Last Updated:
ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ 20ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲು ಕಂಡಿದೆ.
ಐಸಿಸಿ (ICC) ಮಹಿಳಾ ಏಕದಿನ (ODI) ವಿಶ್ವಕಪ್ (World Cup) ಟೂರ್ನಿಯ 20ನೇ ಪಂದ್ಯ (Match) ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳು ನಡುವೆ ನಡೆಯಿತು. ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತ ಅದ್ಭುತ ಪ್ರದರ್ಶನ ನೀಡಿತ್ತು. ಆದರೆ, ಭಾರತ ತಂಡ ಕೊನೆಯ ಹಂತದಲ್ಲಿ ಜಯವನ್ನು ಕೈ ಚೆಲ್ಲಿದೆ. ಇದರೊಂದಿಗೆ ಮಹಿಳಾ ಏಕದಿನ (ODI) ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್ ಸೋಲು ಕಮಡಿದೆ. ಪರಿಣಾಮ ಭಾರತ ವಿರುದ್ಧ ಇಂಗ್ಲೆಂಡ್ ವನಿತೆಯರು 4 ರನ್ಗಳ ಭರ್ಜರಿ ಜಯ ಸಾಧಿಸಿದ್ದಾರೆ.
ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಇಂಗ್ಲೆಂಡ್ ತಂಡದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿತ್ತು. ಇಂಗ್ಲೆಂಡ್ ನೀಡಿದ 289 ರನ್ಗಳ ಗುರಿ ಬೆನ್ನಟ್ಟಿದ ಭಾರತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 284 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತಕ್ಕೆ ಗೆಲುವು ತಂದು ಕೊಡಲು ಸ್ಮೃತಿ ಮಂಧಾನ, ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಅರ್ಧಶತಕ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಆದರೂ, ಭಾರತ 4 ರನ್ಗಳಿಂದ ಸೋಲನ್ನು ಎದುರಿಸಿತು. ಈ ಸೋಲಿನೊಂದಿಗೆ ಭಾರತ ತಂಡದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಇಂಗ್ಲೆಂಡ್ ನೀಡಿದ 289 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಭಾರತ 42 ರನ್ ಗಳಿಸುವಷ್ಟರಲ್ಲೇ ಪ್ರತೀಕಾ ರಾವಲ್ ಮತ್ತು ಹರ್ಲೀನ್ ಡಿಯೋಲ್ ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮಪ್ರೀತ್ ಕೌರ್ ಆಸರೆಯಾದರು. ಈ ಜೋಡಿ ಇಂಗ್ಲೆಂಡ್ ಬೌಲರ್ಸ್ಗೆ ಬೆವರಿಳಿಸಿ ಶತಕದ ಜೊತೆಯಾಟ ಆಡಿದರು. ಉತ್ತಮವಾಗಿ ಆಡುತ್ತಿದ್ದ ಹರ್ಮನ್ಪ್ರೀತ್ ಕೌರ್ 70 ರನ್ ಗಳಿಸಿ ಔಟಾದರು.
ಸ್ಮೃತಿ ಮಂಧಾನ ಜೊತೆಗೂಡಿದ ದೀಪ್ತಿ ಶರ್ಮಾ ಅದ್ಭುತ ಜೊತೆಯಾಟ ಆಡಿದರು. ಈ ಮೂಲಕ ಭಾರತಕ್ಕೆ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ ಸ್ಮೃತಿ ಮಂಧಾನ 88 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ರಿಚಾ ಘೋಷ್ ಕೂಡ ಕೇವಲ 8 ರನ್ಗಳಿಗೆ ಔಟಾದರು. ಇತ್ತ ದೀಪ್ತಿ ಶರ್ಮಾ ಕೂಡ ಅರ್ಧಶತಕ ಸಿಡಿಸಿ 50 ರನ್ಗಳಿಗೆ ಔಟಾದರು.
ಕೊನೆಯಲ್ಲಿ ಭಾರತ ಗೆಲುವಿನ ಹಂಚಿನಲ್ಲಿರುವಾಗ ಅಮನ್ಜೋತ್ ಕೌರ್ ಮತ್ತು ಸ್ನೇಹ ರಾಣಾ ಕ್ರೀಸ್ನಲ್ಲಿದ್ದರು. ಆದರೆ ಭಾರತ ತಂಡಕ್ಕೆ ಅಮನ್ಜೋತ್ ಕೌರ್ ಮತ್ತು ಸ್ನೇಹ ರಾಣಾ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.
October 19, 2025 10:41 PM IST