WTC Final: ಇತಿಹಾಸದ ಹೊಸ್ತಿಲಲ್ಲಿ ದಕ್ಷಿಣ ಆಫ್ರಿಕಾ! 27 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಬೇಕು ಕೇವಲ 69 ರನ್​ | markram century power south africa need just 69 runs created history

WTC Final: ಇತಿಹಾಸದ ಹೊಸ್ತಿಲಲ್ಲಿ ದಕ್ಷಿಣ ಆಫ್ರಿಕಾ! 27 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಬೇಕು ಕೇವಲ 69 ರನ್​ | markram century power south africa need just 69 runs created history

ಮಾರ್ಕ್ರಮ-ಬವುಮಾ ಶತಕದ ಜೊತೆಯಾ

282 ರನ್​ಗಳ ಗುರಿ ಬೆನ್ನಟ್ಟಿದ ಹರಿಣ ಪಡೆ ಚೇಸಿಂಗ್ ಆರಂಭಿಸಿದ ಕೆಲವೆ ನಿಮಿಷಗಳಲ್ಲಿ 3ನೇ ಓವರ್​ನಲ್ಲೇ ರಯಾನ್ ರಿಕಲ್ಟನ್ (6) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್​ ಜೊತೆಯಾಟದಲ್ಲಿ ಐಡೆನ್ ಮಾರ್ಕ್ರಮ್ ಹಾಗೂ ವಿಯಾನ್ ಮುಲ್ಡರ್ 93 ಎಸೆತಗಳಲ್ಲಿ 61 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಮುಲ್ಡರ್ 50 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 27 ರನ್​ಗಳಿಸಿ ಸ್ಟಾರ್ಕ್​ಗೆ ವಿಕೆಟ್ ಒಪ್ಪಿಸಿದರು. ಆದರೆ ಅಲ್ಲಿಂದ ಜೊತೆಗೂಡಿದ ಮಾರ್ಕ್ರಮ್ ಹಾಗೂ ನಾಯಕ ಬವುಮಾ ಆಸೀಸ್ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಿದರು. ಈ ಇಬ್ಬರು ಅನುಭವಿಗಳು 3ನೇ ವಿಕೆಟ್ ಜೊತೆಯಾಟದಲ್ಲಿ 143 ರನ್ ಸೇರಿಸಿದರು. ಮಾರ್ಕ್ರಮ್ 159 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ ಅಜೇಯ 102 ರನ್​ಗಳಿಸಿದರೆ, ನಾಯಕ ಟೆಂಬ ಬವುಮಾ 121 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 65 ರನ್​ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಸ್ಟಾರ್ಕ್ ಅದ್ಭುತ ಆಟ

3ನೇ ದಿನ ಆಸ್ಟ್ರೇಲಿಯಾ ತಂಡ ತನ್ನ 2ನೇ ಇನ್ನಿಂಗ್ಸ್​​ ಅನ್ನ ಮುಂದುವರಿಸಿತು. 2ನೇ ದಿನ 8 ವಿಕೆಟ್ ಕಳೆದುಕೊಂಡು 144 ರನ್​ಗಳಿಸಿದ್ದ ಆಸೀಸ್​ 3ನೇ ದಿನ ಆ ಮೊತ್ತವನ್ನು 207ಕ್ಕೆ ವಿಸ್ತರಿಸಿತು. ಮಿಚೆಲ್ ಸ್ಟಾರ್ಕ್​ 137 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 58 ರನ್​ಗಳಿಸಿದರೆ, ಜೋಶ್ ಹ್ಯಾಜಲ್​ವುಡ್ 53 ಎಸೆತಗಳಲ್ಲಿ 17 ರನ್​ಗಳಿಸಿದರು.

ಆದರೆ 74 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್​ಗಳು ಕೈಕೊಟ್ಟರು. ಕೇವಲ 77 ರನ್​ಗಳಾಗುವಷ್ಟರಲ್ಲಿ ತಂಡದ 7 ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು. ಮಾರ್ನಸ್ ಲಾಬುಶೇನ್ (22), ಉಸ್ಮಾನ್ ಖವಾಜ (6), ಕ್ಯಾಮರೂನ್ ಗ್ರೀನ್ (0), ಸ್ಟೀವ್ ಸ್ಮಿತ್ (13), ಟ್ರಾವಿಸ್ ಹೆಡ್ (9), ಬ್ಯೂ ವೆಬ್​ಸ್ಟರ್ (9) ಅಲ್ಪಮೊತ್ತಕ್ಕೆ ಔಟ್ ಆದರು. ಅಲೆಕ್ಸ್ ಕ್ಯಾರಿ ಮಿಚೆಲ್ ಸ್ಟಾರ್ಕ್​ ಜೊತೆಗೂಡಿ 61 ರನ್​ಗಳಿಸಿದರು. ಇದು ಇನ್ನಿಂಗ್ಸ್​ನಲ್ಲಿ ಗರಿಷ್ಠ ಜೊತೆಯಾಟವಾಗಿತ್ತು.

ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಕಗಿಸೋ ರಬಾಡ 59ಕ್ಕೆ 4 ವಿಕೆಟ್ ಪಡೆದು ಮಿಂಚಿದರೆ, ಲುಂಗಿ ಎನ್​ಗಿಡಿ 38ಕ್ಕೆ 3 ವಿಕೆಟ್ ಪಡೆದು ರಬಾಡಗೆ ಸಾಥ್ ನೀಡಿದರು. ಐಡೆನ್ ಮಾರ್ಕ್ರಮ್ 5ಕ್ಕೆ1, ಮಾರ್ಕೊ ಜಾನ್ಸನ್ 58ಕ್ಕೆ1 ವಿಕೆಟ್ ಪಡೆದರು.

ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ 

ಇನ್ನು ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡ 212ಕ್ಕೆ ಆಲೌಟ್ ಆಗಿತ್ತು. ಸ್ಟೀವ್ ಸ್ಮಿತ್ 66, ಬ್ಯೂ ವೆಬ್​ಸ್ಟರ್ 72 ರನ್​ಗಳಿಸಿದ್ದರು. ದಕ್ಷಿಣ ಆಫ್ರಿಕಾ ಪರ ರಬಾಡ 5 ಹಾಗೂ ಜಾನ್ಸನ್ 3 ವಿಕೆಟ್ ಪಡೆದು ಮಿಂಚಿದ್ದರು.

ಇನ್ನು ಆಸೀಸ್ ನೀಡಿದ 212ಕ್ಕೆ ಉತ್ತರವಾಗಿ ಮೊದಲ ದಿನದಾಟದ ಅಂತ್ಯಕ್ಕೆ 43/4 ರನ್‌ಗಳಿಗೆ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಂದು ತಮ್ಮ ಇನಿಂಗ್ಸ್‌ನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿತು. ನಾಯಕ ಟೆಂಬಾ ಬವುಮಾ (36 ರನ್, 84 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಡೇವಿಡ್ ಬೆಡಿಂಗ್‌ಹ್ಯಾಮ್ (45 ರನ್, 111 ಎಸೆತ, 6 ಬೌಂಡರಿ) ಐದನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಬೆಂಬಲ ನೀಡಿದರು. ಆದರೆ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್‌ರ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 138 ರನ್‌ಗಳಿಗೆ ಆಲೌಟ್ ಆಗಿ 74 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು.