Last Updated:
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡುತ್ತಿರುವುದೇಕೆ?
ಐಸಿಸಿ(ICC) ಮಹಿಳಾ ಏಕದಿನ ವಿಶ್ವಕಪ್(World Cup) 2025 ರ ಸೆಮಿಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ(India vs Australia) ನಡುವೆ ನವಿ ಮುಂಬೈನ ಡಿವೈ ಪಾಟೀಲ್(DY Patil) ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ(Alyssa Healy) ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕಿಯ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್ಗಳಲ್ಲಿ 338 ರನ್ ಗಳಿಸಿದೆ. ಭಾರತ ಫೈನಲ್ ತಲುಪಲು 339 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ. ಭಾರತ ಪರ ಶ್ರೀ ಚರಣಿ ಮತ್ತು ದೀಪ್ತಿ ಶರ್ಮಾ ತಲಾ 2 ವಿಕೆಟ್ ಉರುಳಿಸಿದರೆ, ಕ್ರಾಂತಿ ಗೌಡ್, ಅಮಂಜೋತ್ ಕೌರ್ ಮತ್ತು ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರು ಕಪ್ಪು ತೋಳುಪಟ್ಟಿ ಧರಿಸಿ ಮೈದಾನಕ್ಕೆ ಪ್ರವೇಶಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡುತ್ತಿರುವುದೇಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದಲ್ಲಿ ಯುವ ಕ್ರಿಕೆಟಿಗೆ ಸಾವಿಗೆ ಸಂತಾಪ ಸೂಚಿಸಲಾಯಿತು. 17 ವರ್ಷದ ಬೆನ್ ಆಸ್ಟಿನ್ ಮೃತಪಟ್ಟ ಆಸ್ಟ್ರೇಲಿಯಾ ಕ್ಲಬ್ ಕ್ರಿಕೆಟಿಗ. ಆಸ್ಟ್ರೇಲಿಯಾದ ಮೆಲ್ಬರ್ನ್ ನ ಫೆರ್ನ್‌ಟ್ರೀ ಗಲ್ಲಿಯ ವಾಲೀ ಟ್ಯೂವ್ ರಿಸರ್ವ್‌ನಲ್ಲಿ ಕ್ರಿಕೆಟ್ ಅಭ್ಯಾಸದ ವೇಳೆ ಚೆಂಡು ತಲೆಗೆ ತಗಲಿ ಬೆನ್ ಆಸ್ಟಿನ್ ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ಬೆನ್ ಆಸ್ಚಿನ್ ಅಟೋಮ್ಯಾಟಿಕ್ ಬೌಲಿಂಗ್ ಯಂತ್ರದಿಂದ ಬರುವ ಚೆಂಡುಗಳನ್ನು ಎದುರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಚೆಂಡು ತಲೆ ಮತ್ತು ಕುತ್ತಿಗೆಗೆ ಬಡಿದು ಬೆನ್ ಆಸ್ಟಿನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆನ್ ಆಸ್ಟಿನ್ ಬುಧವಾರ ಕೊನೆಯುಸಿರೆಳೆದಿದ್ದಾನೆ. ಈ ದುರಂತ ಸಾವಿಗೆ ಸಂತಾಪ ಸೂಚಿಸಲು ಆಟಗಾರರು ಕಪ್ಪು ತೋಳುಪಟ್ಟಿ ಧರಿಸಿ ಮೈದಾನಕ್ಕೆ ಪ್ರವೇಶಿಸಿದರು.
ಯುವ ಕ್ರಿಕೆಟಿಗ ಬೆನ್ ಆಸ್ಚಿನ್ ನಿಧನಕ್ಕೆ ಫರ್ಂಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ದುಃಖ ವ್ಯಕ್ತಪಡಿಸಿದ್ದು, “ಬೆನ್ ಅವರ ನಿಧನದಿಂದ ನಮಗೆ ತೀವ್ರ ದುಃಖವಾಗಿದೆ. ಇದು ನಮ್ಮ ಕ್ರಿಕೆಟ್ ಸಮುದಾಯದ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅವರನ್ನು ತಿಳಿದಿರುವ ಎಲ್ಲರೊಂದಿಗೆ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇವೆ” ಎಂದು ಹೇಳಿದೆ.
ಬಿಸಿಸಿಐ ಪೋಸ್ಟ್‌ನಲ್ಲಿ, “17 ವರ್ಷದ ಮೆಲ್ಬೋರ್ನ್ ಕ್ರಿಕೆಟಿಗ ಬೆನ್ ಆಸ್ಟಿನ್ ಅವರಿಗೆ ಗೌರವ ಸಲ್ಲಿಸಲು ಎರಡೂ ತಂಡಗಳು ಇಂದು ಕಪ್ಪು ತೋಳುಪಟ್ಟಿ ಧರಿಸಿವೆ. ಮಂಗಳವಾರ ರಾತ್ರಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಆಸ್ಟಿನ್ ಸಾವನ್ನಪ್ಪಿದ್ದರು ಎಂದು ಬರೆದುಕೊಂಡಿದೆ.
October 30, 2025 7:09 PM IST
Women’s World Cup 2025: ಭಾರತ vs ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ ಶೋಕಾಚರಣೆ; ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡುತ್ತಿರುವುದೇಕೆ ಗೊತ್ತಾ?