Last Updated:
ಸೆಪ್ಟೆಂಬರ್ 29ರಂದು ಶಾರ್ಜಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನೇಪಾಳ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಬರೋಬ್ಬರಿ 90 ರನ್‌ಗಳಿಂದ ಸೋಲಿಸಿತು. ಹೀಗಾಗಿ, ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.
ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗೆ ರಾಜಕೀಯದಲ್ಲಿ ವಿಶ್ವದ ಗಮನ ಸೆಳೆದಿದ್ದ ನೇಪಾಳ ತಂಡವು (Nepal Team) ಎರಡು ಬಾರಿಯ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ (West Indies) ವಿರುದ್ಧ ದ್ವಿಪಕ್ಷೀಯ ಸರಣಿ ಗೆದ್ದಿದೆ. 2 ಬಾರಿ ವಿಶ್ವಚಾಂಪಿಯನ್ ತಂಡದ ವಿರುದ್ಧ ಸರಣಿ ಗೆಲ್ಲುವ ಮೂಲಕ ಐಸಿಸಿ ಪೂರ್ಣ ಸದಸ್ಯ ತಂಡವೊಂದರ ವಿರುದ್ಧ ಮೊದಲ ಬಾರಿಗೆ ನೇಪಾಳ ಈ ಸಾಧನೆ ಮಾಡಿದೆ. ಸೆಪ್ಟೆಂಬರ್ 29ರಂದು ಶಾರ್ಜಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನೇಪಾಳ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಬರೋಬ್ಬರಿ 90 ರನ್‌ಗಳಿಂದ ಸೋಲಿಸಿತು. ಹೀಗಾಗಿ, ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.
ಇದಕ್ಕೂ ಮೊದಲು, ನೇಪಾಳ ತಂಡವು ಮೊದಲ ಟಿ20 ಪಂದ್ಯದಲ್ಲಿಯೂ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ನೀಡಿತು. ಆ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಆರಂಭಿಕ ಆಟಗಾರರಾದ ಆಸಿಫ್ ಶೇಖ್ (ಔಟಾಗದೆ 68) ಮತ್ತು ಸಂದೀಪ್ ಜೋರಾ (63) ಅವರ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 173 ರನ್‌ಗಳನ್ನು ಗಳಿಸಿತು. ವಿಂಡೀಸ್ ಬೌಲರ್‌ಗಳಲ್ಲಿ, ಅಕೀಲ್ ಹೊಸೇನ್ ಮತ್ತು ಕೈಲ್ ಮೇಯರ್ಸ್ ತಲಾ 2 ವಿಕೆಟ್ ಪಡೆದರೆ, ಜೆಡಿಯಾ ಬ್ಲೇಡ್ಸ್ ಒಂದು ವಿಕೆಟ್ ಪಡೆದರು.
ನಂತರ, ಸವಾಲಿನ ಗುರಿಯನ್ನು ಬೆನ್ನಟ್ಟಲು ಮೈದಾನಕ್ಕೆ ಇಳಿದ ವೆಸ್ಟ್ ಇಂಡೀಸ್, ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು. ಮೊಹಮ್ಮದ್ ಆದಿಲ್ ಆಲಂ (4-0-24-3), ಕುಶಾಲ್ ಭುರ್ತೆಲ್ (2.1-1-16-3), ದೀಪೇಂದ್ರ ಸಿಂಗ್ ಐರಿ (3-0-4-1), ಮತ್ತು ಲಲಿತ್ ರಾಜಬನ್ಶಿ (3-0-13-1) ದಾಳಿಗೆ ತತ್ತರಿಸಿ 17.1 ಓವರ್‌ಗಳಲ್ಲಿ 83 ರನ್‌ಗಳಿಗೆ ಆಲೌಟ್ ಆದರು. ಹೀಗಾಗಿ, ಅವರು 90 ರನ್‌ಗಳ ಭಾರಿ ಅಂತರದಿಂದ ಭಾರಿ ಸೋಲನ್ನು ಎದುರಿಸಿದರು.
ರನ್‌ಗಳ ವಿಷಯದಲ್ಲಿ ಇದು ಪೂರ್ಣ ಸದಸ್ಯ ತಂಡವೊಂದು (ವೆಸ್ಟ್ ಇಂಡೀಸ್) ಐಸಿಸಿ ಅಸೋಸಿಯೇಟ್ ತಂಡದ (ನೇಪಾಳ) ವಿರುದ್ಧ ಕಂಡ ತಂಹ ಅತಿದೊಡ್ಡ ಸೋಲು ಇದಾಗಿದೆ. ವೆಸ್ಟ್ ಇಂಡೀಸ್ ಗಳಿಸಿದ 83 ರನ್‌ಗಳು ಅಸೋಸಿಯೇಟ್ ತಂಡದ ವಿರುದ್ಧ ಪೂರ್ಣ ಸದಸ್ಯ ತಂಡವು ಗಳಿಸಿದ ಎರಡನೇ ಕನಿಷ್ಠ ಸ್ಕೋರ್ ಆಗಿದೆ. ಈ ಸರಣಿಯ ನಾಮಮಾತ್ರ ಮೂರನೇ ಟಿ20 ಇಂದು (ಸೆಪ್ಟೆಂಬರ್ 30) ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸೋಸಿಯೇಟ್ ತಂಡದ ವಿರುದ್ಧ ಮೊದಲ ಬಾರಿಗೆ ಸರಣಿ ಸೋಲು ಕಂಡಿದೆ.
90 ರನ್ಸ್ ಜಯ, ನೇಪಾಳ vs ವೆಸ್ಟ್ ಇಂಡೀಸ್
81 ರನ್ಸ್ ಜಯ, ಅಫ್ಘಾನಿಸ್ತಾನ vs ಜಿಂಬಾಬ್ವೆ
59 ರನ್ಸ್ ಜಯ, ಅಫ್ಘಾನಿಸ್ತಾನ vs ಜಿಂಬಾಬ್ವೆ
55 ರನ್ಸ್ ಜಯ, ನಮೀಬಿಯಾ vs ಶ್ರೀಲಂಕಾ
49 ರನ್ಸ್ ಜಯ, ನೆದರ್ಲೆಂಡ್ಸ್ vs ಜಿಂಬಾಬ್ವೆ
September 30, 2025 4:04 PM IST