Women’s World Cup: ಅಂದು ಮ್ಯಾಕ್ಸ್​ವೆಲ್, ಇಂದು ಬೆತ್ ಮೂನಿ; ಆಸ್ಟ್ರೇಲಿಯಾಕ್ಕೆ ಸೋಲು ತಪ್ಪಿಸಿದ್ದೇಗೆ? / Beth Mooneys century against Pakistan commemorates Glenn Maxwells double century in Womens World Cup 2025 | ಕ್ರೀಡೆ

Women’s World Cup: ಅಂದು ಮ್ಯಾಕ್ಸ್​ವೆಲ್, ಇಂದು ಬೆತ್ ಮೂನಿ; ಆಸ್ಟ್ರೇಲಿಯಾಕ್ಕೆ ಸೋಲು ತಪ್ಪಿಸಿದ್ದೇಗೆ? / Beth Mooneys century against Pakistan commemorates Glenn Maxwells double century in Womens World Cup 2025 | ಕ್ರೀಡೆ

Last Updated:

ಮಹಿಳಾ ವಿಶ್ವಕಪ್ 2025 ರ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಬೆತ್ ಮೂನಿ ಅವರ ಶತಕವು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದ್ವಿಶತಕ ಇನ್ನಿಂಗ್ಸ್ ಅನ್ನು ನೆನಪಿಸಿತು.

Glenn Maxwell- Beth MooneyGlenn Maxwell- Beth Mooney
Glenn Maxwell- Beth Mooney

ಐಸಿಸಿ ಮಹಿಳಾ ವಿಶ್ವಕಪ್ (Womens World Cup) 2025 ರ ಟೂರ್ನಿ ಭಾರೀ ಕುತೂಹಲ ಮೂಡಿಸುತ್ತಿದೆ. ಟೂರ್ನಿಯ 9ನೇ ಪಂದ್ಯ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Australia vs Pakistan) ನಡುವೆ ನಡೆಯಿತು. ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿತು. ಈ ಮೂಲಕ ಆಸ್ಟ್ರೇಲಿಯಾ ತಂಡ 103 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ ಪಾಕಿಸ್ತಾನ ಬೌಲರ್ಸ್ ಹಿಡಿತ ಸಾಧಿಸಿದರು. ಆದರೆ, ಪಾಕಿಸ್ತಾನದ ಬ್ಯಾಟಿಂಗ್ ವಿಭಾಗದ ವೈಫಲ್ಯ ತಂಡವನ್ನು ಸೋಲಿಸಿತು.

ಆರಂಭದಲ್ಲಿ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಡಬಲ್ ಸೆಂಚುರಿಯನ್ನು ಹೋಲುವ ಇನ್ನಿಂಗ್ಸ್ ಆಡಿದ ಬೆತ್ ಮೂನಿ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆದರೆ ಆಸ್ಟ್ರೇಲಿಯಾ ವನಿತೆಯರು ಮೊದಲು ಬ್ಯಾಟಿಂಗ್‌ನಲ್ಲಿ ಎಡವಿದರು.

ಆಸ್ಟ್ರೇಲಿಯಾ ತಂಡದ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಅಲಿಸಾ ಹೀಲಿ ಮತ್ತು ಎಲಿಸ್ ಪೆರ್ರಿಯಂತಹ ಸ್ಟಾರ್ ಬ್ಯಾಟರ್ಸ್​ ಕೂಡ ಪಾಕಿಸ್ತಾನ ಬೌಲರ್ಸ್ ಎದುರು ಮಂಕಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಬೆತ್ ಮೂನಿ ತಮ್ಮ ವಿಕೆಟ್ ಅನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಇನ್ನೊಂದು ತುದಿಯಲ್ಲಿ ವಿಕೆಟ್ ಬೀಳುತ್ತಿರುವುದು ಬೆತ್ ಮೂನಿ ಅವರಿಗೆ ಕಿರಿಕಿರಿ ಮಾಡಿತು. 5, 6, 7 ಮತ್ತು 8 ನೇ ಕ್ರಮಾಂಕದಲ್ಲಿ ಬ್ಯಾಟರ್ಸ್ 10 ರನ್‌ಗಳನ್ನು ಗಳಿಸಲು ಸಹ ಸಾಧ್ಯವಾಗಲಿಲ್ಲ. 9 ನೇ ಕ್ರಮಾಂಕದ ಬ್ಯಾಟರ್ ಕೂಡ 11 ರನ್‌ಗಳಿಗೆ ಔಟಾದರು. ಸತತ ನಾಲ್ಕು ವಿಕೆಟ್‌ಗಳ ನಂತರ ಕಾಂಗರೂ ಪಡೆ 100 ರನ್ ಗಳಿಸುವುದು ಕಷ್ಟಕರವೆಂದು ತೋರುತ್ತದೆ. ಆದರೆ ಬೆತ್ ಮೂನಿ ಪಂದ್ಯವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಿಲ್ಲ.

76 ರನ್‌ಗಳಿಗೆ 7 ವಿಕೆಟ್‌ ಪತನ

ಆಸ್ಟ್ರೇಲಿಯಾ ಒಂದು ಹಂತದಲ್ಲಿ ಕೇವಲ 76 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಇತ್ತ ಬೆತ್ ಮೂನಿ ರನ್ ಗಳಿಸುತ್ತಲೇ ಇದ್ದರು. ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಿದ ಪಾಕಿಸ್ತಾನ ಬೌಲರ್ಸ್ ಬೆತ್ ಮೂನಿ ವಿಕೆಟ್ ಪಡೆಯುವಲ್ಲಿ ವಿಫಲವಾದರು. ಪರಿಣಾಮ ಬೆತ್ ಮೂನಿ ಅದ್ಭುತ ಶತಕ ಸಿಡಿಸಿ ಮಿಂಚಿದರು. ಜೊತೆಗೆ ಆಸ್ಟ್ರೇಲಿಯಾ ತಂಡವನ್ನು ಸೋಲಿನ ದವಡೆಯಿಂದ ಹೊರ ತಂದರು.

ಕೊನೆಯಾ ಜೊತೆಯಾಟ

ಆಸ್ಟ್ರೇಲಿಯಾ ತಂಡದ ಪರ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಲಾನಾ ಕಿಂಗ್ ಕೂಡ ಪಾಕಿಸ್ತಾನವನ್ನು ಕಾಡಿದರು. ಅಲಾನಾ ಕೂಡ ಅರ್ಧಶತಕ ಬಾರಿಸಿ ತಂಡದ ಸ್ಕೋರ್ ಅನ್ನು 221 ರನ್​ಗಳಿಗೆ ತಲುಪಿಸಿದರು. ಪಾಕಿಸ್ತಾನದ ಬೌಲಿಂಗ್ ಅತ್ಯುತ್ತಮವಾಗಿತ್ತು. ಆದರೆ ಬೆತ್ ಮೂನಿ ಪಾಕಿಸ್ತಾನದ ಗೆಲುವಿಗೆ ಕೊಲ್ಲಿ ಇಟ್ಟರು. ಬೆತ್ ಮೂನಿ 114 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ 109 ರನ್ ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್​ನಿಂದ ಆಸ್ಟ್ರೇಲಿಯಾ ತಂಡ ಗೆಲುವು ದಾಖಲಿಸಲು ಸಾಧ್ಯವಾಯಿತು.

ಮ್ಯಾಕ್ಸ್‌ವೆಲ್ ದ್ವಿಶತಕಕ್ಕೂ ಬೆತ್ ಮೂನಿಗೂ ಸಂಬಂಧವೇನು?

ಬೆತ್ ಮೂನಿ ಅವರ ಇನ್ನಿಂಗ್ಸ್ ಎಲ್ಲರಿಗೂ ವಿಶ್ವಕಪ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ ದ್ವಿಶತಕವನ್ನು ನೆನಪಿಸಿತು. ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಸಂಕಷ್ಟದಲ್ಲಿತ್ತು. ಆಸ್ಟ್ರೇಲಿಯಾ ತಂಡದ ಘಟಾನುಘಟಿಗಳು ವಿಕೆಟ್ ಕಳೆದುಕೊಂಡಿದ್ದರು. ಆದರೆ ಒಂದು ತುದಿಯಲ್ಲಿ ನಿಂತಿದ್ದ ಮ್ಯಾಕ್ಸ್‌ವೆಲ್ ಕಾಲು ನೋವಿನ ನಡುವೆ ಕೂಡ ಒಂದು ಲೆಗ್‌ನಲ್ಲಿ ದ್ವಿಶತಕ ಗಳಿಸಿದರು. ಆಗಲೂ, ಆಸ್ಟ್ರೇಲಿಯನ್ನರು ಕೇವಲ 91 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿತ್ತು.

ಅಂದು ಮ್ಯಾಕ್ಸ್‌ವೆಲ್ ಒನ್ ಮ್ಯಾನ್ ಆರ್ಮಿ ಎಂದು ಸಾಬೀತುಪಡಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಂದು ಬೆತ್ ಮೂನಿ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡದ ಗೆಲುವಿನ ಕಾರಣವಾಗಿದ್ದಾರೆ.