Last Updated:
ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಅಂಗೀಕರಿಸಿದ ನಂತರ, ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಭಾರತೀಯ ಕ್ರಿಕೆಟ್ ತಂಡ ಇನ್ನು ಮುಂದೆ ಪ್ರಾಯೋಜಿಸುವುದಿಲ್ಲ ಎಂದು ಬಿಸಿಸಿಐಗೆ ತಿಳಿಸಿದೆ.
ಡ್ರೀಮ್-11 (Dream-11) ಕಂಪನಿ ಟೀಂ ಇಂಡಿಯಾದ (Team India) ಪ್ರಾಯೋಜಕತ್ವದಿಂದ ಹೊರನಡೆದ ಬಳಿಕ ಎರಡು ಕಂಪನಿಗಳು ಬಿಸಿಸಿಐ (BCCI) ಜೊತೆ ಟೈಟಲ್ ಪ್ರಾಯೋಜಕರಾಗಿ ಕೈಜೋಡಿಸಲು ಆಸಕ್ತಿ ತೋರಿಸಿವೆ. ಮಾಧ್ಯಮ ವರದಿಯ ಪ್ರಕಾರ, ಗುರುವಾರ ಸಂಸತ್ತಿನ ಎರಡೂ ಸದನಗಳಲ್ಲಿ ‘ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ’ಯನ್ನು ಅಂಗೀಕರಿಸಿದ ನಂತರ, ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಭಾರತೀಯ ಕ್ರಿಕೆಟ್ ತಂಡ ಇನ್ನು ಮುಂದೆ ಪ್ರಾಯೋಜಿಸುವುದಿಲ್ಲ ಎಂದು ಬಿಸಿಸಿಐಗೆ ತಿಳಿಸಿದೆ.
ಈ ನಿರ್ಧಾರದಿಂದಾಗಿ ಸೆಪ್ಟೆಂಬರ್ 9 ರಂದು ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ಗೆ ಮುಂಚಿತವಾಗಿ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕಬೇಕಾಗಿದೆ. ಎನ್‌ಡಿಟಿವಿ ಪ್ರಕಾರ, ಎರಡು ಕಂಪನಿಗಳು ಭಾರತೀಯ ಕ್ರಿಕೆಟ್ ತಂಡದ ಶೀರ್ಷಿಕೆ ಪ್ರಾಯೋಜಕರಾಗಲು ಆಸಕ್ತಿ ತೋರಿಸಿವೆ. ಅವುಗಳೆಂದರೆ “ಟೊಯೋಟಾ ಮೋಟಾರ್ ಕಾರ್ಪೊರೇಷನ್ ಮತ್ತು ಫಿನ್‌ಟೆಕ್ ಸ್ಟಾರ್ಟ್ ಅಪ್ ಎಂದು ತಿಳಿದು ಬಂದಿದೆ. ಆದ್ರೆ, ಅಧಿಕೃತ ಟೆಂಡರ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ” ಎಂದು ವರದಿ ತಿಳಿಸಿದೆ.
ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ ಡ್ರೀಮ್-11 ಒಳಗೊಂಡ ಜೆರ್ಸಿಯನ್ನು ಈಗಾಗಲೇ ಮುದ್ರಿಸಲಾಗಿದೆ ಎಂದು ವರದಿ ತಿಳಿಸಿದೆ. ಆದ್ರೆ, ಏಷ್ಯಾ ಕಪ್‌ನಲ್ಲಿ ಅವುಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನಾ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶುಕ್ರವಾರ, ಮಂಡಳಿಯು ದೇಶದ ಕಾನೂನುಗಳನ್ನು ಅನುಸರಿಸುತ್ತದೆ ಎಂದು ತಿಳಿಸಿದ್ದರು.
“ಸರ್ಕಾರ ಅನುಮತಿಸದಿದ್ದರೆ ನಾವು ಏನನ್ನೂ ಮಾಡುವುದಿಲ್ಲ. ಕೇಂದ್ರ ಸರ್ಕಾರವು ರೂಪಿಸುವ ದೇಶದ ಪ್ರತಿಯೊಂದು ನೀತಿಯನ್ನು ಬಿಸಿಸಿಐ ಅನುಸರಿಸುತ್ತದೆ” ಎಂದು ಸೈಕಿಯಾ ಹೇಳಿದರು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಡ್ರೀಮ್ 11 ಅಧಿಕಾರಿಗಳು ಬಿಸಿಸಿಐ ಸಿಇಒ ಹೇಮಾಂಗ್ ಅಮೀನ್ ಅವರನ್ನು ಮಂಡಳಿಯ ಮುಂಬೈ ಕಚೇರಿಯಲ್ಲಿ ಭೇಟಿಯಾಗಿ ತಾವು ಪ್ರಾಯೋಜಕತ್ವವನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಏಷ್ಯಾಕಪ್ ಸೆಪ್ಟೆಂಬರ್ 9 ರಂದು ಆರಂಭವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ. ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಪಂದ್ಯಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ.
August 25, 2025 7:03 PM IST