Last Updated:
ಯಕ್ಷಗಾನದ ತೆಂಕುಹಾದಿ ದಕ್ಷಿಣ ಕನ್ನಡದಲ್ಲಿ ಪತ್ತನಾಜೆ ಸಮಯದಲ್ಲಿ ಚಿಕ್ಕಮೇಳ ಎಂಬ ತುಣುಕು ಯಕ್ಷಗಾನ ಪ್ರದರ್ಶನ ನಡೆಯುತ್ತದೆ, ದೀಪಾವಳಿ ತನಕ ಪ್ರಮುಖ ಕಾರ್ಯಕ್ರಮಗಳಿಗೆ ವಿರಾಮ.
ದಕ್ಷಿಣ ಕನ್ನಡ: ಯಕ್ಷಗಾನದ (Yakshagana) ತೆಂಕುಹಾದಿ ದಕ್ಷಿಣಕನ್ನಡದಲ್ಲಿ ಇದು ಕುಣಿತಕ್ಕೆ ವಿರಾಮದ ಸಮಯ. ಗೆಜ್ಜೆ ಬಿಚ್ಚುಪುನ ಎಂದೇ ಇದರ ಹೆಸರು. ಇದೊಂದು ಧಾರ್ಮಿಕ (Religious) ಹಾಗೂ ಸಾಮಾಜಿಕ ಗಡುವು. ಈ ಗಡುವಿನಲ್ಲಿ ಕೋಲ, ಜಾತ್ರೆ, ಹರಕೆಯಾಟ, ಯಕ್ಷಗಾನದಂತೆ ಯಾವ ಕಾರ್ಯಕ್ರಮವೂ (Program) ಜರುಗುವುದಿಲ್ಲ.
ತುಳುನಾಡಿನಲ್ಲಿ ಪತ್ತನಾಜೆ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೀಪಾವಳಿ ತನಕ ಬ್ರೇಕ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಿಗೆ ಯಾವುದೇ ಉದ್ಯೋಗ ಮತ್ತು ವರಮಾನ ಇಲ್ಲದ ಕಾರಣಕ್ಕೆ ಪತ್ತನಾಜೆ ಸಮಯದಲ್ಲಿ ಚಿಕ್ಕಮೇಳ ಎನ್ನುವ ತುಣುಕು ಯಕ್ಷಗಾನವನ್ನು ತುಳುನಾಡಿನಲ್ಲಿ ನಡೆಸಲಾಗುತ್ತದೆ.
ಯಕ್ಷಗಾನ ತಂಡದಲ್ಲಿನ ಸುಮಾರು ಐದರಿಂದ ಆರು ಕಲಾವಿದರ ಒಂದು ತಂಡ ತುಳುನಾಡಿನ ಒಂದೊಂದು ಬಡಾವಣೆಯನ್ನು ಗುರುತಿಸಿಕೊಂಡು ಪ್ರತೀ ಮನೆಯಲ್ಲೂ ಯಕ್ಷಗಾನ ಪ್ರಸಂಗವೊಂದರ ಒಂದು ಹಾಡು ಮತ್ತು ಸಂಭಾಷಣೆಯನ್ನು ಆಡಿ ತೋರಿಸುವ ಮೂಲಕ ಮನೆ ಮಂದಿಗೆ ಮನೋರಂಜನೆಯನ್ನು ನೀಡುವುದು ಈ ಚಿಕ್ಕಮೇಳ ಆಯೋಜನೆಯ ಹಿಂದಿನ ಉದ್ದೇಶವೂ ಆಗಿದೆ.
ತುಳುನಾಡಿನಲ್ಲಿ ಮಳೆಯ ನಾಲ್ಕು ತಿಂಗಳ ಕಾಲ ಇಲ್ಲಿನ ಎಲ್ಲಾ ಕೃಷಿ ಕುಟುಂಬಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತವೆ. ಕೃಷಿ ಚಟುವಟಿಕೆ ಹೆಚ್ಚಿರುವ ಕಾರಣ ಕೃಷಿಯನ್ನು ಬಿಟ್ಟು ಯಕ್ಷಗಾನ, ದೈವದ ನೇಮೋತ್ಸವದ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬಾರದು ಎನ್ನುವ ಕಾರಣಕ್ಕೆ ಪತ್ತನಾಜೆಯಲ್ಲಿ ಎಲ್ಲಾ ಮನೋರಂಜನಾ ಕಾರ್ಯಕ್ರಮಗಳಿಗೆ ನಿಷೇಧ ಎನ್ನುವ ಅಲಿಖಿತ ಸಂಪ್ರದಾಯವನ್ನು ಹಿರಿಯರು ಜಾರಿಗೆ ತಂದಿದ್ದು, ಈ ಸಂಪ್ರದಾಯ ಚಾಚೂ ತಪ್ಪದೆ ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಚಿಕ್ಕಮೇಳದ ವೈಶಿಷ್ಟ್ಯ ಹಾಗೂ ವೈಖರಿ ಇದು
ಚಿಕ್ಕಮೇಳದಲ್ಲಿ ಎರಡು ವೇಷಧಾರಿ ಕಲಾವಿದರು, ಮದ್ದಳೆ, ಭಾಗವತರಿದ್ದು, ಪ್ರತೀ ಮನೆ ಮನೆಗೆ ತೆರಳಿ ಯಕ್ಷಗಾನದ ಪ್ರಸಂಗದ ಒಂದು ಹಾಡನ್ನು ಆಡಿ ತೋರಿಸುತ್ತಾರೆ. ಮನೆಗೆ ಬರುವ ಈ ತಂಡಕ್ಕೆ ಮನೆ ಮಂದಿ ಹಣ್ಣುಕಾಯಿ, ಅಕ್ಕಿ, ಹೂ ಮೊದಲಾದುವುಗಳನ್ನು ನೀಡಿ ಕಲಾವಿದರೊಂದಿಗೆ ಬರುವ ಆಯಾಯ ತಂಡ ಆರಾಧಿಸುವ ದೇವರ ಮೂರ್ತಿಗೆ ಸಮರ್ಪಿಸುತ್ತಾರೆ. ತಂಡದ ಖರ್ಚುವೆಚ್ಚ ಸರಿದೂಗಿಸಲು ತಮಗಿಷ್ಟ ಬಂದಷ್ಟು ಹಣವನ್ನೂ ನೀಡುತ್ತಾರೆ. ಚಿಕ್ಕಮೇಳದ ತಂಡ ಯಾವ ಬಡಾವಣೆಗೆ ಯಾವ ದಿನಾಂಕದಂದು ಬರುತ್ತೆ ಅನ್ನೋದನ್ನು ಚಿಕ್ಕಮೇಳ ನಡೆಸುವ ತಂಡ ಮೊದಲೇ ಮನೆ ಮನೆಗೆ ನೋಟೀಸ್ ಹಂಚಿ ಮಾಹಿತಿಯನ್ನು ನೀಡುತ್ತದೆ.
Dakshina Kannada,Karnataka
October 17, 2025 4:26 PM IST