ಈ ಪಂದ್ಯವು 5430 ದಿನಗಳ ನಂತರ (ಸುಮಾರು 15 ವರ್ಷಗಳು) ಭಾರತದ ಆಡುವ XIನಲ್ಲಿ ಒಂದು ವಿಶೇಷತೆಯನ್ನು ಒಳಗೊಂಡಿದೆ. ಆಧುನಿಕ ಯುಗದ ಮಹಾನ್ ಆಟಗಾರರಾದ ರವಿಚಂದ್ರನ್ ಅಶ್ವಿನ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಲ್ಲದ ಮೊದಲ ತವರಿನ ಟೆಸ್ಟ್ ಇದಾಗಿದೆ.
ಈ ಪಂದ್ಯದಲ್ಲಿ ಭಾರತದ ನಾಯಕರಾಗಿ 25 ವರ್ಷದ ಶುಭ್ಮನ್ ಗಿಲ್ ತವರಿನಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ನಾಯಕತ್ವದ ಮೊದಲ ಪರೀಕ್ಷೆಯು ಉತ್ತಮವಾಗಿತ್ತು, ಆದರೆ ತವರಿನಲ್ಲಿ ನಾಯಕತ್ವ ವಹಿಸಿಕೊಳ್ಳುವುದು ಅವರ ವೃತ್ತಿಜೀವನದ ಹೊಸ ಅಧ್ಯಾಯವನ್ನು ತೆರೆಯಲಿದೆ. ಕಳೆದ ವರ್ಷದ ನ್ಯೂಜಿಲೆಂಡ್ ವಿರುದ್ಧದ ವೈಟ್ವಾಷ್ ಸೋಲಿನ ನಂತರ ಭಾರತದ ತವರಿನಲ್ಲಿ ಟೆಸ್ಟ್ ಪಂದ್ಯವು ಈಗ ಆರಂಭವಾಗುತ್ತಿದ್ದು, ಇದು ತಂಡದಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ.
ರೋಹಿತ್, ಕೊಹ್ಲಿ ಮತ್ತು ಅಶ್ವಿನ್ ಅವರ ನಿವೃತ್ತಿಯು ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಗ್ಯಾಪ್ ಉಂಟುಮಾಡಿದ್ದು, ಯುವ ಆಟಗಾರರಿಗೆ ಹೊಸ ಅವಕಾಶಗಳನ್ನು ಒದಗಿಸಿದೆ. ಭಾರತದ ಈ ತವರಿನ ಟೆಸ್ಟ್ ಸರಣಿಯು ಅಶ್ವಿನ್, ಕೊಹ್ಲಿ ಮತ್ತು ರೋಹಿತ್ ಅವರ ನಿವೃತ್ತಿಯ ನಂತರದ ಮೊದಲ ಪಂದ್ಯ ಇದಾಗಿದೆ. ಕೊಹ್ಲಿ ಮತ್ತು ಅಶ್ವಿನ್ 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂಟ್ ಮಾಡಿದ್ದರು, ರೋಹಿತ್ 2013ರಲ್ಲಿ ಸೇರಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂಲಕ ಅಶ್ವಿನ್ ಮತ್ತು ರೋಹಿತ್-ಕೊಹ್ಲಿ ತಮ್ಮ ತವರಿನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ಮೂವರು ಆಟಗಾರರಿಲ್ಲದೆ ಟೀಮ್ ಇಂಡಿಯಾ ಕೊನೆಯ ಬಾರಿ 2010ರ ನವೆಂಬರ್ 20ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿತ್ತು.
ಅಂದು MS ಧೋನಿ ನಾಯಕತ್ವದ ಭಾರತ ತಂಡವು ಇನ್ನಿಂಗ್ಸ್ ಮತ್ತು 198 ರನ್ಗಳ ಅಂತರದಿಂದ ಗೆದ್ದು ಸರಣಿಯನ್ನು 1-0ರಿಂದ ಗೆದ್ದಿತು. ಇದು 5430 ದಿನಗಳ ಹಿಂದಿನ ಘಟನೆಯಾಗಿದೆ. ಆಗ ತಂಡದಲ್ಲಿದ್ದವರು ಯಾರೂ ಇಂದು ಭಾರತ ತಂಡದಲ್ಲಿಲ್ಲ. ಸಚಿನ್ ಸೆಹ್ವಾಗ್, ಗಂಭೀರ್, ಲಕ್ಷ್ಮಣ್, ಧೋನಿ, ರೈನಾ, ಹರ್ಭಜನ್ ಅಂತಹ ಆಟಗಾರರು ಆ ಪಂದ್ಯದಲ್ಲಿದ್ದರು. ಗಂಭೀರ್ ಇಂದು ಟೀಮ್ ಇಂಡಿಯಾ ಹೆಡ್ ಕೋಚ್ ಆಗಿದ್ದರೆ, ಓಝಾ ಆಯ್ಕೆಗಾರರಾಗಿದ್ದಾರೆ. ಈ ತಂಡದಲ್ಲಿ ಇಶಾಂತ್ ಶರ್ಮಾ ಮಾತ್ರ ಇನ್ನೂ ನಿವೃತ್ತಿಯಾಗಿಲ್ಲವಾದರೂ, ಅವರು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.
ಅಶ್ವಿನ್ ಅವರ ಡೆಬ್ಯೂ (ನವೆಂಬರ್ 6, 2011) ನಂತರ ಭಾರತವು ತವರಿನಲ್ಲಿ 65 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಶ್ವಿನ್ ಎಲ್ಲಾ ಪಂದ್ಯಗಳಲ್ಲೂ ಆಡಿದ್ದರು. ಈ ಅವಧಿಯಲ್ಲಿ ಭಾರತ 47 ಗೆಲುವು, 9 ಸೋಲುಗಳು ಮತ್ತು 9 ಡ್ರಾ ಸಾಧಿಸಿದೆ. 9 ಸೋಲುಗಳಲ್ಲಿ 3 ಸೋಲುಗಳು ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧವೇ ಎದುರಾಗಿತ್ತು. ಅದೇ ಸರಣಿ ಅಶ್ವಿನ್, ರೋಹಿತ್ ಮತ್ತು ಕೊಹ್ಲಿ ಅವರ ಕೊನೆಯ ತವರಿನ ಸರಣಿಯಾಗಿತ್ತು. ಅಶ್ವಿನ್ ತವರಿನಲ್ಲಿ 383 ವಿಕೆಟ್ (ಭಾರತದ ಅತಿ ಹೆಚ್ಚು) ಪಡೆದಿದ್ದಾರೆ ಮತ್ತು 1,989 ರನ್ಗಳು (ಸರಾಸರಿ 26.17, 4 ಶತಕಗಳು) ತಂಡದ ಯಶಸ್ಸಿಗೆ ಮುಖ್ಯ ಕಾರಣವಾಗಿವೆ.
ಅಶ್ವಿನ್ ಅವರ ಡೆಬ್ಯೂ ನಂತರ ತವರಿನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರೆಂದರೆ, ವಿರಾಟ್ ಕೋಹ್ಲಿ . ಕೊಹ್ಲಿ 55 ಪಂದ್ಯಗಳನ್ನಾಡಿದ್ದು, 39ರಲ್ಲಿ ಗೆಲುವು ಸಾಧಿಸಿದ್ದು, 8ರಲ್ಲಿ ಡ್ರಾ, 8 ರಲ್ಲಿ ಸೋಲು ಕಂಡಿದೆ. ಚೇತೇಶ್ವರ್ ಪುಜಾರಾ 50 ಪಂದ್ಯಗಳನ್ನಾಡಿದ್ದು, 37 ಗೆಲುವು,8 ಡ್ರಾ,5 ಸೋಲು ಕಂಡಿದ್ದಾರೆ. ರವೀಂದ್ರ ಜಡೇಜಾ 49 ಪಂದ್ಯಗಳನ್ನಾಡಿದ್ದು, 35 ಗೆಲುವು, 8 ಡ್ರಾ, 6 ಸೋಲು ಕಂಡಿದ್ದಾರೆ. ರೋಹಿತ್ ಶರ್ಮಾ 34 ಪಂದ್ಯಗಳನ್ನಾಡಿದ್ದು, 26 ಗೆಲುವು 2 ಸೋಲು, 6 ಡ್ರಾನಲ್ಲಿ ಅಂತ್ಯವಾಗಿವೆ. ಇದೀಗ ಇವರ್ಯಾರು ಇಲ್ಲದೆ ಟೀಮ್ ಇಂಡಿಯಾ ಕಣಕ್ಕಿಳಿದಿದೆ.
ರವಿಚಂದ್ರನ್ ಅಶ್ವಿನ್ ತವರಿನಲ್ಲಿ 383 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಅನಿಲ್ ಕುಂಬ್ಳೆ (350), ಹರ್ಭಜನ್ ಸಿಂಗ್ (265), ಜಡೇಜಾ (238) ಮತ್ತು ಕಪಿಲ್ ದೇವ್ (219) ಇದ್ದಾರೆ. ಅಶ್ವಿನ್ ಅವರ ಸ್ಪಿನ್ ಮ್ಯಾಜಿಕ್ ತವರಿನಲ್ಲಿ ಭಾರತ ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವುಗಳನ್ನ ತಂದುಕೊಟ್ಟಿದೆ. ಈ ಪಂದ್ಯದಲ್ಲಿ ಭಾರತದಲ್ಲಿ ಅನಾನುಭವಿ ಸ್ಪಿನ್ ಬೌಲರ್ಗಳ ನೇತೃತ್ವದಲ್ಲಿ ಭಾರತ ಕಣಕ್ಕಿಳಿಯುತ್ತಿದೆ. ರವೀಂದ್ರ ಜಡೇಜಾ ಟಾಪ್ ಸ್ಪಿನ್ನರ್ ಆದರೆ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ತಂಡದಲ್ಲಿರುವ ಮತ್ತಿಬ್ಬರು ಸ್ಪಿನ್ನರ್ ಆಗಿದ್ದಾರೆ.
October 02, 2025 1:14 PM IST