Virat Kohli: ಕೊಹ್ಲಿ ನಿವೃತ್ತಿ, ಆ ಇಬ್ಬರು ಆಟಗಾರರಿಗೆ ಸಿಗುತ್ತಾ ಸೆಕೆಂಡ್ ಚಾನ್ಸ್! ಬಿಸಿಸಿಐ ನಿರ್ಧಾರದತ್ತ ಎಲ್ಲರ ಕಣ್ಣು | Rahane or Pujara Who ll Get the Nod After Virat Kohli s Test Retirement

Virat Kohli: ಕೊಹ್ಲಿ ನಿವೃತ್ತಿ, ಆ ಇಬ್ಬರು ಆಟಗಾರರಿಗೆ ಸಿಗುತ್ತಾ ಸೆಕೆಂಡ್ ಚಾನ್ಸ್! ಬಿಸಿಸಿಐ ನಿರ್ಧಾರದತ್ತ ಎಲ್ಲರ ಕಣ್ಣು | Rahane or Pujara Who ll Get the Nod After Virat Kohli s Test Retirement

ತಂಡದ ಮೇಲೆ ಕೊಹ್ಲಿ-ರೋಹಿತ್ ನಿರ್ಗಮನದ ಪರಿಣಾಮ

ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಇಬ್ಬರು ದಿಗ್ಗಜರ ನಿವೃತ್ತಿಯಿಂದ ಭಾರತದ ಮಧ್ಯಮ ಕ್ರಮಾಂಕ ಗಣನೀಯವಾಗಿ ದುರ್ಬಲವಾಗಲಿದೆ. ಇದರ ಜೊತೆಗೆ, ರವಿಚಂದ್ರನ್ ಅಶ್ವಿನ್ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರಿಂದ ಭಾರತ ತಂಡವು ಇಂಗ್ಲೆಂಡ್‌ನ ಸೀಮ್ ಮತ್ತು ಸ್ವಿಂಗ್‌ಗೆ ಸಹಾಯಕವಾದ ಕಠಿಣ ಪಿಚ್‌ಗಳಲ್ಲಿ ಯುವ ಆಟಗಾರರನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಪ್ರಸ್ತುತ, ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಮಾತ್ರ ತಂಡದ ಹಿರಿಯ ಆಟಗಾರರಾಗಿ ಉಳಿದಿದ್ದಾರೆ. ಇದರ ಜೊತೆಗೆ, ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಮರಳಿದ ಬಳಿಕ ಫಾರ್ಮ್‌ನಲ್ಲಿ ಕುಸಿತ ಕಂಡಿದ್ದಾರೆ, ಇದು ತಂಡಕ್ಕೆ ಮತ್ತೊಂದು ಸವಾಲಾಗಿದೆ.

ರಹಾನೆಗೆ ಮತ್ತೊಂದು ಅವಕಾಶ?

ಅಜಿಂಕ್ಯ ರಹಾನೆ, 36 ವರ್ಷದ ಮಾಜಿ ಉಪನಾಯಕ, ಜುಲೈ 2023 ರಿಂದ ಟೆಸ್ಟ್ ತಂಡದಿಂದ ಹೊರಗಿದ್ದಾರೆ. ಆದರೆ, ಕೊಹ್ಲಿಯ ನಿವೃತ್ತಿಯಿಂದ ಮಧ್ಯಮ ಕ್ರಮಾಂಕದಲ್ಲಿ ಉಂಟಾಗಿರುವ ಸ್ಥಾನವನ್ನ ತುಂಬಲು ರಹಾನೆಗೆ ಅವಕಾಶ ಸಿಗಬಹುದು. 2021 ರಲ್ಲಿ ಆಸ್ಟ್ರೇಲಿಯಾದಲ್ಲಿ ರಹಾನೆ ಭಾರತವನ್ನು 2-1 ರ ಟೆಸ್ಟ್ ಸರಣಿ ಗೆಲುವಿಗೆ ಮುನ್ನಡೆಸಿದ್ದರು, ಇದು ಅವರ ನಾಯಕತ್ವದ ಸಾಮರ್ಥ್ಯವನ್ನು ತೋರಿಸಿತು. ರಹಾನೆ 85 ಟೆಸ್ಟ್ ಪಂದ್ಯಗಳಲ್ಲಿ 5077 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ 12 ಶತಕಗಳು ಸೇರಿವೆ.

ಇಂಗ್ಲೆಂಡ್‌ನಲ್ಲಿ ಅವರ ದಾಖಲೆ ಸಾಧಾರಣವಾಗಿದ್ದರೂ, ಲಾರ್ಡ್ಸ್‌ನಲ್ಲಿ 103 ರನ್‌ಗಳ ಶತಕ ಮತ್ತು 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 89 ಮತ್ತು 46 ರನ್‌ಗಳ ಇನ್ನಿಂಗ್ಸ್‌ಗಳು ಅವರ ತಾಂತ್ರಿಕ ಕೌಶಲ್ಯವನ್ನು ತೋರಿಸುತ್ತವೆ. ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಲ್ಲಿ 35.92 ಸರಾಸರಿಯಲ್ಲಿ 467 ರನ್‌ಗಳನ್ನು ಗಳಿಸಿರುವ ರಹಾನೆ, ತಂಡಕ್ಕೆ ಅನುಭವ ಮತ್ತು ಸ್ಥಿರತೆಯನ್ನು ತರಬಲ್ಲರು. ಇಂಗ್ಲೆಂಡ್‌ನ ಕಠಿಣ ಪಿಚ್‌ಗಳಲ್ಲಿ ಯುವ ಆಟಗಾರರಿಗೆ ಇಂಗ್ಲಿಷ್ ಬೌಲರ್‌ಗಳನ್ನು ಎದುರಿಸಲು ರಹಾನೆಯಂತಹ ಅನುಭವಿ ಆಟಗಾರನ ಅಗತ್ಯವಿದೆ.

ಮಧ್ಯಮ ಕ್ರಮಾಮಂಕದ ಗೋಡೆಗೆ ಸಿಗುತ್ತಾ ಚಾನ್ಸ್?

ಚೇತೇಶ್ವರ ಪೂಜಾರ, 2018-29 ಹಾಗೂ 2020-21ರ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಗೆಲುವಿನಲ್ಲಿ ಪ್ರಮುಖ ಆಟಗಾರರಲ್ಲ ಒಬ್ಬರು. ಇವರ ಆಯ್ಕೆ ಇಂಗ್ಲೆಂಡ್‌ನಲ್ಲಿ ಭಾರತಕ್ಕೆ ಬಲವಾದ ಆಯ್ಕೆಯಾಗಬಲ್ಲರು. 103 ಟೆಸ್ಟ್ ಪಂದ್ಯಗಳಲ್ಲಿ 7195 ರನ್‌ಗಳನ್ನು ಗಳಿಸಿರುವ ಪೂಜಾರ, 19 ಶತಕಗಳೊಂದಿಗೆ 43ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲೂ ಪೂಜಾರ 1778 ರನ್‌ಗಳನ್ನು ಕಲೆಹಾಕಿದ್ದಾರೆ. ಅವರ ತಾಂತ್ರಿಕ ಶ್ರೇಷ್ಠತೆ ಮತ್ತು ದೀರ್ಘ ಇನ್ನಿಂಗ್ಸ್‌ಗಳನ್ನು ಆಡುವ ಸಾಮರ್ಥ್ಯವು ಇಂಗ್ಲೆಂಡ್‌ನ ಸವಾಲಿನ ವಾತಾವರಣದಲ್ಲಿ ಮಧ್ಯಮ ಕ್ರಮಾಂಕವನ್ನು ಸ್ಥಿರಗೊಳಿಸಬಲ್ಲದು. 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಓವಲ್‌ನಲ್ಲಿ ಆಡಿದ್ದು ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಪೂಜಾರ ಅವರ ರಕ್ಷಣಾತ್ಮಕ ಆಟದ ಶೈಲಿಯು ಇಂಗ್ಲಿಷ್ ವೇಗಿಗಳನ್ನ ಎದುರಿಸಲು ಸೂಕ್ತವಾಗಿದೆ.

ಬಿಸಿಸಿಐ ಮುಂದಿನ ಆಯ್ಕೆ ಏನು?

ಕೊಹ್ಲಿಯ ನಿವೃತ್ತಿಯ ಬಗ್ಗೆ ಬಿಸಿಸಿಐಗೆ ಕಳೆದ ಒಂದು ತಿಂಗಳಿನಿಂದಲೂ ಮಾಹಿತಿ ಇತ್ತು, ಮತ್ತು ಅವರು ಈ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಕೇಳಿಕೊಂಡಿದ್ದರು. ಆದರೆ, ಕೊಹ್ಲಿ ತಮ್ಮ ನಿಲುವಿನಲ್ಲಿ ದೃಢರಾಗಿದ್ದು, ಇಂದು ನಿವೃತ್ತಿ ಘೋಸಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಮೇ 19 ಅಥವಾ 20 ರಂದು ಘೋಷಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಶುಭಮನ್ ಗಿಲ್ ಟೆಸ್ಟ್ ನಾಯಕತ್ವಕ್ಕೆ ಮುಂಚೂಣಿಯಲ್ಲಿದ್ದಾರೆ, ಆದರೆ ರಿಷಭ್ ಪಂತ್ ಉಪನಾಯಕನಾಗಬಹುದು.

ಕೆಲವು ವರದಿಗಳ ಪ್ರಕಾರ, ಬಿಸಿಸಿಐ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಮತ್ತು ಸರ್ಫರಾಜ್ ಖಾನ್‌ರಂತವರ ಮೇಲೆ ಗಮನ ಕೇಂದ್ರೀಕರಿಸಲಿದೆ, ಮತ್ತು ರಹಾನೆ ಹಾಗೂ ಪೂಜಾರರಂತಹ ಹಿರಿಯರನ್ನು ಮರಳಿ ಕರೆತರುವ ಸಾಧ್ಯತೆ ಕಡಿಮೆ ಎಂದು ರಿವ್‌ಸ್ಪೋರ್ಟ್ಜ್ ವರದಿ ಮಾಡಿದೆ. ಆದರೆ, ಮಾಜಿ ಆಟಗಾರ ಆಕಾಶ್ ಚೋಪ್ರಾ, ಇಂಗ್ಲೆಂಡ್‌ನ ಕಠಿಣ ಪರಿಸ್ಥಿತಿಗಳಿಗೆ ರಹಾನೆ ಮತ್ತು ಪೂಜಾರರ ಅನುಭವ ಅಗತ್ಯ ಎಂದು ಸಲಹೆ ನೀಡಿದ್ದಾರೆ.