Last Updated:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಗೋಲು ಗ್ರಾಮದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಸರಕಾರ ಮತ್ತು ಅರಣ್ಯ ಇಲಾಖೆಗೆ ಸೋಲಾರ್ ಬೇಲಿ ನಿರ್ಮಾಣದ ಒತ್ತಾಯದೊಂದಿಗೆ ಹೋರಾಟ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ: ಆ ಊರಿನ ಜನ ಆನಾದಿಕಾಲದಿಂದಲೂ ಕಾಡಿನಂಚಿನಲ್ಲೇ ಬದುಕಿ ಬೆಳೆದವರು. ವನ್ಯಜೀವಿಗಳು ಮತ್ತು ಮನುಷ್ಯ ಅನ್ಯೋನ್ಯವಾಗಿ ಬದುಕುತ್ತಿದ್ದ ಆ ಊರಿನ ಚಿತ್ರಣ ಇತ್ತೀಚಿನ ದಿನಗಳಲ್ಲಿ ತುಂಬಾ ಬದಲಾಗಿದೆ. ಅನ್ಯೋನ್ಯತೆಯಿಂದ ಇದ್ದ ವನ್ಯಜೀವಿ, ಮನುಷ್ಯನ ಸಂಬಂಧಗಳು ಇಂದು ಹಾಳಾಗಿವೆ. ಕಾಡನ್ನು ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಅವಲಂಭಿಸಿದ ಕಾರಣಕ್ಕೇನೋ, ಇಂದು ಕಾಡುಪ್ರಾಣಿಗಳೂ (Wild Animals) ನಾಡನ್ನು ಅವಲಂಭಿಸುತ್ತಿದೆ. ಆಹಾರಕ್ಕಾಗಿ (Food) ಕಾಡಿನಿಂದ ನಾಡಿಗೆ ಬರುತ್ತಿರುವ ವನ್ಯಜೀವಿಗಳು ಇದೀಗ ಮನುಷ್ಯ ಮತ್ತು ಆತನು ಬೆಳೆಸಿದ ಬೆಳೆಗಳಿಗೂ (Crops) ಹಾನಿ ಮಾಡುತ್ತಿದೆ. ಹೌದು ಇದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಅರಣ್ಯದಂಚಿನಲ್ಲಿರುವ ಮಂಡೆಗೋಲು ಎನ್ನುವ ಗ್ರಾಮದ ಜನರ ಇತ್ತೀಚಿನ ಗೋಳು. ದಿನಕ್ಕೊಂದರಂತೆ ಪ್ರಾಣಿಗಳು ಬಂದು ಬೆಳೆಗಳ ಜೊತೆಗೆ ಜನರ ಮೇಲೂ ಈ ವನ್ಯಜೀವಿಗಳು ದಾಳಿ ಮಾಡಲು ಆರಂಭಿಸಿದ್ದು, ವನ್ಯಜೀವಿಗಳಿಂದ ತಮ್ಮನ್ನು ರಕ್ಷಿಸಬೇಕೆಂದು ಗ್ರಾಮಸ್ಥರೆಲ್ಲಾ ಸೇರಿ ಹೋರಾಟದ ಹಾದಿ ಹಿಡಿದಿದ್ದಾರೆ.
ಕಾಡುಪ್ರಾಣಿಗಳ ಉಪಟಳ ಹೆಚ್ಚಾದ ಕಾರಣ ಜೀವ ಭಯದಲ್ಲೇ ಬದುಕಬೇಕಾದ ಸ್ಥಿತಿಯಲ್ಲಿರುವ ಇಲ್ಲಿನ ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆ, ಕಾಡುಕೋಣ, ಕಾಡುಹಂದಿ ಹೀಗೆ ಹಲವು ರೀತಿಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಾಡಿಗೂ, ನಾಡಿಗೂ ನಡುವೆ ಸೋಲಾರ್ ಬೇಲಿ ನಿರ್ಮಿಸಬೇಕು ಅನ್ನೋದು ಈ ಗ್ರಾಮಸ್ಥರ ಇತ್ತೀಚಿನ ಒತ್ತಾಯವಾಗಿದೆ. ಆದರೆ ಇಲಾಖೆಯಲ್ಲಿ ಈ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ.
ಈ ಕಾರಣಕ್ಕೆ ಜನರೆಲ್ಲಾ ಸೇರಿ ಸರಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ಗ್ರಾಮಸ್ಥರು ನೀಡಿದ್ದಾರೆ.
Dakshina Kannada,Karnataka
November 26, 2025 8:46 AM IST