Last Updated:
ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಲಂಕಾಷೈರ್ ಬ್ಯಾಟರ್ ಟಾಮ್ ಬೈಲಿಯ ಜೇಬಿನಿಂದ ಫೋನ್ ಬಿದ್ದ ಅಪರೂಪದ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟ್ (Cricket) ಆಟಗಾರರು ವಾಚ್, ಕೆಲ ಆಭರಣ, ಸನ್‌ಗ್ಲಾಸ್ ಬಿಟ್ಟರೆ ಬೇರೆ ಯಾವುದೇ ವಸ್ತುಗಳನ್ನು ಮ್ಯಾಚ್ ಆಡುವ ವೇಳೆ ತೆಗೆದುಕೊಂಡು ಹೋಗುವಂತಿಲ್ಲ. ಸಾಮಾನ್ಯವಾಗಿ ಯಾವುದೇ ಮ್ಯಾಚ್ ನಡೆಯುತ್ತಿರಲಿ ನಾವಿದನ್ನು ನೋಡುತ್ತೇವೆ. ಆದರೆ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯವೊಂದರಲ್ಲಿ ಇವರೆಗೂ ನಡೆಯದಂತಹ ಅಪರೂಪದ ಘಟನೆಯೊಂದು ನಡೆದಿದೆ.
ಬ್ಯಾಟರ್ ಟಾಮ್ ಬೈಲಿ ಜೇಬಿನಿಂದ ಬಿತ್ತು ಫೋನ್
ಕೌಂಟಿ ಚಾಂಪಿಯನ್‌ಶಿಪ್ ನಾಲ್ಕನೇ ಸುತ್ತಿನ ಎರಡನೇ ದಿನದಾಟದಲ್ಲಿ, ಲಂಕಾಷೈರ್ ಮತ್ತು ಗ್ಲೌಸೆಸ್ಟರ್‌ಶೈರ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಲಂಕಾಷೈರ್ ಬ್ಯಾಟರ್ ಟಾಮ್ ಬೈಲಿ ಬ್ಯಾಟಿಂಗ್ ಮಾಡುತ್ತಿದ್ದರು, ಆಗ ತಂಡಕ್ಕೆ ರನ್‌ಗಳನ್ನು ಸೇರಿಸುವ ಭರದಲ್ಲಿ ಎರಡು ರನ್ ಗಳಿಸಲು ಓಡುತ್ತಿರುವಾಗ ಬೈಲಿಯವರ ಜೇಬಿನಿಂದ ಮೊಬೈಲ್ ಫೋನ್ ಹೊರ ಬಿದ್ದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.
ಕ್ರಿಕೆಟ್ ಇತಿಹಾಸದಲ್ಲಿ ನಾವು ಈ ರೀತಿಯ ದೃಶ್ಯ ನೋಡಿರಲಿಕ್ಕೆ ಸಾಧ್ಯವಿಲ್ಲ. ಆದರೆ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಇಂತಹ ಕುತೂಹಲಕಾರಿ ಘಟನೆ ನಡೆದಿದೆ. ಎರಡು ರನ್ ಓಡುವಾಗ ಆಟಗಾರ ಬೈಲಿಯ ಪ್ಯಾಂಟ್ ಜೇಬಿನಿಂದ ಫೋನ್ ಹೊರಬಿದ್ದಿದೆ. ಪಂದ್ಯದ ಎರಡನೇ ದಿನದಂದು ಲಂಕಾಷೈರ್ 401/8 ಸ್ಕೋರ್ ಗಳಿಸಿದ್ದಾಗ ಬೈಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಬೈಲಿ 31 ಎಸೆತಗಳಲ್ಲಿ 22 ರನ್ ಗಳಿಸಿ ಅಜೇಯರಾಗಿ ಉಳಿದರು.
ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ ಫೋನ್
ಈ ಎಲ್ಲದರ ನಡುವೆ ಬೈಲಿಯ ಮೊಬೈಲ್ ಫೋನ್ ಅವರ ಪ್ಯಾಂಟ್ ಜೇಬಿನಿಂದ ಹೊರ ಬಿದ್ದ ದೃಶ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬ್ಯಾಟಿಂಗ್ ಮಾಡುವಾಗ ಫೋನ್ ಅನ್ನು ಏಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆ ಮತ್ತು ಕುತೂಹಲ ಎರಡನ್ನೂ ಹುಟ್ಟುಹಾಕಿದೆ. ಕ್ರಿಕೆಟ್ ಅಭಿಮಾನಿಗಳು ಖಂಡಿತ ಇದು ಕಾನೂನುಬಾಹಿರ ಎಂದು X ವೇದಿಕೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಫೋನ್ ಅನ್ನು ಹೇಗೆ ಮೈದಾನಕ್ಕೆ ಅನುಮತಿಸಲಾಗಿದೆ? ಈ ನಡೆ ಖಂಡನೆಗೆ ಅರ್ಹವಾಗಿದೆ ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ. ಈ ವೈರಲ್ ವಿಡಿಯೋಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಅಲೆಕ್ಸ್ ಟ್ಯೂಡರ್ ಕೂಡ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ.
ತಪ್ಪಿನ ಹೊರತಾಗಿಯೂ ಅದ್ಭುತ ಪ್ರದರ್ಶನ ನೀಡಿದ ಬೈಲಿ
ಗ್ಲೌಸೆಸ್ಟರ್‌ಶೈರ್ ಬೌಲರ್ ಜೋಶ್ ಶಾ ಪಿಚ್‌ನಿಂದ ಫೋನ್ ಎತ್ತಿಕೊಳ್ಳುವವರೆಗೂ ಬೈಲಿಗೆ ಫೋನ್ ಜಾರಿದ್ದು ಗೊತ್ತೇ ಆಗಿಲ್ಲ. ವೃತ್ತಿಪರ ಕ್ರಿಕೆಟ್‌ನ ಉನ್ನತ ಗುಣಮಟ್ಟದಲ್ಲಿ ಇದು ಅತ್ಯಂತ ಅಪರೂಪದ ದೃಶ್ಯವಾಗಿದ್ದು, ಮೈದಾನದಲ್ಲಿ ಏನಾಯಿತು ಎಂಬುದರ ಬಗ್ಗೆ ಬೈಲಿಗೆ ಸಂಪೂರ್ಣವಾಗಿ ಅರಿವಿಲ್ಲದಂತಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಕ್ರಿಕೆಟ್ ಕಾಮೆಂಟ್ರಿಯಲ್ಲೂ ಈ ಬಗ್ಗೆ ಜೋಕ್ ಮಾಡಲಾಗಿದೆ. ಇನ್ನು ಫೋನ್ ಅನ್ನು ಆಟಗಾರನಿಗೆ ಹಿಂತಿರುಗಿಸಲಾಗಿದೆಯೇ ಅಥವಾ ಅಂಪೈರ್ ವಶಪಡಿಸಿಕೊಂಡಿದ್ದಾರೆಯೇ ಎಂಬುದು ತಿಳಿದಿಲ್ಲ.
ಫೋನ್ ಅನ್ನು ಅನುಮತಿಸುತ್ತದೆಯೇ ಐಸಿಸಿ?
ಸಾಮಾನ್ಯವಾಗಿ ಐಸಿಸಿಯು ಈ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಯಾವುದೇ ಆಟಗಾರ ಸಂವಹನ ಸಾಧನದಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಕ್ರಿಕೆಟಿಗರು ಡಗೌಟ್ ಒಳಗೆ ಮೊಬೈಲ್ ಫೋನ್ ಬಳಸುವಂತಿಲ್ಲ. ಆದರೆ ಈ ಆಟಗಾರ ಹೇಗೆ ಫೋನ್ ತೆಗೆದುಕೊಂಡು ಹೋದ, ಏಕೆ ತೆಗೆದುಕೊಂಡ ಹೋದ ಅನ್ನೋದೆ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಬೌಲರ್ ಟಾಮ್ ಬೈಲಿ ಉತ್ತರಿಸಬೇಕಿದೆ ಮತ್ತು ಇಂತಹ ನಿಯಮ ಉಲ್ಲಂಘನೆಗೆ ಬೈಲಿಗೆ ಶಿಕ್ಷೆ ಕೂಡ ವಿಧಿಸಬಹುದು.
May 05, 2025 11:36 PM IST