ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರ ಅಡಗುತಾಣಗಳನ್ನ ಹುಡುಕಿ ಹುಡುಕಿ ನಾಶ ಮಾಡಿತ್ತು. ನಂತರ ಎರಡೂ ದೇಶಗಳ ನಡುವೆ ಮೂರು ದಿನಗಳ ಕಾಲ ಯುದ್ಧವೂ ಸಂಭವಿಸಿ, ನಂತರ ಶಾಂತಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಭಾರತ 9ಕ್ಕೂ ಹೆಚ್ಚು ಉಗ್ರರ ತಾಣಗಳನ್ನ ನೆಲಸಮ ಮಾಡಿತ್ತು. ಈ ದಾಳಿಯ ನಂತರ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸೇರಿದಂತೆ ಕೆಲವು ಆಟಗಾರರು ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ ಭಾರತ ತಂಡ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುತ್ತಿರುವುದನ್ನ ಭಾರತೀಯ ಅಭಿಮಾನಿಗಳ ತೀವ್ರವಾಗಿ ಕಂಡಿಸಿದ್ದರು.
ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಶಿಖರ್ ಧವನ್, ಸುರೇಶ್ ರೈನಾ, ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ಈ ಪಂದ್ಯದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಕೆಲವರು, “ಈ ಆಟಗಾರರು ಸಾರ್ವಜನಿಕವಾಗಿ ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಖಾಸಗಿ ಲೀಗ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಒಪ್ಪಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಟೀಕೆಗಳು ಮತ್ತು ರಾಜಕೀಯ ಒತ್ತಡದಿಂದಾಗಿ, ಹರ್ಭಜನ್ ಸಿಂಗ್ ಈ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. “ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ” ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
2008ರ ಮುಂಬೈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಪರಸ್ಪರ ದ್ವಿಪಕ್ಷೀಯ ಕ್ರಿಕೆಟ್ ಆಡುವುದನ್ನ ನಿಲ್ಲಿಸಿವೆ. ಆದರೆ ಐಸಿಸಿ ಟೂರ್ನಮೆಂಟ್ಗಳಲ್ಲಿ ಆಟವನ್ನ ಮುಂದುವಿರಿಸಿದ್ದವು. ಆದರೆ ಪಹಲ್ಗಾಮ್ ದಾಳಿ ಮತ್ತು ಅದರ ನಂತರದ ಗಡಿಯಾಚೆಗಿನ ಉದ್ವಿಗ್ನತೆಯಲ್ಲಿ ಹಲವಾರು ಭಾರತೀಯರು ಸಾವನ್ನಪ್ಪಿದ ನಂತರ, ಎರಡೂ ದೇಶಗಳ ನಡುವಿನ ಎಲ್ಲಾ ಬಹುರಾಷ್ಟ್ರೀಯ ಪಂದ್ಯಾವಳಿ ಸಭೆಗಳನ್ನು ಕೊನೆಗೊಳಿಸಬೇಕೆಂಬ ಕೂಗುಗಳು ಕೇಳಿಬಂದವು. ಭಾರತದ ಹೆಡ್ ಕೋಚ್ ಗಂಭೀರ್ ಕೂಡ ಪಾಕಿಸ್ತಾದ ಜೊತೆ ದ್ವಿಪಕ್ಷೀಯ ಸರಣಿ ಮಾತ್ರವಲ್ಲ, ಯಾವುದೇ ಟೂರ್ನಿಯನ್ನ ಆಡಬಾರದು ಎಂದು ಆಗ್ರಹಿಸಿದ್ದರು.
WCL ಎಂಬುದು ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಒಳಗೊಂಡ ಖಾಸಗಿ T20 ಲೀಗ್ ಆಗಿದೆ. ಈ ಎರಡನೇ ಆವೃತ್ತಿಯು ಜುಲೈ 18, 2025 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಿದೆ. ಇಂಡಿಯಾ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಶಿಖರ್ ಧವನ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ, ಮತ್ತು ಇತರರು ಇದ್ದಾರೆ.
ಕಳೆದ ವರ್ಷದ WCL ಫೈನಲ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದಿತ್ತು, ಆದರೆ ಗುಂಪಿನ ಹಂತದಲ್ಲಿ ಪಾಕಿಸ್ತಾನ 68 ರನ್‌ಗಳಿಂದ ಗೆಲುವು ಸಾಧಿಸಿತ್ತು.
July 19, 2025 10:03 PM IST