Last Updated:
ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 238 ರನ್ಗಳ ಭರ್ಜರಿ ಗೆಲುವು ಸಾಧಿಸಿತು. 400 ರನ್ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 162 ರನ್ಗಳಿಗೆ ಆಲೌಟ್ ಆಯಿತು.
2025ರ ಮೇ 29ರಂದು ಎಡ್ಜ್ಬಾಸ್ಟನ್ನಲ್ಲಿ ನಡೆದ ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ (England Team) ತಂಡವು 238 ರನ್ಗಳ ಭರ್ಜರಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು (ODI Series) ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಪರೂಪದ ದಾಖಲೆಗಳನ್ನು ನಿರ್ಮಿಸಿತು, ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿದೆ.
ಇಂಗ್ಲೆಂಡ್ನ ಬೃಹತ್ ಮೊತ್ತ
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 400 ರನ್ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು. ಬೆನ್ ಡಕೆಟ್ (60 ರನ್), ಜೋ ರೂಟ್ (57 ರನ್), ಹ್ಯಾರಿ ಬ್ರೂಕ್ (58 ರನ್), ಮತ್ತು ಜಾಕೋಬ್ ಬೆಥೆಲ್ (82 ರನ್) ತಮ್ಮ ಅರ್ಧಶತಕಗಳೊಂದಿಗೆ ತಂಡಕ್ಕೆ ದೃಢವಾದ ಆಧಾರವನ್ನು ಒದಗಿಸಿದರು. ಇವರಿಗೆ ಜೇಮೀ ಸ್ಮಿತ್ (37 ರನ್) ಮತ್ತು ವಿಲ್ ಜಾಕ್ಸ್ (39 ರನ್) ತಮ್ಮ ಆಕರ್ಷಕ ಇನ್ನಿಂಗ್ಸ್ಗಳ ಮೂಲಕ ಸಾಥ್ ನೀಡಿದರು. ಈ ಇನ್ನಿಂಗ್ಸ್ನ ವಿಶೇಷತೆ ಏನೆಂದರೆ, ಯಾವುದೇ ಬ್ಯಾಟ್ಸ್ಮನ್ ಶತಕ ಗಳಿಸದಿದ್ದರೂ ತಂಡವು 400 ರನ್ಗಳ ಗಡಿಯನ್ನು ಮುಟ್ಟಿತು. ಇದು ಏಕದಿನ ಕ್ರಿಕೆಟ್ನಲ್ಲಿ ಅಪರೂಪದ ಸಾಧನೆಯಾಗಿದೆ.
ವೆಸ್ಟ್ ಇಂಡೀಸ್ ಬೌಲರ್ಗಳ ಪೈಕಿ ಜೇಡನ್ ಸೀಲ್ಸ್ 4 ವಿಕೆಟ್ಗಳನ್ನು ಪಡೆದರೆ ಅಲ್ಜಾರಿ ಜೋಸೆಫ್ ಮತ್ತು ಜಸ್ಟಿನ್ ಗ್ರೀವ್ಸ್ ತಲಾ 2 ವಿಕೆಟ್ಗಳನ್ನು ಪಡೆದರು. ಆದರೆ, ಇಂಗ್ಲೆಂಡ್ನ ಆಕ್ರಮಣಕಾರಿ ಬ್ಯಾಟಿಂಗ್ ಮುಂದೆ ವೆಸ್ಟ್ ಇಂಡೀಸ್ ಬೌಲರ್ಗಳು ಹೆಣಗಾಡಿದರು.
162ಕ್ಕೆ ಆಲೌಟ್ ಆದ ಇಂಗ್ಲೆಂಡ್
401 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ನ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ 162 ರನ್ಗಳಿಗೆ ತಂಡವು ಆಲೌಟ್ ಆಯಿತು, ಇದರಿಂದ ಇಂಗ್ಲೆಂಡ್ 238 ರನ್ಗಳ ಭಾರೀ ಗೆಲುವನ್ನು ದಾಖಲಿಸಿತು. ಇಂಗ್ಲೆಂಡ್ನ ಬೌಲರ್ಗಳು ಶಿಸ್ತಿನ ಪ್ರದರ್ಶನ ನೀಡಿ, ವೆಸ್ಟ್ ಇಂಡೀಸ್ ಬ್ಯಾಟಿಂಗ್ನ ಕೊಂಡಿಗಳನ್ನು ಒಡ್ಡಿದರು.
ಸಾದಿಕ್ ಮೊಹಮ್ಮದ್ 32ಕ್ಕೆ3, ಜೇಮಿ ಓವರ್ಟನ್ 22ಕ್ಕೆ3, ಆದಿಲ್ ರಶೀದ್ 50ಕ್ಕೆ2, ಜಾಕೋಬ್ ಬೆಥೆಲ್ 18ಕ್ಕೆ1, ಬ್ರಿಡನ್ ಕಾರ್ಸ್ 39ಕ್ಕೆ1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿದರು.
ಐತಿಹಾಸಿಕ ದಾಖಲೆ ಬರೆದ ಇಂಗ್ಲೆಂಡ್
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಎರಡು ಅಪರೂಪದ ದಾಖಲೆಗಳನ್ನು ನಿರ್ಮಿಸಿತು. ಮೊದಲನೆಯದಾಗಿ, ಏಕದಿನ ಕ್ರಿಕೆಟ್ನಲ್ಲಿ ಯಾವುದೇ ಬ್ಯಾಟ್ಸ್ಮನ್ ಶತಕ ಗಳಿಸದೆ 400 ರನ್ಗಳ ಗಡಿಯನ್ನು ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಯಿತು. ಈ ಹಿಂದೆ, 2007ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ ವಿರುದ್ಧ 392 ರನ್ಗಳನ್ನು ಗಳಿಸಿದ್ದು ಈ ದಾಖಲೆಯಾಗಿತ್ತು. ಇದೀಗ ಇಂಗ್ಲೆಂಡ್ ಈಗ ಈ ದಾಖಲೆಯನ್ನು ಮುರಿದಿದೆ. ಜೊತೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಇನ್ನಿಂಗ್ಸ್ನಲ್ಲಿ ಏಳು ಬ್ಯಾಟ್ಸ್ಮನ್ಗಳು 30ಕ್ಕಿಂತ ಹೆಚ್ಚು ರನ್ಗಳನ್ನು ಗಳಿಸಿದರು, ಇದು ಇಂಗ್ಲೆಂಡ್ನ ಬ್ಯಾಟಿಂಗ್ ಆಳವನ್ನು ತೋರಿಸುತ್ತದೆ.
ಏಕದಿನ ಕ್ರಿಕೆಟ್ನಲ್ಲಿ 28 ಬಾರಿ ತಂಡಗಳು 400 ಅಥವಾ ಅದಕ್ಕಿಂತ ಹೆಚ್ಚು ರನ್ಗಳಿಸಿವೆ. ಇದರಲ್ಲಿ ಒಮ್ಮೆ ಮಾತ್ರ ಯಾವುದೇ ಬ್ಯಾಟರ್ ಶತಕ ಸಿಡಿಸದೇ ತಂಡವೊಂದು 400 ರನ್ಗಳಿಸಿದ ಮೊದಲ ನಿದರ್ಶನ ಇದಾಗಿದೆ.