Last Updated:
ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೇವಲ 196 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ.
ಟೀಮ್ ಇಂಡಿಯಾ (Team India)ದ ಪ್ರಿನ್ಸ್ (Prince) ಎಂದೇ ಹೆಸರು ಮಾಡಿರುವ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ಶುಭಮನ್ ಗಿಲ್ (Shubman Gill) ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಗಿಲ್ ಅವರನ್ನು ಭಾರತ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ (Superstar) ಎಂದು ಕರೆಯಲಾಗುತ್ತಿದೆ. ಈ ವರ್ಷ ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್(Test Cricket)ನಲ್ಲಿ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದು, ಹಲವು ದಾಖಲೆಗಳನ್ನು ಮಾಡಿದ್ದಾರೆ. ಇಂಗ್ಲೆಂಡ್ ಪ್ರವಾಸ(England tour)ದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಅಬ್ಬರಿಸಿದ್ದರು. ಅಲ್ಲದೆ, ತವರಿನಲ್ಲಿ ಆರಂಭವಾಗಿರುವ ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಶುಭಮನ್ ಗಿಲ್ ಅರ್ಧಶತಕ ಗಳಿಸುವ ಮೂಲಕ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಈಗ ಆಕ್ಟೋಬರ್ 10 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಶುರುವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.
ಈ ವರ್ಷ ಶುಭಮನ್ ಗಿಲ್ 7 ಟೆಸ್ಟ್ ಪಂದ್ಯಗಳಲ್ಲಿ 13 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 64.38 ರ ಸರಾಸರಿಯಲ್ಲಿ 837 ರನ್ ಗಳಿಸಿದ್ದಾರೆ. ಅವರು ದ್ವಿಶತಕ ಸೇರಿದಂತೆ 4 ಶತಕಗಳು ಮತ್ತು 1 ಅರ್ಧಶತಕವನ್ನು ಬಾರಿಸಿದ್ದಾರೆ. ಅವರ ಅತ್ಯಧಿಕ ಟೆಸ್ಟ್ ಸ್ಕೋರ್ 269 ರನ್‌ಗಳು. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಕೇವಲ 196 ರನ್ ಗಳಿಸುವಲ್ಲಿ ಯಶಸ್ವಿಯಾದರೆ ದಾಖಲೆ ಸೃಷ್ಟಿಸಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) 2025-2027ರ ಆವೃತ್ತಿಯಲ್ಲಿ ಶುಭಮನ್ ಗಿಲ್ 6 ಟೆಸ್ಟ್ ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 73.09 ರ ಅತ್ಯುತ್ತಮ ಸರಾಸರಿಯಲ್ಲಿ 804 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 4 ಶತಕಗಳು ಮತ್ತು 1 ಅರ್ಧಶತಕವನ್ನು ಸಿಡಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಶುಭಮನ್ ಗಿಲ್ 196 ರನ್ ಗಳಿಸಿದರೆ, 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 1000 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ ಒಂದೇ ಆವೃತ್ತಯಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ದಾಖಲೆಯನ್ನೂ ಮಾಡಲಿದ್ದಾರೆ.
ಶುಭಮನ್ ಗಿಲ್ ಗಿಂತ ಮೊದಲು, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಒಂದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಆವೃತ್ತಿಯಲ್ಲಿ (2019-2021) ಕ್ರಮವಾಗಿ 1159 ಮತ್ತು 1094 ರನ್ ಕಲೆ ಹಾಕಿದ್ದಾರೆ. ಯಶಸ್ವಿ ಜೈಸ್ವಾಲ್ 2023-2025 ರ ಆವೃತ್ತಿಯಲ್ಲಿ 1798 ರನ್ ಗಳಿಸಿದ್ದಾರೆ.
ಡಬ್ಲ್ಯೂಟಿಸಿ 2025-2027 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
- ಶುಭಮನ್ ಗಿಲ್ (ಭಾರತ): 6 ಪಂದ್ಯಗಳಲ್ಲಿ 804 ರನ್
- ಕೆಎಲ್ ರಾಹುಲ್ (ಭಾರತ): 6 ಪಂದ್ಯಗಳಲ್ಲಿ 632 ರನ್
- ರವೀಂದ್ರ ಜಡೇಜ (ಭಾರತ): 6 ಪಂದ್ಯಗಳಲ್ಲಿ 620 ರನ್
- ಹ್ಯಾರಿ ಬ್ರೂಕ್ (ಇಂಗ್ಲೆಂಡ್): 5 ಪಂದ್ಯಗಳಲ್ಲಿ 481 ರನ್
- ಜೋ ರೂಟ್ (ಇಂಗ್ಲೆಂಡ್): 5 ಪಂದ್ಯಗಳಲ್ಲಿ 537 ರನ್
ಶುಭಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ ಒಂದೇ ಆವೃತ್ತಿಯಲ್ಲಿ ವಿಶ್ವ ದಾಖಲೆಯನ್ನು ಸೃಷ್ಟಿಸಬಹುದು. ಶುಭಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ ಒಂದೇ ಆವೃತ್ತಿಯಲ್ಲಿ 2000 ರನ್‌ಗಳ ಗಡಿ ದಾಟುವ ಸುವರ್ಣಾವಕಾಶವನ್ನು ಹೊಂದಿದ್ದಾರೆ. ವಿಶ್ವದ ಯಾವುದೇ ಬ್ಯಾಟರ್ ಇನ್ನೂ ಈ ದಾಖಲೆಯನ್ನು ಮಾಡಿಲ್ಲ. ಜೋ ರೂಟ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಜೋ ರೂಟ್ 2023-2025 ರಲ್ಲಿ ಆಡಿದ 22 ಪಂದ್ಯಗಳಲ್ಲಿ 1968 ರನ್ ಗಳಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-2027 ರ ಆವೃತ್ತಿಯಲ್ಲಿ ಭಾರತ ಇನ್ನೂ ವೆಸ್ಟ್ ಇಂಡೀಸ್ ವಿರುದ್ಧ ಒಂದು ಟೆಸ್ಟ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ತಲಾ ಎರಡು ಟೆಸ್ಟ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಆದ್ದರಿಂದ, ಶುಭಮನ್ ಗಿಲ್ 2000 ಕ್ಕೂ ಹೆಚ್ಚು ರನ್ ಗಳಿಸುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ.
October 06, 2025 6:38 PM IST