಾಗಲಿ ಎಂಬುದು ಇದರ ಉದ್ದೇಶ.
ಸತ್ಯ, ಶಾಂತಿ, ಅಹಿಂಸೆ ಮತ್ತು ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು, ಜಗತ್ತಿಗೆ ಅಹಿಂಸೆಯ ತತ್ವ ಸಾರಿ, ಹುತಾತ್ಮರಾಗಿರುವ ಮಹಾತ್ಮ ಗಾಂಧೀಜಿ ತತ್ವಗಳು ಮುಂದಿನ ಪೀಳಿಗೆಗೆ ತಿಳಿಯಲಿ ಎಂಬ ಉದ್ದೇಶದಿಂದ ಐದು ಗ್ರಾಮಗಳ ಮುಖ್ಯಸ್ಥರಾಗಿದ್ದ ಗಾಂಧಿವಾದಿ ನರ್ಸಪ್ಪ ಸಾಲ್ಯಾನ್, ಸೋಮಪ್ಪ ಪಂಡಿತ್ ಮತ್ತು ವೆಂಕಪ್ಪ ಅವರು ಗಾಂಧಿ ಗುಡಿ ಸ್ಥಾಪಿಸಿದ್ದರು.
ಇಲ್ಲಿ ದೈವ ದೇವರಂತೆ ಗಾಂಧಿ ಪ್ರತಿಮೆಗೂ ಪ್ರತಿನಿತ್ಯ ಮೂರು ಹೊತ್ತು ಆರತಿ ಸಹಿತ ಪೂಜಾ ಕೈಂಕರ್ಯ ಮತ್ತು ಒಂದು ಕುಡ್ತೆ ಹಾಲು ಮತ್ತು ಎರಡು ಬಾಳೆ ಹಣ್ಣಿನ ನೈವೇದ್ಯ ಅರ್ಪಣೆ ಮಾಡಲಾಗುತ್ತಿದೆ. ತುಳುನಾಡಿನ ಸತ್ಯದ ಸಾಕಾರಮೂರ್ತಿಗಳಾಗಿದ್ದ ಅವಳಿ ವೀರರಾದ ಕೋಟಿ ಚೆನ್ನಯರ ಆರಾಧನಾ ಕ್ಷೇತ್ರ ಗರಡಿಯಲ್ಲಿ ಕುಳಿತು ಭಗವದ್ಗೀತೆ ಓದುವ ಭಂಗಿಯಲ್ಲಿ ಗಾಂಧಿ ಪ್ರತಿಮೆ ಇದೆ. ಗರಡಿ ಕ್ಷೇತ್ರದಲ್ಲಿ ಪ್ರತಿವರ್ಷ ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ, ಗಾಂಧಿ ಪ್ರತಿಮೆಯಿಂದ ಪ್ರೇರಣೆ ಪಡೆಯುತ್ತಿದ್ದಾರೆ.
ಮಂಗಳೂರಿಗೆ ಮೂರು ಬಾರಿ ಬಂದಿದ್ದರು ಗಾಂಧೀಜಿ
Dakshina Kannada,Karnataka
October 14, 2025 2:22 PM IST