Last Updated:
ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣ, ವಂದೇ ಭಾರತ್ ರೈಲು ಸಂಚಾರಕ್ಕೆ ಸಾಧ್ಯತೆ. ವಿ. ಸೋಮಣ್ಣ ಸಿಹಿ ಸುದ್ದಿ, ಬೆಂಗಳೂರು-ಮಂಗಳೂರು ಸಂಪರ್ಕ ಬಲಪಡಿಕೆ.
ದಕ್ಷಿಣ ಕನ್ನಡ: ದೇಶದ ಅತ್ಯಂತ ಕಠಿಣ ರೈಲ್ವೆ ಜಾಲಗಳಲ್ಲಿ (Rail Route) ಒಂದಾದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಘಾಟ್ ರೈಲು ಮಾರ್ಗದ ವಿದ್ಯುದೀಕರಣ (Electrification) ಸಂಪೂರ್ಣಗೊಂಡಿದೆ. ಅಲ್ಲದೆ ಪ್ರಾಯೋಗಿಕ ರೈಲು ಸಂಚಾರ ಕೂಡ ಸಕ್ಸಸ್ (Success) ಆಗಿದೆ. ಇದರ ಬೆನ್ನಲ್ಲೇ ಇದೀಗ ವಂದೇಭಾರತ್ ರೈಲನ್ನು ಈ ಮಾರ್ಗದಲ್ಲಿ ಓಡಿಸುವ ಕುರಿತು ಹಲವಾರು ಮನವಿಗಳು (Request) ಬಂದಿದ್ದು, ಈ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ದೇಶದ ಅತ್ಯಂತ ಕಠಿಣ ರೈಲ್ವೆ ಮಾರ್ಗಗಳಲ್ಲಿ ಒಂದಾದ ತಾಂತ್ರಿಕವಾಗಿ ಸವಾಲಿನಿಂದ ಕೂಡಿದ್ದ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಇದರಿಂದ ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಸಾಧ್ಯವಾಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯುದೀಕರಣ ಡಿಸೆಂಬರ್ 28ರಂದು ಪೂರ್ಣಗೊಂಡಿದ್ದು ವಿದ್ಯುತ್ ಲೋಕೋಮೋಟಿವ್ ಪರೀಕ್ಷಾರ್ಥ ಸಂಚಾರ ನಡೆದಿದೆ. ಕಡಿದಾದ ಇಳಿಜಾರು, 57 ಸುರಂಗಗಳು, 226 ಸೇತುವೆ ಮತ್ತು 108 ತಿರುವು ಹೊಂದಿರುವ ಈ ಪ್ರದೇಶ ಮಳೆಗಾಲದಲ್ಲಿ ಭೂಕುಸಿತಕ್ಕೆ ಹೆಚ್ಚು ತುತ್ತಾಗುವ ಪ್ರದೇಶವಾಗಿದೆ. ಇಲ್ಲಿ ಸುರಂಗಗಳ ವಿದ್ಯುದೀಕರಣಕ್ಕಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿವರವಾದ ಭೂವೈಜ್ಞಾನಿಕ ಅಧ್ಯಯನ ನಡೆಸಲಾಗಿತ್ತು.
ಈ ಮಾರ್ಗದ ಮೂಲಕ ಮಂಗಳೂರಿಗೆ ವಂದೇ ಭಾರತ್ ರೈಲು ಓಡಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇಂಧನ ಬಳಕೆ ಕಡಿಮೆಯಾಗಲಿದೆ. ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಮತ್ತು ಕಾರ್ಯಾಚರಣೆ ದಕ್ಷತೆ ಹೆಚ್ಚಲಿದೆ. ಇದು ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರು ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.
ಏನು ವಿಶೇಷತೆ? ಏನು ಪ್ರಾಮುಖ್ಯ?
ಸಚಿವರ ಈ ಹೇಳಿಕೆ ವಂದೇ ಭಾರತ್ ರೈಲಿಗಾಗಿ ಕಾಯುತ್ತಿದ್ದ ಮಂಗಳೂರು ರೈಲು ಯಾತ್ರಿಕರಲ್ಲಿ ಖುಷಿ ತಂದಿದೆ. ಶೀಘ್ರವೇ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಡಲಿ ಎಂದು ರೈಲ್ವೆ ಯಾತ್ರಿಕರು ಆಶಯ ವ್ಯಕ್ತಪಡಿಸಿದ್ದಾರೆ. ಘಾಟ್ ವಿಭಾಗದ ಉದ್ದ 55 ಕಿಲೋಮೀಟರ್, 57 ಸುರಂಗಗಳು, 226 ಸೇತುವೆಗಳು, 108 ವಕ್ರಾಕೃತಿಗಳು, 50 ರಲ್ಲಿ 1 ಇಳಿಜಾರು ಉಳ್ಳ ಮಹಾನ್ ಪ್ರಯಾಸದಾಯಕ ಹಾಗೆಯೇ ರೋಮಾಂಚನಕಾರಿ ರೈಲ್ವೆ ಮಾರ್ಗ ಇದಾಗಿದೆ. ಇದರ ವಿದ್ಯುದೀಕರಣ ಕಾರ್ಯವು ಡಿಸೆಂಬರ್ 2023 ರಲ್ಲಿ ಪ್ರಾರಂಭವಾಯಿತು, ಡಿಸೆಂಬರ್ 28 ರಂದು ವಿದ್ಯುತ್ ಲೋಕೋಮೋಟಿವ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು.
Dakshina Kannada,Karnataka
Jan 03, 2026 11:22 AM IST