Last Updated:
ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಭಾರತ ಜಂಟಿ ಮೂರನೇ ಸ್ಥಾನದಲ್ಲಿದೆ. ಶುಭ್ಮನ್ ಗಿಲ್ ನೇತೃತ್ವದ ತಂಡವು 12 ಅಂಕಗಳನ್ನು ಹೊಂದಿದೆ, 50 ಪಿಸಿಟಿ ಹೊಂದಿದೆ.
ಇಂಗ್ಲೆಂಡ್ ವಿರುದ್ಧ ಭಾರತದ (India vs England) ಐತಿಹಾಸಿಕ ಗೆಲುವಿನೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2025-27 (WTC) ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಈ ಗೆಲುವಿನೊಂದಿಗೆ, ಭಾರತ ತಂಡ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಖಾತೆಯನ್ನು ತೆರೆದಿದೆ. ಅತ್ತ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲ್ಲುವ ಮೂಲಕ ತನ್ನ ಅಗ್ರ ಸ್ಥಾನವನ್ನು ಬಲಪಡಿಸಿಕೊಂಡಿದೆ.
ಭಾನುವಾರ ಅಂತ್ಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್‌ಗಳಿಂದ ಗೆಲುವು ಸಾಧಿಸಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳಿಗೆ ಆಲೌಟ್ ಆಗಿತ್ತು. ಶುಭ್ಮನ್ ಗಿಲ್ (269) ದ್ವಿಶತಕ ಸಿಡಿಸಿದರೆ,ಯಶಸ್ವಿ ಜೈಸ್ವಾಲ್ (87) ಮತ್ತು ರವೀಂದ್ರ ಜಡೇಜಾ (89) ಉತ್ತಮ ಪ್ರದರ್ಶನ ನೀಡಿದರು. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲೌಟ್ ಆಯಿತು. ಸಿರಾಜ್ 6 ವಿಕೆಟ್ ಹಾಗೂ ಆಕಾಶ್‌ದೀಪ್ 4 ವಿಕೆಟ್ ಪಡೆದು ಮಿಂಚಿದರು. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 427 ರನ್‌ಗಳಿಗೆ ಡಿಕ್ಲೇರ್ ಮಾಡಿತು. 2ನೇ ಇನ್ನಿಂಗ್ಸ್ನಲ್ಲೂ ನಾಯಕ ಗಿಲ್ (161) ಶತಕ ಗಳಿಸಿದರು. 608ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 271 ರನ್‌ಗಳಿಗೆ ಆಲೌಟ್ ಆಗುವ ಮೂಲಕ 336ರನ್‌ಗಳ ಸೋಲು ಕಂಡಿತು. ಆಕಾಶ್‌ದೀಪ್ 6 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಮತ್ತೊಂದೆಡೆ, ಆಸ್ಟ್ರೇಲಿಯಾ ಭಾನುವಾರ ವೆಸ್ಟ್ ಇಂಡೀಸ್ ತಂಡವನ್ನು 133 ರನ್‌ಗಳಿಂದ ಸೋಲಿಸುವ ಮೂಲಕ ಸತತ ಎರಡನೇ ಪಂದ್ಯವನ್ನು ಗೆದ್ದುಕೊಂಡಿದೆ. ಗ್ರೆನಡಾದ ಸೇಂಟ್ ಜಾರ್ಜ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡವು ಆತಿಥೇಯರ ಮುಂದೆ 277 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಆದರೆ ರೋಸ್ಟನ್ ಚೇಸ್ ತಂಡವು 34.3 ಓವರ್‌ಗಳಲ್ಲಿ 143 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಸತತ 2ನೇ ಸೋಲು ಕಂಡಿತು.
ಮಿಚೆಲ್ ಸ್ಟಾರ್ಕ್ ಮತ್ತು ನೇಥನ್ ಲಿಯಾನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾ WTC 2025-27 ಅಂಕಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ನೆರವಾದರು. ಆಸೀಸ್ 24 ಅಂಕಗಳು ಮತ್ತು 100 PCT ಹೊಂದಿದೆ.
ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದ ಶ್ರೀಲಂಕಾ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಬಳಿ 16 ಅಂಕಗಳು ಮತ್ತು 66.67 PCT % ಇದೆ. ಬಾಂಗ್ಲಾದೇಶದ ವಿರುದ್ಧ ಒಂದು ಪಂದ್ಯವನ್ನ ಡ್ರಾ ಮಾಡಿಕೊಂಡಿದ್ದರಿಂದ ಹೆಚ್ಚುವರಿ 4 ಅಂಕಗಳನ್ನ ಹೊಂದಿದೆ.
ಇನ್ನು ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಪ್ರಸ್ತುತ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್ನಲ್ಲಿ ಇನ್ನೂ ಯಾವುದೇ ಪಂದ್ಯವನ್ನು ಆಡಿಲ್ಲ.
July 07, 2025 9:57 PM IST