Last Updated:
ರೋಹಿತ್ ಶರ್ಮಾ ನಂತರ ಭಾರತ ಟೆಸ್ಟ್ (Test Captain) ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಕೆಲವು ಹೆಸರುಗಳನ್ನ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಐಪಿಎಲ್ 2025ರ (IPl 2025) ಮಧ್ಯದಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಿಟ್ ಮ್ಯಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ರೋಹಿತ್ ಶರ್ಮಾ ನಂತರ ಭಾರತ ಟೆಸ್ಟ್ (Test Captain) ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಕೆಲವು ಹೆಸರುಗಳನ್ನ ಫೈನಲ್ ಮಾಡಲಾಗಿದೆ. ಆದರೆ ಭಾರತ ಟೆಸ್ಟ್ ತಂಡದ ಹೊಸ ನಾಯಕನನ್ನು ಯಾವಾಗ ಘೋಷಿಸಲಾಗುತ್ತದೆ? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಹೊಸ ನಾಯಕನ ಘೋಷಣೆ ಯಾವಾಗ?
ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು,ಈ ಪರಿಸ್ಥಿತಿಯಲ್ಲಿ, ಬಿಸಿಸಿಐ ಈಗ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ. ಕ್ರಿಕ್ಬಝ್ನ ವರದಿಯ ಪ್ರಕಾರ, ಮೇ 23 ರಂದು ಬಿಸಿಸಿಐ ಹೊಸ ನಾಯಕನನ್ನು ಘೋಷಿಸುತ್ತದೆ ಎಂದು ತಿಳಿದುಬಂದಿದೆ. ಹೊಸ ನಾಯಕನನ್ನು ಘೋಷಿಸಲು ಬಿಸಿಸಿಐ ಮಾಧ್ಯಮಗೋಷ್ಠಿಯನ್ನು ಸಹ ಯೋಜಿಸಿದೆ. ಐಪಿಎಲ್ 2025 ರ ನಂತರ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಪ್ರವಾಸದ ಸಮಯದಲ್ಲಿ ಭಾರತ ತಂಡವು ಹೊಸ ಟೆಸ್ಟ್ ನಾಯಕನನ್ನು ಪಡೆಯಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವ ಮೊದಲು ಭಾರತದ ಹೊಸ ಟೆಸ್ಟ್ ನಾಯಕನನ್ನು ಘೋಷಿಸಲಾಗುತ್ತದೆ.
ರೋಹಿತ್ ಶರ್ಮಾ ನಂತರ ಗಿಲ್ ಕ್ಯಾಪ್ಟನ್
ಬಿಸಿಸಿಐ ದೀರ್ಘಾವಧಿಗೆ ನಾಯಕನನ್ನ ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ. ಹಾಗಾಗಿ 25 ವರ್ಷದ ಶುಭ್ಮನ್ ಗಿಲ್ರನ್ನ ಭಾರತೀಯ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಸಾಧ್ಯತೆ ಇದೆ. ಈಗಾಗಲೇ ನಾಯಕತ್ವದ ರೇಸ್ನಲ್ಲಿ ಗಿಲ್ ಸಾಕಷ್ಟು ಮುಂದಿದ್ದಾರೆ. ಜಸ್ಪ್ರೀತ್ ಬುಮ್ರಾ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆಯಾದರೂ, ಗಾಯದಿಂದಾಗಿ ಬುಮ್ರಾ ಅನೇಕ ಪ್ರಮುಖ ಸರಣಿಗಳು ಮತ್ತು ಪಂದ್ಯಾವಳಿಗಳನ್ನು ತಪ್ಪಿಸಿಕೊಂಡಿದ್ದಾರೆ. ಬುಮ್ರಾಗೆ ಆಗಾಗ್ಗೆ ಗಾಯದ ಸಮಸ್ಯೆ ಕಾಡುತ್ತಿರುವುದರಿಂದ ಬುಮ್ರಾ ನಾಯಕತ್ವದ ರೇಸ್ನಲ್ಲಿ ತುಂಬಾ ಹಿಂದುಳಿದಿದ್ದಾರೆ. ನಾಯಕನಾಗುವ ಸ್ಪರ್ಧೆಯಲ್ಲಿ ಗಿಲ್ ಹೆಸರು ಮುಂಚೂಣಿಯಲ್ಲಿದೆ. ಶುಭಮನ್ ಗಿಲ್ ಭಾರತ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ನಿರಂತರವಾಗಿ ಆಡುತ್ತಿದ್ದಾರೆ.
ಗಿಲ್ಗೆ ಇಬ್ಬರಿಂದ ಪೈಪೋಟಿ
ಗಿಲ್ ಪೈಪೋಟಿಯಾಗಿ ವಿಕೆಟ್ ಕೀಪರ್ಗಳಾದ ರಿಷಭ್ ಪಂತ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಹೆಸರುಗಳು ಕೂಡ ಚಾಲ್ತಿಯಲ್ಲಿವೆಯಾದರೂ, ಇವರಿಬ್ಬರಿಂತ ಗಿಲ್ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ. ಕೆಲವು ವರದಿಗಳನ್ನ ನಂಬುವುದಾದರೆ ರಿಷಭ್ ಪಂತ್ರನ್ನ ಉಪನಾಯಕನನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಹೆಸರು ಕೇಳಿ ಬಂದಿದೆಯಾದರೂ ಅವರಿಗೆ 33 ವರ್ಷಗಳಾಗಿರುವುದರಿಂದ ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ವಿರಾಟ್ ಕೊಹ್ಲಿ ನಿವೃತ್ತಿ
ಮಾಧ್ಯಮ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಬಿಸಿಸಿಐ ಜೊತೆ ಮಾತನಾಡಿದ್ದಾರೆ. ಆದರೆ ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿ ಕೊಹ್ಲಿಗೆ ಸ್ವಲ್ಪ ಸಮಯ ತೆಗೆದುಕೊಂಡು ಎಚ್ಚರಿಕೆಯಿಂದ ಯೋಚಿಸುವಂತೆ ಸಲಹೆ ನೀಡಿದೆ ಎಂದು ತೋರುತ್ತದೆ. ವಿರಾಟ್ ಕೊಹ್ಲಿ ತಂಡಕ್ಕೆ ಬಹಳ ಮುಖ್ಯವಾದ ಆಟಗಾರನಾಗಿರುವುದರಿಂದ ತಂಡದ ಆಡಳಿತ ಮಂಡಳಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ತಂಡದೊಂದಿಗೆ ಪ್ರಯಾಣಿಸಬೇಕೆಂದು ಬಯಸುತ್ತದೆ. ವಿರಾಟ್ ಕೊಹ್ಲಿ ಈ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಅಲ್ಲದೆ ಅವರು ತಂಡದಲ್ಲಿರುವ ಅನುಭವಿ ಬ್ಯಾಟರ್ ಆಗಿದ್ದಾರೆ.