Virat Kohli: ರಾಹುಲ್​ಗೆ ಬೇಡ, ವಿರಾಟ್ ಕೊಹ್ಲಿಯ ನಂ.4 ಸ್ಥಾನವನ್ನ ಆ ಯುವ ಆಟಗಾರನಿಗೆ ಕೊಡಿ! ಜಾಫರ್ ಮಹತ್ವದ ಸಲಹೆ | Not KL Rahul Jaffer Picks 25-Year-Old Star as India s Next Test No 4

Virat Kohli: ರಾಹುಲ್​ಗೆ ಬೇಡ, ವಿರಾಟ್ ಕೊಹ್ಲಿಯ ನಂ.4 ಸ್ಥಾನವನ್ನ ಆ ಯುವ ಆಟಗಾರನಿಗೆ ಕೊಡಿ! ಜಾಫರ್ ಮಹತ್ವದ ಸಲಹೆ | Not KL Rahul Jaffer Picks 25-Year-Old Star as India s Next Test No 4

Last Updated:

ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ನಂ.4 ಸ್ಥಾನದಲ್ಲಿ ತಂಡದ ಬೆನ್ನೆಲುಬಾಗಿದ್ದ ಕೊಹ್ಲಿಯ ನಿರ್ಗಮನದಿಂದ 4ನೇ ಕ್ರಮಾಂಕಕ್ಕೆ ಹೊಸ ಆಟಗಾರನ ಆಯ್ಕೆಯ ಸವಾಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿದೆ.

ರಾಹುಲ್ -ವಿರಾಟ್ ಕೊಹ್ಲಿರಾಹುಲ್ -ವಿರಾಟ್ ಕೊಹ್ಲಿ
ರಾಹುಲ್ -ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (virat Kohli) ಮೇ 12, 2025ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ನಂ.4 ಸ್ಥಾನದಲ್ಲಿ ತಂಡದ ಬೆನ್ನೆಲುಬಾಗಿದ್ದ ಕೊಹ್ಲಿಯ ನಿರ್ಗಮನದಿಂದ ಈ  ಮಹತ್ವದ ಸ್ಥಾನಕ್ಕೆ ಹೊಸ ಆಟಗಾರನ ಆಯ್ಕೆಯ ಸವಾಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿದೆ. ಈ ಸ್ಥಾನಕ್ಕೆ ಶುಭ್‌ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಸೇರಿದಂತೆ ಹಲವು ಆಟಗಾರರ ಹೆಸರುಗಳು ಚರ್ಚೆಯಲ್ಲಿವೆ.

ಗಿಲ್ ನಂಬರ್ 4ರಲ್ಲಿ ಆಡಬೇಕೆಂದ ಜಾಫರ್

ಮಾಜಿ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ಅವರು ಶುಭ್‌ಮನ್ ಗಿಲ್‌ರನ್ನು ನಂ.4 ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್‌ನಲ್ಲಿ ಟೆಸ್ಟ್ ಪಾದಾರ್ಪಣೆ ಮಾಡಿದ ಗಿಲ್, 15 ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕನಾಗಿ ಮತ್ತು 17 ಪಂದ್ಯಗಳಲ್ಲಿ ನಂ.3 ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. “ಗಿಲ್ ನಂ.4ಕ್ಕೆ ಸೂಕ್ತ. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಯಶಸ್ವಿಯಾಗಿದ್ದಾರೆ. ಸಾಯಿ ಸುದರ್ಶನ್‌ಗೆ ನಂ.3 ಸ್ಥಾನದಲ್ಲಿ ದೀರ್ಘಾವಧಿಯ ಅವಕಾಶ ನೀಡಬೇಕು,” ಎಂದು ಜಾಫರ್ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಗಿಲ್​ಗೆ ತಂಡದಲ್ಲೇ ಅವಕಾಶವೇ ಡೌಟ್ ಎಂದ ಶ್ರೀಕಿ

ಆದರೆ, ಮಾಜಿ ಭಾರತೀಯ ಆರಂಭಿಕ ಮತ್ತು ಮುಖ್ಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಗಿಲ್‌ರ ಟೆಸ್ಟ್ ಸ್ಥಾನದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. “ಗಿಲ್ ಟೆಸ್ಟ್‌ನಲ್ಲಿ ಸ್ಥಿರವಾಗಿಲ್ಲ. ನಾಯಕತ್ವವನ್ನು ಜಸ್ಪ್ರೀತ್ ಬುಮ್ರಾಗೆ ಹಸ್ತಾಂತರಿಸಬೇಕು. ಬುಮ್ರಾ ಗಾಯದಿಂದ ಕೂಡಿದ್ದರೆ, ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ನಾಯಕರಾಗಬೇಕು,” ಎಂದು ಶ್ರೀಕಾಂತ್ ಹೇಳಿದ್ದಾರೆ. ನಂ.4 ಸ್ಥಾನಕ್ಕೆ ಕೆಎಲ್ ರಾಹುಲ್ ಸೂಕ್ತ ಎಂದು ಶಿಫಾರಸು ಮಾಡಿರುವ ಅವರು, “ರಾಹುಲ್‌ ಅತ್ಯುತ್ತಮ ತಂತ್ರಗಾರಿಕೆ ಇರುವ ಬ್ಯಾಟರ್, ಸಮಯಕ್ಕೆ ತಕ್ಕಂತೆ ಆಡಬಲ್ಲರು ಹಾಗಾಗಿ 4ನೇ ಕ್ರಮಾಂಕಕ್ಕೆ ಅವರೆ ಸೂಕ್ತ ಎಂದು ತಿಳಿಸಿದ್ದಾರೆ.’

ಪೈಪೋಟಿಯಲ್ಲಿ ಹಲವರು

ಕೊಹ್ಲಿಯ ನಿವೃತ್ತಿಯ ಬಳಿಕ ಭಾರತಕ್ಕೆ ನಂ.4 ಸ್ಥಾನದ ಆಯ್ಕೆ ಒಂದು ದೊಡ್ಡ ಸವಾಲಾಗಿದೆ. ಗಿಲ್‌ರ ಆಕ್ರಮಣಕಾರಿ ಶೈಲಿ ಮತ್ತು ರಾಹುಲ್‌ರ ತಾಂತ್ರಿಕ ಕೌಶಲ್ಯ ಎರಡೂ ತಂಡಕ್ಕೆ ಮೌಲ್ಯಯುತವಾಗಿವೆ. BCCI ಮತ್ತು ತಂಡದ ಆಡಳಿತವು ಈ ನಿರ್ಣಾಯಕ ಸ್ಥಾನಕ್ಕೆ ಸರಿಯಾದ ಆಟಗಾರನನ್ನು ಆಯ್ಕೆ ಮಾಡಲು ತೀವ್ರ ಚರ್ಚೆ ನಡೆಸುತ್ತಿದೆ. ಕನ್ನಡಿಗ ಕರುಣ್ ನಾಯರ್ ಹೆಸರು ಕೂಡ ಚಾಲ್ತಿಯಲ್ಲಿದೆ.

ಭಾರತ vs ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ

ಮುಂದಿನ ತಿಂಗಳ ಆರಂಭದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜೂನ್ 20 ರಿಂದ ಆರಂಭವಾಗಲಿದೆ. ಈ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದೆ. ಇದು ಭಾರತ ತಂಡ ಜೂನ್‌ನಲ್ಲಿ ಆಡಲಿರುವ ಮೊದಲ ಮತ್ತು ಏಕೈಕ ಟೆಸ್ಟ್ ಪಂದ್ಯವಾಗಿರುತ್ತದೆ. ಇದರ ನಂತರ, ಸರಣಿಯ ಎರಡನೇ ಪಂದ್ಯ ಜುಲೈ 2 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಸರಣಿಯ ಮೂರನೇ ಟೆಸ್ಟ್ ಜುಲೈ 10 ರಂದು ಮತ್ತು ನಾಲ್ಕನೇ ಟೆಸ್ಟ್ ಜುಲೈ 23 ರಂದು ಆರಂಭವಾಗಲಿದೆ. ಐದನೇ ಮತ್ತು ಅಂತಿಮ ಪಂದ್ಯ ಜುಲೈ 31 ರಂದು ಆರಂಭವಾಗಿ ಆಗಸ್ಟ್ 4 ರವರೆಗೆ ನಡೆಯಲಿದೆ.