Last Updated:
ದಕ್ಷಿಣ ಕನ್ನಡದ ಉಪ್ಪಿನಂಗಡಿ ಗುರುವಪ್ಪ 70 ವರ್ಷ ಪ್ರಾಯದಲ್ಲಿ ಸಾಂಪ್ರದಾಯಿಕ ಕುಂಬಾರಿಕೆಯನ್ನು ಉಳಿಸಿಕೊಂಡು, 15-20 ಕಿಲೋಮೀಟರ್ ನಡೆದು ಸಣ್ಣ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ: ನಗರೀಕರಣ, ಯಾಂತ್ರೀಕರಣದ ಹೊಡೆತಕ್ಕೆ ಸಿಲುಕಿ ಇಂದು ಕೆಲವು ಸಾಂಪ್ರದಾಯಿಕ ಕುಲಕಸುಬುಗಳು (Family Trade) ಮಾಯವಾಗುತ್ತಿವೆ. ಒಂದೋ ಆಧುನೀಕರಣದ ಜೊತೆ ಓಡಬೇಕು ಇಲ್ಲವೇ ತನ್ನಷ್ಟಕ್ಕೆ ಸಿಕ್ಕಿದ್ದನ್ನು ಪಡೆದು ಉಳಿದುಕೊಳ್ಳಬೇಕು ಅನ್ನುವ ಸ್ಥಿತಿಗೆ (Situation) ಬದಲಾವಣೆ ತಲುಪಿದೆ.
ಇಂತಹುದೇ ಹೊಡೆತಕ್ಕೆ ಸಿಲುಕಿದ ಕುಲಕಸುಬುಗಳಲ್ಲಿ ಕುಂಬಾರಿಕೆಯೂ ಒಂದು. ಮಡಿಕೆ ತಯಾರಿಸಲು ಬೇಕಾದ ಮಣ್ಣನ್ನು ತಂದು, ಅದನ್ನು ಹದ ಮಾಡಿ, ಅದರಿಂದ ತಯಾರಿಸಿ ಮಡಿಕೆಗಳನ್ನು ಬೇಯಿಸಿ, ಒಣಗಿಸಿ, ಬಳಿಕ ಅದನ್ನು ಹೊತ್ತುಕೊಂಡು ಊರೂರು ಸುತ್ತಿ ಮಾರಾಟ ಮಾಡುವವರ ಸಂಖ್ಯೆ ತೀರಾ ಕ್ಷೀಣಿಸಿದೆ.
ಒಂದೆಡೆ ಯಂತ್ರಗಳ ಮೂಲಕ ತಯಾರಾಗುವ ಮಡಿಕೆಗಳ ಮುಂದೆ ಕೈಯಿಂದ ಶ್ರಮವಹಿಸಿ ತಯಾರಿಸುವ ಮಡಿಕೆ ತುಂಬಾ ದುಬಾರಿಯಾಗೋ ಕಾರಣಕ್ಕೆ ಇಂದು ಸುಲಭವಾಗಿ ಸಿಗೋ ಮಡಿಕೆಗಳ ಹಿಂದೆ ಜನ ಬಿದ್ದಿದ್ದಾರೆ. ಈ ಕಾರಣಕ್ಕಾಗಿ ತಾವೇ ದುಡಿದು ತಯಾರಿಸಿ ಮಾರಾಟ ಮಾಡುವ ಮಡಿಕೆಗಳಿಗೆ ಬೇಡಿಕೆಯಿದ್ದರೂ, ದರದ ನಡುವಿನ ಪೈಪೋಟಿ ಈ ಬೇಡಿಕೆಯನ್ನು ತಡೆ ಹಿಡಿಯುತ್ತಿದೆ.
ಇಂದಿಗೂ ಕುಂಬಾರಿಕೆಯನ್ನು ಕುಲಕಸುಬನ್ನಾಗಿಯೇ ಸ್ವೀಕರಿಸಿಕೊಂಡು, ಹಳೆ ಕಾಲದಂತೆಯೇ ಮಡಿಕೆಯನ್ನು ತಯಾರಿಸಿ ಮಾರಾಟ ಮಾಡುವ ಕೆಲವೇ ಕೆಲವು ಕುಂಬಾರರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ ಗುರುವಪ್ಪರೂ ಒಬ್ಬರು. ತನ್ನ ಮನೆಯಲ್ಲಿ ತಯಾರಿಸಿದ ಮಡಿಕೆಗಳನ್ನು ದೂರದ ಬಂಟ್ವಾಳದ ಮುಡಿಪು, ಬೊಳಿಯಾರು, ಬೇಳ್ಯಾರು ಹೀಗೆ ಹಲವು ಕಡೆಗಳಿಗೆ ಹೊತ್ತು ಮಾರಾಟ ಮಾಡೋದು ಇವರ ಕಸುಬು.
ಮನೆಯಲ್ಲಿ ತಯಾರಿಸಿ ವಿವಿಧ ರೀತಿಯ ಮಡಿಕೆಗಳನ್ನು ಜೀಪು ಮೂಲಕ ಮುಡಿಪು ಸಮೀಪದ ಚೇಳ್ಯಾರು ಎನ್ನುವ ಪ್ರದೇಶಕ್ಕೆ ತಂದು ಅಲ್ಲಿ ಮಡಿಕೆಗಳನ್ನು ಶೇಖರಿಸಿಡುತ್ತಾರೆ. ಆ ಬಳಿಕ ಅಲ್ಲಿಂದ ದಿನಂಪ್ರತಿ ಸುಮಾರು 15 ಕಿಲೋಮೀಟರ್ ನಷ್ಟು ನಡೆದುಕೊಂಡೇ ಮಡಿಕೆಯ ಮಾರಾಟದಲ್ಲಿ ತೊಡಗುತ್ತಾರೆ. 70 ವರ್ಷ ಪ್ರಾಯದ ಗುರುವಪ್ಪರಿಗೆ ಇಳಿ ವಯಸ್ಸಿನಲ್ಲೂ ದುಡಿಯಬೇಕಾದ ಅನಿವಾರ್ಯತೆಯಿದ್ದು, ಮಡಿಕೆ ಮಾರಾಟವಾದರೆ ಮಾತ್ರ ಬದುಕು ಸಾಗುತ್ತದೆ. ದಿನಾಲೂ ಸುಮಾರು 15 ರಿಂದ 20 ಕಿಲೋ ತೂಗುವ ಮಡಿಕೆಗಳನ್ನು ಬಡಿಗೆಯೊಂದರ ಎರಡೂ ತುದಿಗೆ ಕಟ್ಟಿ, ಬಡಿಗೆಯ ನಡು ಭಾಗವನ್ನು ಹೆಗಲಿನಲ್ಲಿ ಹೊತ್ತು ಸಾಗಿಸುತ್ತಾರೆ. ದಾರಿ ಮಧ್ಯೆ ಆಯಾಸವಾದಾಗ ಕೊಂಚ ವಿಶ್ರಾಂತಿ, ಬಳಿಕ ಮತ್ತೆ ನಡೆದಾಟ ಇವರ ದೈನಂದಿನ ಬದುಕು.
ಸಣ್ಣ ಗಾತ್ರದ ಮಡಿಕೆಗಳ ವ್ಯಾಪಾರವೇ ಜೀವನ ಮೂಲ
Dakshina Kannada,Karnataka
December 07, 2025 1:33 PM IST