Women’s World Cup: ಸ್ಫೋಟಕ ಬ್ಯಾಟರ್ ಔಟ್! ಆಸ್ಟ್ರೇಲಿಯಾ ವಿರುದ್ಧದ ಸರಣಿ, ಏಕದಿನ ವಿಶ್ವಕಪ್​​ಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ! | India Announces Squad for ICC Women’s Cricket World Cup 2025: Harmanpreet Kaur to Lead | ಕ್ರೀಡೆ

Women’s World Cup: ಸ್ಫೋಟಕ ಬ್ಯಾಟರ್ ಔಟ್! ಆಸ್ಟ್ರೇಲಿಯಾ ವಿರುದ್ಧದ ಸರಣಿ, ಏಕದಿನ ವಿಶ್ವಕಪ್​​ಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ! | India Announces Squad for ICC Women’s Cricket World Cup 2025: Harmanpreet Kaur to Lead | ಕ್ರೀಡೆ
ತಂಡದ ಆಯ್ಕೆಯ ವಿವರ

ನೀತು ಡೇವಿಡ್ ನೇತೃತ್ವದ ಆಯ್ಕೆ ಸಮಿತಿಯು ಮುಂಬೈನ BCCI ಕೇಂದ್ರ ಕಚೇರಿಯಲ್ಲಿ ತಂಡವನ್ನ ಘೋಷಿಸಿತು, ವಿಶ್ವಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಒಂದೇ ತಂಡವನ್ನು ಆಯ್ಕೆ ಮಾಡಿದೆ. ಎರಡೂ ಸರಣಿಗೂ ಶೆಫಾಲಿ ಆಯ್ಕೆಯಾಗಿಲ್ಲ.

ರೇಣುಕಾ ಸಿಂಗ್‌ ಕಮ್​ಬ್ಯಾಕ್

ಭಾರತ ತಂಡದ ಸ್ಟಾರ್ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್, WPL 2025ರ ವೇಳೆ ಗಾಯಗೊಂಡಿದ್ದರು, ಇದೀಗ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸ ಮತ್ತು ಶ್ರೀಲಂಕಾದ ತ್ರಿಕೋನ ಸರಣಿಯನ್ನು ಗಾಯದಿಂದಾಗಿ ಕಳೆದುಕೊಂಡಿದ್ದ ಅವರು, ಈಗ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ತಂಡಕ್ಕೆ ಮರಳಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ವಿಶ್ವಕಪ್‌ಗೆ ಸಂಪೂರ್ಣವಾಗಿ ತಯಾರಾಗಲು ಅವಕಾಶ ನೀಡಲಾಗಿದೆ. ರೇಣುಕಾ ಜೊತೆಗೆ ಕ್ರಾಂತಿ ಗೌಡ್ ಮತ್ತು ಅರುಂಧತಿ ರೆಡ್ಡಿ ವೇಗದ ಬೌಲಿಂಗ್‌ನ ಜವಾಬ್ದಾರಿಯನ್ನು ಹೊರಲಿದ್ದಾರೆ.

ಬ್ಯಾಟಿಂಗ್‌ನ ಶಕ್ತಿ 

ತಂಡದ ಬ್ಯಾಟಿಂಗ್ ರಚನೆಯು ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್‌ರ ಆರಂಭಿಕ ಜೋಡಿಯ ಮೇಲೆ ನಿಂತಿದೆ. ಪ್ರತಿಕಾ, ಕಳೆದ ವರ್ಷ ಚೊಚ್ಚಲ ಪಂದ್ಯದಿಂದ 14 ಏಕದಿನ ಪಂದ್ಯಗಳಲ್ಲಿ 703 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ 154 ರನ್‌ಗಳ ಗರಿಷ್ಠ ಸ್ಕೋರ್ ಸೇರಿದೆ. ಸ್ಮೃತಿ , 2017ರ ವಿಶ್ವಕಪ್‌ನಲ್ಲಿ ಒಂದು ಶತಕ ಸೇರಿದಂತೆ 232 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್ ಕೌರ್ (ವಿಶ್ವಕಪ್‌ನಲ್ಲಿ 876 ರನ್‌ಗಳು), ಜೆಮಿಮಾ ರೋಡ್ರಿಗಸ್, ಮತ್ತು ಹರ್ಲೀನ್ ಡಿಯೋಲ್ ಸ್ಥಿರತೆಯನ್ನು ಒದಗಿಸಲಿದ್ದಾರೆ. ರಿಚಾ ಘೋಷ್ ಮತ್ತು ಯಾಸ್ಟಿಕಾ ಭಾಟಿಯಾ ವಿಕೆಟ್ ಕೀಪಿಂಗ್‌ನ ಜೊತೆಗೆ ಕೆಳಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ಗೆ ಬಲ ಒದಗಿಸಲಿದ್ದಾರೆ.

ಬೌಲಿಂಗ್‌ನ ಶಕ್ತಿ

ಭಾರತದ ಸ್ಪಿನ್ ಬೌಲಿಂಗ್ ದಾಳಿಯು ದೀಪ್ತಿ ಶರ್ಮಾ, ಸ್ನೇಹ ರಾಣಾ, ರಾಧಾ ಯಾದವ್, ಮತ್ತು ಶ್ರೀಚರಣಿಯವರನ್ನು ಒಳಗೊಂಡಿದೆ. ದೀಪ್ತಿ ಶರ್ಮಾ ಮಧ್ಯಮ ಓವರ್‌ಗಳಲ್ಲಿ ಮತ್ತು ಸ್ನೇಹ ರಾಣಾ ಶ್ರೀಲಂಕಾದ ತ್ರಿಕೋನ ಸರಣಿಯಲ್ಲಿ 15 ವಿಕೆಟ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೀಚರಣಿ, ಇಂಗ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ಸರಣಿಯ ಶ್ರೇಷ್ಠ ಆಟಗಾರ್ತಿಯಾಗಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್, ಕ್ರಾಂತಿ ಗೌಡ್ (ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳು), ಮತ್ತು ಅರುಂಧತಿ ರೆಡ್ಡಿಯವರಿದ್ದಾರೆ. ಅಮನ್‌ಜೋತ್ ಕೌರ್ ಆಲ್‌ರೌಂಡರ್‌ ಆಗಿ ತಂಡಕ್ಕೆ ಸಮತೋಲನವನ್ನು ತರಲಿದ್ದಾರೆ.

ಶ್ರೀಲಂಕಾ ವಿರುದ್ಧ ಅಭಿಯಾನ ಆರಂಭ

ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯ ಅಕ್ಟೋಬರ್ 5 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಪ್ಟೆಂಬರ್ 25 ರಂದು ಇಂಗ್ಲೆಂಡ್ ಮತ್ತು ಸೆಪ್ಟೆಂಬರ್ 27 ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ಸೆಣಸಲಿದೆ. ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಗೆದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಹಾಗಾಗಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎಂಬ ವರದಿಗಳಿವೆ. ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿರುವ ಪಂದ್ಯಾವಳಿಗೆ ತಿರುವನಂತಪುರಂ ಪ್ರಮುಖ ಸ್ಥಳವಾಗುವ ಸಾಧ್ಯತೆಯಿದೆ.

ವಿಶ್ವಕಪ್​ಗೂ ಮುನ್ನ ಆಸೀಸ್ ವಿರುದ್ಧ ಸರಣಿ

ವಿಶ್ವಕಪ್ಗೂ ಮುನ್ನ ಭಾರತ ತಂಡ ಸೆಪ್ಟೆಂಬರ್ 14, 17 ಮತ್ತು 20ರಂದು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಮೊದಲ ಎರಡು ಪಂದ್ಯಗಳು ಮುಲ್ಲಾನ್ಪುರದಲ್ಲಿ ನಡೆದರೆ, ಕೊನೆಯ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

2025ರ ಮಹಿಳಾ ವಿಶ್ವಕಪ್ಗೆ ಭಾರತ ತಂಡ ಪ್ರಕಟ

ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್ಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ್ ರಾಣಾ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್ ಕೀಪರ್), ಕ್ರಾಂತಿ ಗೌಡ್, ಸಯಾಲಿ ಸತ್ಘರೆ, ರಾಧಾ ಯಾದವ್, ಶ್ರೀ ಚರಣಿ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ್ ರಾಣಾ.

ಮಹಿಳಾ ವಿಶ್ವಕಪ್ 2025 ಗ್ರೂಪ್ ಹಂತದ ವೇಳಾಪಟ್ಟಿ

ಸೆಪ್ಟೆಂಬರ್ 30: ಭಾರತ-ಶ್ರೀಲಂಕಾ – ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಅಕ್ಟೋಬರ್ 5: ಭಾರತ-ಪಾಕಿಸ್ತಾನ – ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ

ಅಕ್ಟೋಬರ್ 9: ಭಾರತ-ದಕ್ಷಿಣ ಆಫ್ರಿಕಾ ಎಸಿಎ-ವಿಡಿಸಿಎ ಕ್ರೀಡಾಂಗಣ, ವಿಶಾಖಪಟ್ಟಣಂ

ಅಕ್ಟೋಬರ್ 12: ಭಾರತ-ಆಸ್ಟ್ರೇಲಿಯಾ ಎಸಿಎ-ವಿಡಿಸಿಎ ಕ್ರೀಡಾಂಗಣ, ವಿಶಾಖಪಟ್ಟಣಂ

ಅಕ್ಟೋಬರ್ 19: ಭಾರತ-ಇಂಗ್ಲೆಂಡ್ – ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್

ಅಕ್ಟೋಬರ್ 23: ಭಾರತ-ನ್ಯೂಜಿಲೆಂಡ್ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ

ಅಕ್ಟೋಬರ್ 26: ಭಾರತ-ಬಾಂಗ್ಲಾದೇಶ – ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು