Success Story: ಐವತ್ತು ಸಾವಿರಕ್ಕೆ ಪರದಾಡಿದ ಕುಟುಂಬ ಈಗ ಮಿಲಿಯೇನರ್!‌ ಹೇಗಿತ್ತು ಗೊತ್ತಾ ಈ ಮಹಿಳೆಯ ಸಾಹಸ?! | Puttur Bhavya V Shetty unveils success of 20 lakh Vahivaatu Nursery | ವ್ಯಾಪಾರ ಸುದ್ದಿ

Success Story: ಐವತ್ತು ಸಾವಿರಕ್ಕೆ ಪರದಾಡಿದ ಕುಟುಂಬ ಈಗ ಮಿಲಿಯೇನರ್!‌ ಹೇಗಿತ್ತು ಗೊತ್ತಾ ಈ ಮಹಿಳೆಯ ಸಾಹಸ?! | Puttur Bhavya V Shetty unveils success of 20 lakh Vahivaatu Nursery | ವ್ಯಾಪಾರ ಸುದ್ದಿ

Last Updated:

ಪುತ್ತೂರಿನ ಭವ್ಯಾ ವಿ. ಶೆಟ್ಟಿ 50 ಸಾವಿರ ಸಾಲದಿಂದ ಆರಂಭಿಸಿದ ಕಜೆ ನರ್ಸರಿ ಇಂದು 20 ಲಕ್ಷ ವಹಿವಾಟು ನಡೆಸಿ ಮಹಿಳಾ ಉದ್ಯಮದಲ್ಲಿ ಮಾದರಿಯಾಗಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣಕನ್ನಡ: ಬದುಕುವುದಕ್ಕೆ ನೂರಾರು ದಾರಿ ಇದೆ. ಆದರೆ ಬಹುತೇಕ ಮಂದಿ ತಮ್ಮ ಆಯ್ಕೆಯಲ್ಲಿಯೇ ಸೋಲುತ್ತಾರೆ. ಎಷ್ಟೋ ಮಂದಿ ಅವಕಾಶಗಳನ್ನು (Opportunity) ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಮುಂದಾಗುವುದಿಲ್ಲ. ತರಕಾರಿ ಬೆಳೆಸಿಯೂ ಸಾಧನೆ (Achievement) ಮಾಡಿದವರಿದ್ದಾರೆ. ವಿಶೇಷವಾಗಿ ಮಹಿಳೆಯರು ಮನೆಯಲ್ಲಿ ಕುಳಿತುಕೊಂಡು ಹಪ್ಪಳ ಉಪ್ಪಿನಕಾಯಿ (Pickle) ತಯಾರಿಸಿ ಅದನ್ನು ಮಾರಾಟ ಮಾಡಿ ಕುಟುಂಬವನ್ನು ಸಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು (Women) ಉದ್ಯಮಕ್ಷೇತ್ರಕ್ಕೂ ಕಾಲಿಟ್ಟು ಅಲ್ಲಿಯೂ ಯಶಸ್ಸು ಸಾಧಿಸಿದ್ದಾರೆ.

ವಾರ್ಷಿಕ 20 ಲಕ್ಷ ವಹಿವಾಟು!

ಇಂತವರ ಸಾಲಿಗೆ ಪುತ್ತೂರಿನ ಮಹಿಳೆಯೊಬ್ಬರು ಸೇರುತ್ತಾರೆ. ನರ್ಸರಿಯನ್ನು ಉದ್ಯಮವಾಗಿ ಬೆಳೆಸಿಕೊಂಡು ಸಾಕಷ್ಟು ಆರ್ಥಿಕ ಭದ್ರತೆಯನ್ನು ಗಟ್ಟಿಯಾಗಿಸಿಕೊಂಡ ಭವ್ಯಾ ವಿ. ಶೆಟ್ಟಿ ಇತರ ಮಹಿಳೆಯರಿಗೆ ಮಾದರಿಯಾಗಿ ಬೆಳೆದು ನಿಂತಿದ್ದಾರೆ. ಪುತ್ತೂರಿನ ಕೋಡಿಂಬಾಡಿ ಗ್ರಾಮದ ಬೆಳ್ಳಿಪ್ಪಾಡಿಯ ವಿದ್ಯಾಪ್ರಸಾದ್ ಅವರ ಪತ್ನಿ ಭವ್ಯಾ ವಿ. ಶೆಟ್ಟಿ ಅವರು ಇದೀಗ ನರ್ಸರಿ ಉದ್ಯಮಿ. ವಾರ್ಷಿಕವಾಗಿ ಸುಮಾರು 20 ಲಕ್ಷದ ವಹಿವಾಟು ನಡೆಸುವ ಮೂಲಕ ಹಲವಾರು ಮಂದಿಗೆ ಕೆಲಸ ಕೊಟ್ಟು ಅವರಿಗೂ ಆರ್ಥಿಕ ಸಬಲತೆ ಸೃಷ್ಟಿಸಿದ್ದಾರೆ. ಇವರ ನರ್ಸರಿ ಕನಸಿಗೆ ನೀರೆದದ್ದು ಕೋಡಿಂಬಾಡಿಯ ಬೆಳ್ಳಿಪ್ಪಾಡಿ ವಿದ್ಯಾಶ್ರೀ ಸ್ವಸಹಾಯ ಸಂಘ.

50 ಸಾವಿರ ರೂಪಾಯಿ ಸಾಲದಿಂದ ಆರಂಭವಾದ ಉದ್ಯಮ

ಇಲ್ಲಿಯೇ ಅವರ ಸ್ವ ಉದ್ಯೋಗದ ಕನಸು ಆರಂಭ. ಇಲ್ಲಿ 50 ಸಾವಿರ ರೂಪಾಯಿ ಸಾಲದೊಂದಿಗೆ ನರ್ಸರಿಗೆ ಮೊದಲ ಹೆಜ್ಜೆ ಇಡುತ್ತಾರೆ. ಬಳಿಕ ಕೋಡಿಂಬಾಡಿ ಮಾಲಿಂಗೇಶ್ವರ ಸಂಜೀವಿನಿ ಒಕ್ಕೂಟದಿಂದ 1.50 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ನರ್ಸರಿಗೆ ಮತ್ತಷ್ಟು ಹೊಸತನ ನೀಡುತ್ತಾರೆ. ಮೊದಲಿಗೆ ಕೋಡಿಂಬಾಡಿ ಹಾಲು ಉತ್ಪಾದಕ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಇವರು ಅದನ್ನು ಬಿಟ್ಟು ತನ್ನ ನರ್ಸರಿ ನಿರ್ಮಿಸುವ ಕನಸಿಗೆ ಹೆಜ್ಜೆ ಹಾಕುತ್ತಾರೆ. ಪತಿ ವಿದ್ಯಾಪ್ರಸಾದ್ ಕೆಲ ಕಾಲ ನರ್ಸರಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಅದನ್ನು ನಾವೇ ಮಾಡಿದರೆ ಹೇಗೆ ಎಂಬ ಚಿಂತನೆಯೇ ಈ ಕನಸಿಗೆ ಪೂರಕವಾಯಿತು.

10 ವರ್ಷದ ಶ್ರಮ, ಈಗ ಮಿಲಿಯನ್‌ ದುಡಿಮೆ!

ಇದರಿಂದ ಬದುಕು ಕಟ್ಟಿಕೊಳ್ಳಬಹುದು ಎಂಬುವುದು ಖಾತ್ರಿಯಾಗುತ್ತಿರುವಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಅಡಮಾನರಹಿತ ಸಾಲ ಯೋಜನೆಯಲ್ಲಿ ವಿದ್ಯಾಶ್ರೀ ಸ್ವಸಹಾಯ ಸಂಘಕ್ಕೆ 20 ಲಕ್ಷ ರೂಪಾಯಿ ಸಾಲದ ಅವಕಾಶ ದೊರೆತಾಗ ಅದರಲ್ಲಿ 12 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ನರ್ಸರಿಯ ಚೌಕಟ್ಟನ್ನು ದೊಡ್ಡಮಟ್ಟಕ್ಕೆ ವಿಸ್ತಾರ ಮಾಡುವ ಯೋಚನೆ ಮಾಡುತ್ತಾರೆ. ಆದರೆ ಇವರ ಬಳಿಯಲ್ಲಿ ಅಷ್ಟೊಂದು ಜಾಗವಿಲ್ಲ. ಇದಕ್ಕಾಗಿ ಕೆದಿಲ ಗ್ರಾಮದ ಕಜೆ ಎಂಬಲ್ಲಿನ ಜಾಗವೊಂದನ್ನು ಲೀಸ್ ಮೇಲೆ ಪಡೆದುಕೊಂಡು ಈ ದಂಪತಿಗಳಿಬ್ಬರೂ ದೊಡ್ಡ ನರ್ಸರಿಯ ಕನಸನ್ನು ನನಸು ಮಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಈ ನರ್ಸರಿ ಸಾಕಷ್ಟು ಬೆಳೆದಿದೆ. ಒಂದು ಸಮಯದಲ್ಲಿ ಬದುಕಲು ಪರದಾಡುತ್ತಿದ್ದ ಈ ಕುಟುಂಬ ಈಗ ಲಕ್ಷಗಳ ಮೇಲೆ ವಹಿವಾಟು ಮಾಡುತ್ತಿದೆ.

ಇಲ್ಲಿರುವ ಗಿಡಗಳ ಪಟ್ಟಿ ಹೀಗಿದೆ

ಭವ್ಯಾ ವಿ. ಶೆಟ್ಟಿ ಅವರ ಕಜೆ ನರ್ಸರಿಯಲ್ಲಿ ಸಾಕಷ್ಟು ವಿಧದ ಗಿಡಗಳಿವೆ. ವಿವಿಧ ತಳಿಯ ಮಾವಿನ ಗಿಡಗಳಿವೆ. ಹಲವು ಬಗೆಯ ಅಡಿಕೆ ಗಿಡಗಳಿವೆ. ಹೂವಿನ ಗಿಡಗಳನ್ನು ಹೊರತುಪಡಿಸಿದರೆ ಬಹುತೇಕ ಗಿಡಗಳ ತಾಣವಾಗಿ ಕಜೆ ನರ್ಸರಿ ಮಾರ್ಪಟ್ಟಿದೆ. ಕಾಲಪಾಡಿ, ಸ್ವರ್ಣರೇಖಾ, ಕೊಲಂಬೊ, ಕೋಟೂರು ಕೋಣಂ, ಮಲ್ಲಿಕಾ, ರಂಗನಪಳ್ಳಿ, ಸ್ಥಳೀಯ ನಾಟಿ ತಳಿ ನೆಕ್ಕರೆ ಸೇರಿದಂತೆ ವರ್ಷದ ಎಲ್ಲಾ ತಿಂಗಳಲ್ಲೂ ಹಣ್ಣು ಕೊಡುವ ಆಲ್‌ಸೀಸನ್ ಮಾವಿನಗಿಡಗಳು ಇಲ್ಲಿ ನಿಮಗೆ ದೊರಕುತ್ತದೆ. ಶತಮಂಗಳ, ಮೋಯಿತ್‌ನಗರ, ಇಂಟರ್ ಮಂಗಳ, ಸೈಗನ್, ಸ್ಥಳೀಯ ಮಂಗಳ ಹಾಗೂ ಸ್ಥಳೀಯ ನಾಟಿ ತಳಿ ಸೇರಿದಂತೆ ಅಡಿಕೆಯ ಬಹುತೇಕ ತಳಿಗಳು ಕಜೆ ನರ್ಸರಿಯಲ್ಲಿ ಲಭ್ಯವಾಗುತ್ತದೆ. ಇದರ ಜತೆಗೆ ರಂಬುಟಾನ್, ಮ್ಯಾಂಗೋಸ್ಟೀನ್, ಲೆಮೆನ್, ಹಲಸಿನಲ್ಲಿ ಸಿಂಗಾಪೂರ್, ಗಮ್‌ಲೆಸ್ ಸೇರಿದಂತೆ ಹಲವು ತಳಿಗಳು, ಜಾಯಿಕಾಯಿ, ತೆಂಗು, ಪುನರ್‌ಪುಳಿ, ಬರಬ, ಕರಿಮೆಣಸು, ಗೇರು ಸಸಿ, ರಾಮಪತ್ರೆ (ಕಾಣಾಜೆ) ಗಿಡಗಳು ಬೇಕಾದರೂ ನೀವು ಇಲ್ಲಿ ಪಡೆಯಬಹುದು.

ನಾಲ್ಕು ಎಕರೆ ಜಾಗದಲ್ಲಿದೆ ಕಜೆ ನರ್ಸರಿ

ಇದನ್ನೂ ಓದಿ: Birds Festival: ಹಕ್ಕಿಗಳನ್ನು ನೋಡೋಕೆ ಈ ಹಬ್ಬ, ಪಕ್ಷಿ ಪ್ರೇಮಿಗಳಿಗೆ ಖುಷಿಯೋ ಖುಷಿ!

ತಮಿಳುನಾಡು, ಕೇರಳ ಇವರ ಪ್ರಮುಖ ವ್ಯವಹಾರದ ರಾಜ್ಯಗಳು. ಇದರ ಜತೆಗೆ ಬೆಂಗಳೂರಿನ ಮಂದಿಯೂ ಇಲ್ಲಿಂದ ಗಿಡಗಳನ್ನು ಲಾರಿಗಳಲ್ಲಿ ಕೊಂಡು ಹೋಗುತ್ತಾರೆ. ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿನ ರೈತವರ್ಗವೂ ಈ ನರ್ಸರಿಯ ಗಿಡಗಳನ್ನು ಒಯ್ಯುತ್ತಾರೆ. ಈಗ ಕಜೆ ನರ್ಸರಿ ಸುಮಾರು 4 ಎಕರೆ ಸ್ಥಳದಲ್ಲಿ ಬೆಳೆದಿದೆ. ಗುಡ್ಡವೊಂದನ್ನು ಸ್ಟೆಪ್‌ಗಳ ರೀತಿಯಲ್ಲಿ ಕತ್ತರಿಸಿ ಅಲ್ಲಿ ಗಿಡಗಳನ್ನು ಸಾಕುತ್ತಿರುವ ಭವ್ಯಾ ಶೆಟ್ಟಿಯವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರ ಪತಿ ವಿದ್ಯಾಪ್ರಸಾದ್. ಇವರ ಜತೆಗೆ ಇವರ ಮಕ್ಕಳಾದ ರಕ್ಷಿತಾ ಶೆಟ್ಟಿ ಕಾನೂನು ಪದವಿ ಓದುತ್ತಲೇ ತಂದೆ ತಾಯಿಗೆ ಸಹಕಾರ ನೀಡುತ್ತಿದ್ದಾರೆ. ಪುತ್ರ ಜೀವಿತ್ ಕೂಡಾ ಇವರ ನರ್ಸರಿಯ ಭಾಗವಾಗಿದ್ದಾನೆ. 8 ಮಂದಿಯ ಈ ಕುಟುಂಬ ಈಗ ಸಂಜೀವಿನಿಯಲ್ಲಿ ಅರಳಿದ ಕಜೆ ನರ್ಸರಿಯಿಂದ ಸದೃಢವಾಗಿದೆ.