Tilak Varma: ಏಷ್ಯಾಕಪ್​​ ಫೈನಲ್​ ವೇಳೆ ಸ್ಲೆಡ್ಜಿಂಗ್ ; ಪಾಕ್ ಕುತಂತ್ರ ಬಿಚ್ಚಿಟ್ಟ ಮ್ಯಾಚ್ ವಿನ್ನರ್ ತಿಲಕ್ / Tilak Varma spoke about Pakistani players sledging during the Asia Cup final 2025 | ಕ್ರೀಡೆ

Tilak Varma: ಏಷ್ಯಾಕಪ್​​ ಫೈನಲ್​ ವೇಳೆ ಸ್ಲೆಡ್ಜಿಂಗ್ ; ಪಾಕ್ ಕುತಂತ್ರ ಬಿಚ್ಚಿಟ್ಟ ಮ್ಯಾಚ್ ವಿನ್ನರ್ ತಿಲಕ್ / Tilak Varma spoke about Pakistani players sledging during the Asia Cup final 2025 | ಕ್ರೀಡೆ

Last Updated:

ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಭಾರತ ಸಂಕಷ್ಟದಲ್ಲಿದ್ದಾಗ ಪಾಕಿಸ್ತಾನ ಆಟಗಾರರು ಸ್ಲೆಡ್ಜಿಂಗ್ ಮಾಡಿರುವ ಬಗ್ಗೆ ತಿಲಕ್ ವರ್ಮಾ ಮಾತಾನಾಡಿದ್ದಾರೆ.

Tilak VarmaTilak Varma
Tilak Varma

ದುಬೈನಲ್ಲಿ ನಡೆದ ಏಷ್ಯಾಕಪ್ 2025 ರ ಫೈನಲ್ (Asia Cup Final) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ (India vs Pakistan) ಭರ್ಜರಿ ಗೆಲುವು ಸಾಧಿಸಿತ್ತು. ಭಾರತ ತಂಡದ ಗೆಲುವಿನಲ್ಲಿ ಸ್ಟಾರ್ ಯಂಗ್ ಬ್ಯಾಟರ್ ತಿಲಕ್ ವರ್ಮಾ (Tilak Varma) ಪ್ರಮುಖ ಪಾತ್ರವಹಿಸಿದರು. ತಿಲಕ್ ಸಂಕಷ್ಟದ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಟೀಮ್ ಇಂಡಿಯಾವನ್ನು (Team India) ಗೆಲುವಿನ ದಡ ಮುಟ್ಟಿಸಿದ್ದರು. ತಿಲಕ್ ಆಟಕ್ಕೆ ದೇಶದೆಲ್ಲೆಡೆ ಭಾರೀ ಮೆಚ್ಚು ವ್ಯಕ್ತವಾಗಿತ್ತು.

ಏಷ್ಯಾಕಪ್ ಗೆಲುವಿನ ಬಳಿಕ ಭಾರತಕ್ಕೆ ಹಿಂತಿರುಗಿರುವ ತಿಲಕ್ ವರ್ಮಾ ಫೈನಲ್ ಪಂದ್ಯದ ವೇಳೆ ನಡೆದ ಕೆಲವು ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಒತ್ತಡದ ಸಮಯದಲ್ಲಿ ಹೇಗೆ ಬ್ಯಾಟಿಂಗ್ ಮಾಡಿದೆ ಎಂಬುದನ್ನು ತಿಳಿಸಿದ್ದಾರೆ.

ಏಷ್ಯಾಕಪ್​​ ಫೈನಲ್​ ವೇಳೆ ಸ್ಲೆಡ್ಜಿಂಗ್

ಆರಂಭದಲ್ಲಿ ಭಾರತ 20 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಲು ಬಂದ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಇದಲ್ಲದೆ, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಅವರೊಂದಿಗಿನ ಜೊತೆಯಾಟ ಟೀಮ್ ಇಂಡಿಯಾ ಗೆಲುವಿಗೆ ಕಾರಣವಾಯಿತು. ಫೈನಲ್ ಪಂದ್ಯದಲ್ಲಿ ತಿಲಕ್ 53 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿ ಭಾರತ ತಂಡಕ್ಕೆ ನೆರವಾದರು.

ಹೈದರಾಬಾದ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ತಿಲಕ್ ವರ್ಮಾ ಪಾಕಿಸ್ತಾನ ಆಟಗಾರರ ಕುತಂತ್ರವನ್ನು ಬಿಚ್ಚಿಟ್ಟಿದ್ದಾರೆ. ಒಂದು ಹಂತದಲ್ಲಿ ಪಾಕಿಸ್ತಾನ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಾಗ ನನನ್ನು ಸ್ಲೆಡ್ಜ್ ಮಾಡಲು ಆಟಗಾರರು ಪ್ರಯತ್ನಿಸಿದರು ಎಂದು ತಿಲಕ್ ಬಹಿರಂಗಪಡಿಸಿದ್ದಾರೆ.

ಸ್ಲೆಡ್ಜಿಂಗ್ ಬಗ್ಗೆ ತಿಲಕ್ ಹೇಳಿದ್ದೇನು?

ನಾಯಕ ಸೂರ್ಯಕುಮಾರ್ ಯಾದವ್ ಅವರ ಮಾತಿಗೆ ನಾನು ಸಮ್ಮತಿಸುತ್ತೇನೆ. ಇದರಲ್ಲಿ ಯಾವುದೇ ಪೈಪೋಟಿ ಇಲ್ಲ. ಪಾಕಿಸ್ತಾನ ನಮಗೆ ಹೊಂದಿಕೆಯಾಗುವುದಿಲ್ಲ. ಆದರೆ ಪ್ರತಿಯೊಂದು ಎದುರಾಳಿ ತಂಡವೂ ವಿಭಿನ್ನ ಯೋಜನೆಗಳೊಂದಿಗೆ ಬರುತ್ತದೆ. ಹೀಗಾಗಿ ಪಾಕಿಸ್ತಾನ ಕೂಡ ಅದನ್ನೇ ಮಾಡಿತು. ನಾನು ಬ್ಯಾಟಿಂಗ್ ಮಾಡಲು ಹೋದಾಗ ನನ್ನ ಮೇಲೆ ಒತ್ತಡವಿತ್ತು. ನನ್ನ ಮನಸ್ಸಿನಲ್ಲಿ ಬಹಳಷ್ಟು ನಡೆಯುತ್ತಿತ್ತು. ಆದರೆ ಒತ್ತಡದಲ್ಲಿ, ನಾನು ನನ್ನ ದೇಶದ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. 140 ಕೋಟಿ ಭಾರತೀಯರಿಗಾಗಿ ಪಂದ್ಯವನ್ನು ಗೆಲ್ಲಿಸಬೇಕು ಅಂದುಕೊಂಡಿದ್ದೆ.

ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ನಮ್ಮ ಮೇಲೆ ಒತ್ತಡ ಇದ್ದಾಗ, ಪಾಕಿಸ್ತಾನ ಆಟಗಾರರು ನನ್ನ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಆದರೆ ನಾನು ಆತುರದಿಂದ ಯಾವುದೇ ದುಡುಕಿನ ಶಾಟ್ ಆಡದಂತೆ ನೋಡಿಕೊಂಡು ಶಾಂತವಾಗಿರಲು ಪ್ರಯತ್ನಿಸಿದೆ. ಪಂದ್ಯದ ವೇಳೆ ಅವರು ನನ್ನನ್ನು ಎಷ್ಟೇ ಕೆಣಕಿದರು, ನಾನು ಅವುಗಳಿಗೆ ಪ್ರತಿಕ್ರಿಯಿಸಲಿಲ್ಲ. ಪಂದ್ಯದ ನಂತರ ನಾನು ಅವುಗಳಿಗೆ ಪ್ರತಿಕ್ರಿಯಿಸಲು ನಿರ್ಧರಿಸಿದೆ ಎಂದು ತಿಲಕ್ ವರ್ಮಾ ಹೇಳಿದ್ದಾರೆ.

ಮುಂದಿನ ವಿಶ್ವಕಪ್ ಮೇಲೆ ಚಿತ್ತ

ಭಾರತ ತಂಡಕ್ಕೆ ಏಷ್ಯಾಕಪ್ ಗೆಲ್ಲಿಸಿ ಕೊಟ್ಟ ತಿಲಕ್ ವರ್ಮಾ ತಮ್ಮ ವೃತ್ತಿಜೀವನದ ಬಹು ದೊಡ್ಡ ಕನಸಿನ ಬಗ್ಗೆ ಮಾತನಾಡಿದ್ದಾರೆ. ನಾನು 2011 ರ ಏಕದಿನ ವಿಶ್ವಕಪ್ ನೋಡುತ್ತಿದ್ದಾಗ ಕ್ರಿಕೆಟ್ ಅನ್ನು ಇಷ್ಟಪಡಲು ಪ್ರಾರಂಭಿಸಿದೆ. ಇದಾದ ನಂತರ ನಾನು ವೃತ್ತಿಪರ ಕ್ರಿಕೆಟ್ ಅನ್ನು ಪ್ರಾರಂಭಿಸಿದೆ. ಮುಂದಿನ ವರ್ಷ ವಿಶ್ವಕಪ್‌ನ ಭಾಗವಾಗಿ ಭಾರತವನ್ನು ಚಾಂಪಿಯನ್ ಮಾಡಬೇಕೆಂಬುದು ನನ್ನ ಅಂತಿಮ ಗುರಿ ಎಂದಿದ್ದಾರೆ.