Last Updated:
ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ, ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ.
ದಕ್ಷಿಣ ಕನ್ನಡ: ಮುತ್ತಿನ ಊರು, ಮಹಾಲಿಂಗೇಶ್ವರನ ತವರು ಪುತ್ತೂರು (Putturu) ಮಲೆಕಾಡುಗಳ ಚಪ್ಪರದಡಿಯ ಸುಂದರ ನಗರ. ತನ್ನ ಅದ್ಭುತ ಗಿರಿಸೌಷ್ಟವ್ಯದೊಂದಿಗೆ ಕಂಗೊಳಿಸೋ ದಟ್ಟ ಕಾಡುಗಳ ಮೇಲೆ ಎತ್ತರದ ಬಿಳಿಯ ಆಕೃತಿಯೊಂದು (Structure) ಕಣ್ಸೆಳೆಯುತ್ತಿದೆ. ಇದು ಬೆಳಕಿನ ಮರ! ಹೌದು, ನಿಜ. ಆದರೆ ಇದು ಹುಟ್ಟಿದ ಮರವಲ್ಲ, ಕಟ್ಟಿದ ಮರ! ಈ ಮರದ (Tree) ಸುತ್ತಲೂ ಈಗ ಬಿಳಿಪು ಬಿರಡೆಯ ದೀಪಗಳ ಸಂಯೋಜನೆಯಾಗಿದ್ದು ಝಗ್ಗನೇ ಝಗಮಗಿಸಿ ಬೆಟ್ಟಕ್ಕೆ (Hill) ಜೀವ ತುಂಬಲು ಈ ಬೆಳಕಿನ ಮರ ಸಜ್ಜಾಗಿದೆ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಗರ ಮಧ್ಯೆ ಇರುವಂತಹ ಬಿರುಮಲೆ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಪ್ರದೇಶದ ಅಭಿವೃದ್ಧಿಗಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರಕಾರದಿಂದ ಸುಮಾರು 2 ಕೋಟಿ ರೂಪಾಯಿಗಳ ಅನುದಾನವನ್ನು ತಂದು ಬೆಟ್ಟದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಗಾಂಧಿ ಮಂಟಪ, ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ಪಾರ್ಕ್ ಈ ಬೆಟ್ಟದಲ್ಲಿ ಈಗಾಗಲೇ ಇದ್ದು, ಇನ್ನೂ ಹಲವು ಆಕರ್ಷಣೀಯ ಕಾಮಗಾರಿಗಳನ್ನು ಹೊಸದಾಗಿ ಬಂದ 2 ಕೋಟಿ ರೂಪಾಯಿಗಳಲ್ಲಿ ಮಾಡಲಾಗುತ್ತಿದೆ.
ಈ ಆಕರ್ಷಣೆಗಳಲ್ಲಿ ಡಿಜಿಟಲ್ ಲೈಟ್ ಟ್ರೀ ಕೂಡಾ ಒಂದು. ಎತ್ತರದ ಟವರ್ ರೀತಿಯ ಆಕೃತಿಯನ್ನು ನಿರ್ಮಿಸಿ ಈ ಆಕೃತಿಯ ತುಂಬಾ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸಿ, ಇಡೀ ಬೆಟ್ಟದ ಮೇಲೆ ಕಲರ್ ಕಲರ್ ಬಣ್ಣಗಳನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ. ಬಿರುಮಲೆ ಬೆಟ್ಟದಿಂದ ಕೆಳಗೆ ವೀಕ್ಷಿಸುವ ಸಂದರ್ಭದಲ್ಲಿ ಇಡೀ ಪುತ್ತೂರು ಪೇಟೆಯೇ ಇಲ್ಲಿಗೆ ಸ್ಪಷ್ಟವಾಗಿ ಕಾಣುತ್ತದೆ. ಅದೇ ರೀತಿಯಲ್ಲಿ ಬೆಟ್ಟದ ಮೇಲೆ ಉರಿಯುವ ಈ ಡಿಜಿಟಲ್ ಲೈಟ್ ಟ್ರೀ ಇಡೀ ಪುತ್ತೂರು ನಗರ ಭಾಗಕ್ಕೂ ಕಾಣಿಸಬೇಕು ಎನ್ನುವ ಉದ್ದೇಶದಿಂದ ಈ ಲೈಟ್ ಮರವನ್ನು ನಿರ್ಮಿಸಲಾಗಿದೆ.
ಒಟ್ಟು 4 ಡಿಜಿಟಲ್ ಲೈಟ್ ಟ್ರೀಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಆಕೃತಿಯ ಕಾಮಗಾರಿ ಮುಗಿದಿದ್ದು, ಲೈಟ್ ಗಳನ್ನು ಅಳವಡಿಸುವ ಮತ್ತು ಬಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ. ಶಾಸಕ ಅಶೋಕ್ ಕುಮಾರ್ ರೈ ಫಾರಿನ್ ಟೂರ್ ಹೋಗಿದ್ದ ಸಂದರ್ಭದಲ್ಲಿ ಈ ರೀತಿಯ ಲೈಟ್ ಗಳನ್ನು ನೋಡಿದ್ದ ಹಿನ್ನಲೆಯಲ್ಲಿ ಅದೇ ಮಾದರಿಯಲ್ಲಿ ಪುತ್ತೂರಿನ ಬಿರುಮಲೆ ಬೆಟ್ಟದಲ್ಲೂ ಲೈಟ್ ಟ್ರೀ ನಿರ್ಮಿಸಬೇಕು ಎನ್ನುವ ಕಾರಣದಿಂದ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೆ ಬೆಟ್ಟದ ತುಂಬಾ ವಿವಿಧ ಪ್ರಕಾರದ ಲೈಟ್ ಗಳನ್ನು ಅಳವಡಿಸುವ ಮೂಲಕ ಬಿರುಮಲೆ ಬೆಟ್ಟವನ್ನು ಪ್ರಕಾಶಮಾನ ಸ್ಪಾಟ್ ಆಗಿ ಬದಲಾಯಿಸುವ ಚಿಂತನೆ ಶಾಸಕರದ್ದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬೂಸ್ಟರ್ ಆಗಲಿದೆ ಈ ಟವರ್
ಬಿರುಮಲೆ ಬೆಟ್ಟಕ್ಕೆ ಬರುವ ದಾರಿಯುದ್ದಕ್ಕೂ ಬೀದಿ ದೀಪಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಮಾಣಿ-ಮೈಸೂರು ರಸ್ತೆಯ ದರ್ಬೆ ವೃತ್ತದ ಪಕ್ಕದಿಂದಲೇ ಬಿರುಮಲೆ ಬೆಟ್ಟಕ್ಕೆ ತೆರಳಲು ರಸ್ತೆ ಸಂಪರ್ಕವೂ ಇದೆ. ಬಿರುಮಲೆ ಬೆಟ್ಟದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿರುಮಲೆ ಅಭಿವೃದ್ಧಿ ಸಮಿತಿಯೂ ಅಸ್ತಿತ್ವದಲ್ಲಿದ್ದು, ಈ ಸಮಿತಿಯ ನೇತೃತ್ವದಲ್ಲಿ ಎಲ್ಲಾ ಕಾಮಗಾರಿಗಳು ನಡೆಯುತ್ತಿವೆ. ಬಿರುಮಲೆ ಬೆಟ್ಟದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧಗೊಳ್ಳುತ್ತಿರುವ ಡಿಜಿಟಲ್ ಲೈಟ್ ಟ್ರೀ ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಪ್ರಯತ್ನವೂ ಆಗಲಿದೆ.
Dakshina Kannada,Karnataka
October 09, 2025 3:33 PM IST