Last Updated:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದರೆ, ಯಾವ ತಂಡ ಫೈನಲ್ ತಲುಪುತ್ತದೆ?
ಬಹುನಿರೀಕ್ಷಿತ 2025 ರ ಐಸಿಸಿ(ICC) ಮಹಿಳಾ ಏಕದಿನ ವಿಶ್ವಕಪ್(World Cup) ಟೂರ್ನಿ ಈಗ ಅಂತಿಮ ಹಂತವನ್ನು ತಲುಪಿದೆ. ಟೂರ್ನಿಯಲ್ಲಿ ಮೂರು ಪಂದ್ಯಗಳು ಉಳಿದಿವೆ. ಎರಡು ಸೆಮಿಫೈನಲ್(Semi-final)ಗಳು ಮತ್ತು ಹೈವೋಲ್ಟೇಜ್ ಫೈನಲ್ ಮಾತ್ರ ಬಾಕಿ ಉಳಿದಿದೆ. ಅಕ್ಟೋಬರ್ 29 ರಂದು ಗುವಾಹಟಿಯಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ(England vs South Africa) ನಡುವೆ ಮೊದಲ ಸೆಮಿಫೈನಲ್ ನಡೆಯಲಿದೆ. ಅಕ್ಟೋಬರ್ 30 ರಂದು ನವಿ ಮುಂಬೈನಲ್ಲಿ ಆತಿಥೇಯ ಭಾರತ (Team India) ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ(Australia)ವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್‌ಗೆ ಮಳೆ(Rain) ಭೀತಿ ಎದುರಾಗಿದ್ದು, ಎರಡೂ ತಂಡಗಳಿಗೆ ಕಳವಳವನ್ನುಂಟು ಮಾಡುತ್ತಿದೆ.
ಮಹಿಳಾ ಏಕದಿನ ವಿಶ್ವಕಪ್ ಲೀಗ್ ಹಂತದ ಹಲವು ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದೆ. ಬಾಂಗ್ಲಾದೇಶ ಮತ್ತು ಭಾರತ ನಡುವಿನ ಲೀಗ್ ಹಂತದ ಕೊನೆಯ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿತ್ತು. ಈಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್‌ಗೆ ಮಳೆ ಭೀತಿ ಎದುರಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಪ್ರಶ್ನೆಯೊಂದು ಎದುರಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ, ಯಾವ ತಂಡ ಫೈನಲ್ ತಲುಪುತ್ತದೆ? ಎಂಬ ಲೆಕ್ಕಚಾರ ಶುರುವಾಗಿದೆ.
ನವಿ ಮುಂಬೈನಲ್ಲಿ ಅಕ್ಟೋಬರ್ 30 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮಳೆ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯಕ್ಕೆ ಅಡ್ಡಿಪಡಿಸಿದರೆ ಏನಾಗುತ್ತದೆಯೋ ಎಂಬ ಚಿಂತೆ ಅಭಿಮಾನಿಗಳಿಗೆ ಮತ್ತು ತಂಡಗಳಿಗೆ ಕಾಡುತ್ತಿದೆ. ಅದೃಷ್ಟವಶಾತ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಹ ಸಂದರ್ಭಗಳನ್ನು ಪರಿಹರಿಸಲು ನಿಯಮಗಳನ್ನು ತಂದಿದೆ. ಸೆಮಿಫೈನಲ್ ಮತ್ತು ಫೈನಲ್ ಎರಡಕ್ಕೂ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.
ಐಸಿಸಿ ನಿಯಮಗಳ ಪ್ರಕಾರ, ನಾಕೌಟ್ ಹಂತದಲ್ಲಿ ನಿಗದಿತ ದಿನದಂದು ಪಂದ್ಯವನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಅಂದರೆ ಓವರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಬಹುದು. ಪಂದ್ಯವು ಎಲ್ಲಿ ನಿಲ್ಲಿಸಿದರೋ ಅಲ್ಲಿಂದ ಪುನರಾರಂಭಗೊಳ್ಳುತ್ತದೆ. ಮಳೆಯಿಂದ ಆಟಕ್ಕೆ ಅಡ್ಡಿಯುಂಟಾದರೆ ಅಥವಾ ಅದೇ ದಿನ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗದಿದ್ದರೆ, ಮರುದಿನ, ಅಂದರೆ ಮೀಸಲು ದಿನದಂದು ಪಂದ್ಯವು ಎಲ್ಲಿ ನಿಲ್ಲಿಸಿದರೋ ಅಲ್ಲಿಂದ ಪುನರಾರಂಭಗೊಳ್ಳುತ್ತದೆ.
ಮೀಸಲು ದಿನದಂದು ಆಟ ಸಾಧ್ಯವಾಗದಿದ್ದರೆ, ಗುಂಪು ಹಂತದ ಪಾಯಿಂಟ್ ಪಟ್ಟಿಯಲ್ಲಿ ತಂಡಗಳ ಮುನ್ನಡೆಯನ್ನು ನಿರ್ಧರಿಸಲಾಗುತ್ತದೆ. ಎರಡೂ ಸೆಮಿಫೈನಲ್ ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಗುಂಪು ಹಂತದ ಅಗ್ರ ಎರಡು ತಂಡಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಫೈನಲ್‌ಗೆ ಮುನ್ನಡೆಯುತ್ತವೆ.
ಎರಡೂ ದಿನಗಳಲ್ಲಿ (ನಿಗದಿತ ದಿನ ಮತ್ತು ಮೀಸಲು ದಿನ) ಫೈನಲ್ ಪಂದ್ಯವನ್ನು ರದ್ದುಗೊಳಿಸಿದರೆ, ಟ್ರೋಫಿಯನ್ನು ಎರಡು ಫೈನಲಿಸ್ಟ್‌ಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಹೀಗಾಗಿ, ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯವನ್ನು ರದ್ದುಗೊಳಿಸಿದರೆ, ಕಾಂಗರೂ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮುನ್ನಡೆಯುತ್ತಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ಲೀಗ್ ಹಂತವನ್ನು ನಾಲ್ಕನೇ ಸ್ಥಾನದಲ್ಲಿ ಮುಗಿಸಲಿದೆ.
ಬಿಬಿಸಿ ಹವಾಮಾನ ವರದಿಯ ಪ್ರಕಾರ, ಅಕ್ಟೋಬರ್ 30 ರಂದು ಮಧ್ಯಾಹ್ನ 3:00 ಗಂಟೆಗೆ ಪಂದ್ಯ ಆರಂಭವಾದ ನಂತರ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಶೇ. 40-70 ರಷ್ಟಿದೆ. ಶುಕ್ರವಾರ (ಅಕ್ಟೋಬರ್ 31) ನಡೆಯಲಿರುವ ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಿರುವುದು ಒಳ್ಳೆಯ ಸುದ್ದಿ. ಆದಾಗ್ಯೂ, ಆ ದಿನದ ಮುನ್ಸೂಚನೆ ಇನ್ನೂ ಹೆಚ್ಚು ಅಶುಭಕರವಾಗಿದೆ. ಶುಕ್ರವಾರದ ಪಂದ್ಯದ ಆರಂಭದಲ್ಲಿ ಮಳೆಯಾಗುವ ಸಾಧ್ಯತೆ ಶೇ. 70 ರಷ್ಟಿದೆ.
October 28, 2025 3:32 PM IST