Last Updated:
ದಕ್ಷಿಣ ಕನ್ನಡದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು 17 ವರ್ಷಗಳಿಂದ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಡಗರದಿಂದ ಆಚರಿಸಲಾಗುತ್ತಿದೆ. 2025ರ ಪೂಜೆ ಆಗಸ್ಟ್ 8ರಂದು ನಡೆಯಲಿದೆ.
ದಕ್ಷಿಣ ಕನ್ನಡ: ಬರೀ ಮೈಸೂರು ಕರ್ನಾಟಕವಲ್ಲದೆ ಕರಾವಳಿ ಕರ್ನಾಟಕಕ್ಕೂ ವರಮಹಾಲಕ್ಷ್ಮಿ ಪೂಜೆಯ ಸಂಸ್ಕೃತಿ ಕಾಲಿಟ್ಟು ದಶಕಗಳೇ ಕಳೆಯಿತು. ಈಗಾಗಲೇ ಕರ್ನಾಟಕದುದ್ದಕ್ಕೂ ಹೆಂಗಸರ ಪ್ರಮುಖ ಹಬ್ಬವಾಗಿ ಗುರುತಿಸಿಕೊಂಡಿರುವ ವರಮಹಾಲಕ್ಷ್ಮಿ ಪೂಜೆಯನ್ನು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗಿನಿಂದಲೇ ಮಹಿಳೆಯರು ಶುಭ್ರ ವಸ್ತ್ರಗಳನ್ನು ಧರಿಸಿ ದೇವಿ ಕ್ಷೇತ್ರಕ್ಕೆ ಭೇಟಿ ನೀಡಿ ವ್ರತ ಆಚರಿಸೋದು ಈ ಹಬ್ಬದ ವಿಶೇಷತೆಯಾಗಿದೆ. ವರಮಹಾಲಕ್ಷ್ಮಿ ಪೂಜಾ ಸಮಿತಿ ಮತ್ತು ಇತರ ಸಂಘ ಸಮಿತಿಗಳ ಸಹಯೋಗದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಳೆದ 17 ವರ್ಷಗಳಿಂದ ಈ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಈ ವರಮಹಾಲಕ್ಷ್ಮಿ ಪೂಜೆಯನ್ನು ಇಲ್ಲಿ ಆರಂಭಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ವರಮಹಾಲಕ್ಷ್ಮಿ ಪೂಜೆ ಅಥವಾ ವ್ರತ ಮಹಿಳೆಯರು ಆಚರಿಸುವ ಹಬ್ಬವಾಗಿದೆ. ಈ ಶುಭ ದಿನದಂದು ಮನೆಯ ಮಹಿಳೆಯರು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. 2025ರ ವರಮಹಾಲಕ್ಷ್ಮಿ ಪೂಜೆಯನ್ನು ಆಗಸ್ಟ್ 8ರಂದು ಶುಕ್ರವಾರ ಆಚರಿಸಲಾಗುತ್ತಿದೆ.
ವರಮಹಾಲಕ್ಷ್ಮಿ ವ್ರತದ ಸಂಕ್ಷಿಪ್ತ ವಿವರ
ವರಲಕ್ಷ್ಮಿ ವ್ರತವೆಂದೂ ಆಚರಿಸಲಾಗುವ ವರಮಹಾಲಕ್ಷ್ಮಿ ವ್ರತವು ಲಕ್ಷ್ಮಿ ದೇವಿಯನ್ನು ಪೂಜಿಸುವ ದಿನವಾಗಿದೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ಮತ್ತು ವರಲಕ್ಷ್ಮಿ ಇಬ್ಬರೂ ಕೂಡ ಲಕ್ಷ್ಮಿಯರೇ. ಈ ವರಲಕ್ಷ್ಮಿ ಎನ್ನುವ ಪದವು 2 ಸಂಸ್ಕೃತ ಪದಗಳಿಂದ ಸೃಷ್ಟಿಯಾಗಿದೆ. ಈ ಎರಡು ಪದಗಳಲ್ಲಿ ವರ ಎಂದರೆ ಆಶೀರ್ವಾದ ಮತ್ತು ಲಕ್ಷ್ಮಿ ಎಂದರೆ ಧನ, ಸಂಪತ್ತು ಎಂಬುದಾಗಿದೆ. ಲಕ್ಷ್ಮಿ ದೇವಿಯ ಈ ವರಲಕ್ಷ್ಮಿ ರೂಪವನ್ನು ನಾವು ಪೂಜಿಸುವುದರಿಂದ ಧನ, ಸಂಪತ್ತು, ಆರೋಗ್ಯ, ಸಮೃದ್ಧಿ ಮತ್ತು ಅದೃಷ್ಟದ ವರವನ್ನು ಪಡೆದುಕೊಳ್ಳುತ್ತೇವೆ ಎನ್ನುವ ನಂಬಿಕೆಯಿದೆ. ಭಾರತದ ಹೆಚ್ಚಿನ ಭಾಗಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
Dakshina Kannada,Karnataka
August 08, 2025 7:55 PM IST